
ಕಾಕ್ರೋಚ್ ಜನತಾ ಪಕ್ಷ (CJP) ಪ್ರತಿಭಟನೆಯ ಸಮಯದಲ್ಲಿ ಹೆಚ್ಚಾಗಿ ಕೇಳಿಬರ್ತಿರೋ ಶಬ್ದ ಎಂದರೆ ಝೀರೋ ಎಫ್‌ಐಆರ್. ಸಾಮಾನ್ಯವಾಗಿ FIR ಎಂದರೆ First Information Report ಅರ್ಥಾತ್ ಪ್ರಥಮ ಮಾಹಿತಿ ವರದಿ. ಯಾರದ್ದಾದರೂ ವಿರುದ್ಧ ದೂರು ದಾಖಲಾದ ತಕ್ಷಣ FIR ದಾಖಲು ಮಾಡಲಾಗುತ್ತದೆ. ಆದರೆ ಪ್ರತಿಭಟನೆಯ ಸಮಯದಲ್ಲಿ, ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದವಳ ಮೇಲೆ ದೂರು ದಾಖಲಾದರೆ ಝೀರೋ ಎಫ್‌ಐಆರ್ ದಾಖಲು ಮಾಡಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಹಾಗಿದ್ದರೆ ಏನಿದು Zero FIR?
ದೇಶದ ಕಾನೂನು ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ಇದನ್ನು ಜಾರಿಗೆ ತರಲಾಗಿದೆ. 2012 ರ ನಿರ್ಭಯಾ ಸಾಮೂಹಿಕ ಅ*ತ್ಯಾಚಾರ ಪ್ರಕರಣದ ನಂತರ ರಚಿಸಲಾದ ನ್ಯಾಯಮೂರ್ತಿ ವರ್ಮಾ ಸಮಿತಿಯ ಶಿಫಾರಸುಗಳ ನಂತರ ಶೂನ್ಯ ಎಫ್‌ಐಆರ್ ಅನ್ನು ಪರಿಚಯಿಸಲಾಯಿತು. ಅದಕ್ಕೂ ಮುನ್ನ, ಒಂದು ಅಪರಾಧಿಕ ಘಟನೆ ನಡೆದಾಗ ಆಯಾ ಪ್ರದೇಶದ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಯಲ್ಲಿ ಮಾತ್ರ ನಿಯಮಿತ ಸಂಖ್ಯೆಯೊಂದಿಗೆ FIR ದಾಖಲಿಸಬೇಕಾಗಿತ್ತು. ಆದರೆ ಈ ಕಾನೂನು ತಂದ ಬಳಿಕ, ಅಪರಾಧ ನಡೆದ ಸ್ಥಳವು ಬೇರೆಡೆ ಇದ್ದರೂ, ಸಂತ್ರಸ್ತರು ಬೇರೆ ಯಾವುದೋ ಊರಿನಲ್ಲಿದ್ದರೂ ಅವರು ತಮ್ಮ ಹತ್ತಿರದ ಯಾವುದೇ ಪೊಲೀಸ್ ಠಾಣೆಗೆ ಹೋಗಿ ತಕ್ಷಣವೇ ದೂರು ದಾಖಲಿಸಬಹುದು. ಇದರ ಅರ್ಥ ದೂರು ದಾಖಲು ಮಾಡಲು ಘಟನೆ ನಡೆದ ವ್ಯಾಪ್ತಿಯದ್ದೇ ಪೊಲೀಸ್ ಠಾಣೆಗೆ ಹೋಗಬೇಕೆಂದೇನೂ ಇಲ್ಲ. ಇಂತಹ ಸಂದರ್ಭದಲ್ಲಿ ಪೊಲೀಸರು ತಮ್ಮ ಅಧಿಕಾರ ವ್ಯಾಪ್ತಿಯನ್ನು ನೋಡದೆ, ಈ ದೂರಿಗೆ ಯಾವುದೇ ಸಂಖ್ಯೆಯನ್ನು ನೀಡದೆಯೇ ದೂರನ್ನು ದಾಖಲಿಸಿಕೊಳ್ಳುತ್ತಾರೆ. ಅಪರಾಧ ನಡೆದ ಘಟನೆ ಬೇರೆ ಪೊಲೀಸ್ ಠಾಣೆಯ ವ್ಯಾಪ್ತಿಯದ್ದು ಆಗಿರುವ ಕಾರಣ, ಅಲ್ಲಿ ಸಂಖ್ಯೆ ನೀಡದ ಕಾರಣ, ಇದನ್ನೇ ‘ಝೀರೋ ಎಫ್‌ಐಆರ್’ ಎನ್ನುತ್ತಾರೆ.
ದೂರು ಸ್ವೀಕರಿಸಿದ ಪೊಲೀಸರು ತಕ್ಷಣವೇ ಪ್ರಾಥಮಿಕ ತನಿಖೆ ಅಥವಾ ವೈದ್ಯಕೀಯ ನೆರವನ್ನು ಒದಗಿಸುತ್ತಾರೆ. ದೂರು ದಾಖಲಿಸಿಕೊಂಡ ನಂತರ, ಆ ಪೊಲೀಸ್ ಠಾಣೆಯು 15 ದಿನಗಳ ಒಳಗಾಗಿ ಇಡೀ ಪ್ರಕರಣದ ದಾಖಲೆಗಳನ್ನು ಅಪರಾಧ ನಡೆದ ಮೂಲ ನ್ಯಾಯವ್ಯಾಪ್ತಿಯ ಪೊಲೀಸ್ ಠಾಣೆಗೆ ವರ್ಗಾಯಿಸಬೇಕಾಗುತ್ತದೆ. ಅಲ್ಲಿ ಆ ಪ್ರಕರಣಕ್ಕೆ ನಿಯಮಿತ ಎಫ್‌ಐಆರ್ ಸಂಖ್ಯೆಯನ್ನು ನೀಡಿ ಮುಂದಿನ ಸಮಗ್ರ ತನಿಖೆ ನಡೆಸಲಾಗುತ್ತದೆ. ಸಾಮಾನ್ಯ ಎಫ್‌ಐಆರ್‌ನಂತೆಯೇ ಝೀರೋ ಎಫ್‌ಐಆರ್ ದಾಖಲಿಸಿದ ನಂತರವೂ ಸಂತ್ರಸ್ತರಿಗೆ ಉಚಿತವಾಗಿ ಎಫ್‌ಐಆರ್ ಪ್ರತಿಯನ್ನು ನೀಡಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ, ಹಲವು ಬ್ರಿಟಿಷ್ ಕಾಲದ ಕಾನೂನುಗಳಿಗೆ ತಿದ್ದುಪಡಿ ಮಾಡಿ, ಭಾರತೀಯ ನ್ಯಾಯ ಸಂಹಿತೆ (BNS), ಭಾರತೀಯ ನಾಗರಿಕ ರಕ್ಷಣಾ ಸಂಹಿತೆ (BNSS) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ (BSA) ಗಳನ್ನು ಪರಿಚಯಿಸಿತು. ಇದು ಬ್ರಿಟಿಷರ ಕಾಲದ ಹಳೆಯ ಐಪಿಸಿ (IPC) ಮತ್ತು ಸಿಆರ್‌ಪಿಸಿ (CrPC) ಬದಲಿಗೆ ರೂಪುಗೊಂಡಿತು. ಆ ಸಮಯದಲ್ಲಿ ಈ Zero FIR ಅನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS), 2023 ರ ಸೆಕ್ಷನ್ 173 ರ ಅಡಿಯಲ್ಲಿ ಶಾಸನಬದ್ಧ ಕಾನೂನಾಗಿ ಔಪಚಾರಿಕವಾಗಿ ಕ್ರೋಡೀಕರಿಸಿತು. ಹೆಚ್ಚುವರಿಯಾಗಿ, ಕೇಂದ್ರ ಸರ್ಕಾರವು, ಇತ್ತೀಚೆಗೆ ಸೈಬರ್ ಹಣಕಾಸು ವಂಚನೆ ದೂರುಗಳನ್ನು ವೇಗವಾಗಿ ಪತ್ತೆಹಚ್ಚುವ ಗುರಿಯನ್ನು ಹೊಂದಿರುವ ವಿಶೇಷ ಇ-ಶೂನ್ಯ FIR ವ್ಯವಸ್ಥೆಯನ್ನು ಪರಿಚಯಿಸಿದೆ.
ಆದ್ದರಿಂದ ಅಪರಾಧ ಘಟನೆ ನಡೆದಾಗ ಪೊಲೀಸರು ಇದು ನನ್ನ ವ್ಯಾಪ್ತಿಗೆ ಬರಲ್ಲ, ಅಲ್ಲಿ ಹೋಗಿ ಇಲ್ಲಿ ಹೋಗಿ ಎಂದು ಸಬೂಬು ಹೇಳುವ ಹಾಗಿಲ್ಲ. ಈ ಹಿಂದೆ, ಈ ಕಾನೂನು ಇಲ್ಲದ ಕಾರಣ, ಎಷ್ಟೋ ಮಂದಿ ದೂರು ಕೊಡುವ ಬದಲು ಸುಮ್ಮನಿರುವುದೇ ಒಳಿತು ಎಂದುಕೊಳ್ಳುತ್ತಿದ್ದರು. ಈ ವ್ಯವಸ್ಥೆಯನ್ನು ಬದಲಾಯಿಸಲು ಬಂದಿರುವುದು ಶೂನ್ಯ ಎಫ್‌ಐಆರ್. ಈ ಕಾನೂನಿನ ಪ್ರಕಾ ದೇಶದ ಯಾವುದೇ ಮೂಲೆಯಲ್ಲಿ ಅಪರಾಧ ನಡೆದಿದ್ದರೂ ಸಂತ್ರಸ್ತರು ತಮಗಿರುವ ಅನುಕೂಲಕರ ಪೊಲೀಸ್ ಠಾಣೆಯಲ್ಲೇ ದೂರು ದಾಖಲಿಸಬಹುದು. ಈಗ ಇದನ್ನು ದಾಖಲಿಸಲು ಆನ್‌ಲೈನ್ ಅವಕಾಶವನ್ನೂ ಕಲ್ಪಿಸಲಾಗಿದೆ. ಇದರೊಂದಿಗೆ, ಎಸ್‌ಎಂಎಸ್ ಮೂಲಕ ಸಮನ್ಸ್ ಕಳುಹಿಸುವುದು ಮತ್ತು ಅಪರಾಧದ ಸ್ಥಳದಲ್ಲಿ ಕಡ್ಡಾಯವಾಗಿ ವೀಡಿಯೊಗ್ರಫಿ ಮಾಡುವಂತಹ ಅತ್ಯಾಧುನಿಕ ತಂತ್ರಜ್ಞಾನ ಆಧರಿತ ನಿಬಂಧನೆಗಳನ್ನು ಅಳವಡಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.