
ಅಪನಗದೀಕರಣ ಘೋಷಣೆ ಹೊಸ ವಿದ್ಯಮಾನವೇನೂ ಅಲ್ಲ. ಈ ಮುನ್ನ ವಿಶ್ವದ ಹಲವು ದೇಶಗಳು ಅಧಿಕ ಮೌಲ್ಯದ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದು ಹೊಸ ನೋಟುಗಳನ್ನು ಜಾರಿ ಮಾಡಿದ್ದವು. ಕೆಲವು ದೇಶಗಳು ಇದರಲ್ಲಿ ಯಶಸ್ವಿಯಾಗಿದ್ದರೆ ಇನ್ನೂ ಕೆಲ ದೇಶಗಳು ಕೈಸುಟ್ಟು ಕೊಂಡಿವೆ. ಇದರ ಸಂಕ್ಷಿಪ್ತ ವಿವರಗಳು ಇಲ್ಲಿವೆ.
ಅಪನಗದೀಕರಣ ಘೋಷಿಸಿ ಕೈಸುಟ್ಟುಕೊಂಡ ನೈಜೀರಿಯಾ:
1984ರಲ್ಲಿ ನೈಜೀರಿಯಾದ ಮುಹಮ್ಮದು ಬುಹಾರಿ ನೇತೃತ್ವದ ಮಿಲಿಟರಿ ಸರ್ಕಾರ ಭ್ರಷ್ಟಾಚಾರವನ್ನು ಮಟ್ಟಹಾಕುವ ಸಲುವಾಗಿ ಹಳೆಯ ನೋಟುಗಳನ್ನು ರದ್ದುಗೊಳಿಸಿ ಹೊಸ ನೋಟುಗಳನ್ನು ಜಾರಿಗೊಳಿಸಿತ್ತು. ಆದರೆ, ಸಾಲದ ಸುಳಿಗೆ ಸಿಲುಕಿದ್ದ ಮತ್ತು ಬೆಲೆಏರಿಕೆಯ ಹೊಡೆತವನ್ನು ಅನುಭವಿಸುತ್ತಿದ್ದ ದೇಶಕ್ಕೆ ಅಪನಗದೀಕರಣವನ್ನು ಅರಗಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ನೈಜೀರಿಯಾದ ಆರ್ಥಿಕತೆ ಸಂಪೂರ್ಣವಾಗಿ ಕುಸಿಯಿತು. ಹೊಸ ನೋಟುಗಳನ್ನು ಜಾರಿಗೊಳಿಸಿದ್ದರಿಂದ ದೇಶದ ಆರ್ಥಿಕ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.
ನೂರು ಟ್ರಿಲಿಯನ್ ಡಾಲರ್ ರದ್ದು ಮಾಡಿದ ಜಿಂಬಾಬ್ವೆ:
ಜಿಂಬಾಬ್ವೆಯಲ್ಲಿ 10,00,00,00,00,00,000(100 ಲಕ್ಷ ಕೋಟಿ) ಡಾಲರ್'ನ ನೋಟನ್ನು ಬಳಸಲಾಗುತ್ತಿತ್ತು. ಅಂದರೆ, ಒಂದುನೂರು ಟ್ರಿಲಿಯನ್ ಡಾಲರ್! ಆದರೆ ಈ ಹಣದಿಂದ ಬಸ್ ಟಿಕೆಟ್ ಕೂಡ ಕೊಳ್ಳಲು ಆಗುತ್ತಿರಲಿಲ್ಲ. ಹಣದುಬ್ಬರದ ಪರಿಣಾಮವಾಗಿ ಜಿಂಬಾಬ್ವೆ ನೋಟು ಎಷ್ಟೊಂದು ಮೌಲ್ಯ ಕಳೆದುಕೊಂಡಿತ್ತೆಂದರೆ ಜನರಿಂದ ಅಪಹಾಸ್ಯಕ್ಕೀಡಾಗಿತ್ತು. ಹಣದುಬ್ಬರವನ್ನು ಹತೋಟಿಗೆ ತರುವ ಸಲುವಾಗಿ ಅಧ್ಯಕ್ಷ ರಾಬರ್ಟ್ ಮಗಾಬೆ 2015ರಲ್ಲಿ ಅಪನಗದೀಕರಣ ಅಸ್ತ್ರವನ್ನು ಪ್ರಯೋಗಿಸಿದರು. ನೋಟು ರದ್ದತಿಯ ಬಳಿಕ ನೂರು ಟ್ರಿಲಿಯನ್ ಡಾಲರ್'ನ ಮೌಲ್ಯ ಕೇವಲ 0.5 ಡಾಲರ್'ಗೆ ಇಳಿಯಿತು.
ಹರಿಯದ ಪ್ಲಾಸ್ಟಿಕ್ ನೋಟ್ ಜಾರಿಗೊಳಿಸಿದ ಆಸ್ಟ್ರೇಲಿಯಾ:
1996ರಲ್ಲಿ ಆಸ್ಟ್ರೇಲಿಯಾ ತನ್ನಲ್ಲಿರುವ ಪೇಪರ್ ನೋಟುಗಳನ್ನು ಪ್ಲಾಸ್ಟಿಕ್ ನೋಟುಗಳಿಂದ ಬದಲಾಯಿಸಲು ನಿರ್ಧರಿಸಿತು. ಎಲ್ಲಾ ಕಾಗದದ ನೋಟುಗಳನ್ನು ವಾಪಸ್ ಪಡೆದು ಹೆಚ್ಚು ಬಾಳಿಕೆ ಬರುವ ಮತ್ತು ನಕಲು ಮಾಡಲು ಸಾಧ್ಯವಾಗದ ಪ್ಲಾಸ್ಟಿಕ್ ನೋಟುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ ಬಿಡುಗಡೆ ಮಾಡಿತು. ನೋಟು ರದ್ದು ಮಾಡಿದ್ದರ ಉದ್ದೇಶ ನೋಟಿನ ವಿನ್ಯಾಸವನ್ನು ಬದಲಿಸಿ ಹೊಸ ನೋಟು ಬಿಡುಗಡೆ ಮಾಡುವುದಕ್ಕಾಗಿದ್ದರಿಂದ ದೇಶದ ಆರ್ಥಿಕತೆಯ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾ ಗಲಿಲ್ಲ. ಪ್ಲಾಸ್ಟಿಕ್'ನೋಟು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಿದ ಮೊದಲ ದೇಶ ಎನಿಸಿಕೊಂಡಿತು.
ಘಾನಾದಲ್ಲಿ ನೋಟು ರದ್ದು ಮಾಡಿದ್ದಕ್ಕೆ ದಂಗೆ ಎದ್ದ ಜನ:
ತೆರಿಗೆಗಳ್ಳತನ ಮತ್ತು ಹೆಚ್ಚುವರಿ ಹಣದ ಹರಿವಿಗೆ ಕಡಿವಾಣ ಹಾಕುವ ಸಲುವಾಗಿ ಘಾನಾ ದೇಶ 1982ರಲ್ಲಿ ಅಪನಗದೀಕರಣ ಘೋಷಣೆ ಮಾಡಿತು. 50 ಸೆಡಿಸ್ ಮೌಲ್ಯದ ನೋಟುಗಳನ್ನು ರದ್ದುಗೊಳಿಸಿತು. ಸರ್ಕಾರ ಏಕಾಏಕಿ ಅಪನಗದೀಕರಣ ಘೋಷಣೆ ಮಾಡಿದ್ದನ್ನು ಜನರು ಬೆಂಬಲಿಸಲಿಲ್ಲ. ಸರ್ಕಾರಿ ಕಟ್ಟಡಗಳು ಮತ್ತು ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸಿದರು. ಇದರಿಂದ ದೇಶದ ಆರ್ಥಿಕತೆ ಅಪಾರ ನಷ್ಟ ಉಂಟಾಯಿತು.
ಉತ್ತರ ಕೊರಿಯಾ ನೋಟ್ ಬ್ಯಾನ್'ನಿಂದ ಜನರು ಬೀದಿಗೆ:
ಉತ್ತರ ಕೊರಿಯಾ ಸರ್ಕಾರ 2010ರಲ್ಲಿ ಅಪನಗದೀಕರಣ ಘೋಷಿಸಿತು. ಇದರ ಪರಿಣಾಮವಾಗಿ ಜನರು ಬೀದಿಗೆ ಬಿದ್ದರು. ಮನೆ ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಬೇಕಾಗಿ ಬಂತು. ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ 2 ಅಧಿಕ ಮೌಲ್ಯದ ಹಳೆಯ ನೋಟುಗಳ ಎರಡು ಸೊನ್ನೆಗಳನ್ನು ತೆಗೆಸಿ ನೋಟಿನ ಮೌಲ್ಯವನ್ನು ತಗ್ಗಿಸಿದರು. ಕಾಳ ದಂಧೆಕೋರರನ್ನು ಮಟ್ಟಹಾಕುವುದು ಕಿಮ್ ಜಾಂಗ್ ಉದ್ದೇಶವಾಗಿತ್ತು. ಆದರೆ, ಜನ ಸಾಮಾನ್ಯರು ಸಂಕಷ್ಟಕ್ಕೀಡಾದರು.
ನೋಟು ರದ್ದುಮಾಡಿ ನಷ್ಟ ಅನುಭವಿಸಿದ ಮ್ಯಾನ್ಮಾರ್:
ಮ್ಯಾನ್ಮಾರ್ ಸೇನಾಡಳಿತ 1987ರಲ್ಲಿ ಚಲಾವಣೆಯಲ್ಲಿರುವ ಶೇ.80ರಷ್ಟು ಮೌಲ್ಯದ ನೋಟು ನಿಷೇಧಿಸಿತು. ಕಾಳಸಂತೆ ಮಟ್ಟಹಾಕುವ ಉದ್ದೇಶದಿಂದ ಅಪನಗದೀಕರಣ ಘೋಷಣೆ ಮಾಡಲಾಯಿತು. ಆದರೆ, ವಿಷಾದದ ಸಂಗತಿಯೆಂದರೆ ಈ ನಿರ್ಧಾ ಆರ್ಥಿಕ ಹಿಂಜರಿಕೆ ಕಾರಣವಾಯಿತು. ಜನರು ಸರ್ಕಾರದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ನಡೆಸಿದರು. ಹಲವಾರು ಮಂದಿ ಸಾವನ್ನಪ್ಪಿದರು.
epaperkannadaprabha.com
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.