
ಬೆಂಗಳೂರು(ನ. 08): ಎಲ್ಲಾ ಸಮಾಜ ಮತ್ತು ವರ್ಗಗಳ ದಾರ್ಶನಿಕರು ಮತ್ತು ವೀರರ ಜಯಂತಿ ಆಚರಿಸುವುದು ಸರಕಾರದ ಉದ್ದೇಶವೆಂದು ಸಾರಿದ್ದ ಸಿಎಂ ಸಿದ್ದರಾಮಯ್ಯ ಇದೀಗ ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಮಹಾಯೋಗಿ ವೇಮನ ಜಯಂತಿ ಆಚರಣೆ ಮಾಡಲು ಸರಕಾರ ನಿರ್ಧರಿಸಿದೆ. ರಾಜ್ಯಾದ್ಯಂತ ಎಲ್ಲಾ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ನ.19ರಂದು ವೇಮನ ಜಯಂತಿಯನ್ನು ಆಚರಿಸಲಾಗುತ್ತದೆ. ವೇಮನ ಜಯಂತಿ ಆಚರಣೆ ಮಾಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೆ.2ರಂದು ಸರಕಾರ ಸುತ್ತೋಲೆ ರವಾನಿಸಿದೆ. ಇದೇ ವೇಳೆ, ಮಹಾಯೋಗಿ ವೇಮನ ಜಯಂತಿ ಆಚರಣೆಗೆ ಸರಕಾರ ಸದ್ಯಕ್ಕೆ 69 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜಯಂತಿ ಆಚರಣೆಯ ಜವಾಬ್ದಾರಿ ಹೊತ್ತುಕೊಂಡಿದೆ.
ಹೇಮರೆಡ್ಡಿ ಮಲ್ಲಮ್ಮನ ಮೈದುನ ವೇಮನ:
ಆಂಧ್ರದ ನೆಲ್ಲೂರಿನಲ್ಲಿ 1652ರಲ್ಲಿ ಜನಿಸಿದ ಯೋಗಿ ವೇಮನ ಅವರ ಪೂರ್ತಿ ಹೆಸರು ಗೋನ ವೇಮ ಬುದ್ಧ ರೆಡ್ಡಿ. 17ನೇ ಶತಮಾನದ ತೆಲುಗು ದಾರ್ಶನಿಕ ಕವಿ ಈತ. ಕನ್ನಡದಲ್ಲಿ ಸರ್ವಜ್ಞರಿದ್ದಂತೆ, ತೆಲುಗಿನಲ್ಲಿ ವೇಮನ. ಯೋಗ ವಿಚಾರದಲ್ಲಿ ಇವರಿಗೆ ಅಪಾರ ಪಾಂಡಿತ್ಯವಿತ್ತು. ತೆಲುಗಿನ ಆಡುನುಡಿಗಳಲ್ಲೇ ರಚಿಸುತ್ತಿದ್ದ ಈತ ಕವಿತೆಗಳು ಬಹಳ ಜನಪ್ರಿಯವಾಗಿವೆ. ಉತ್ತರ ಕರ್ನಾಟಕದ ದಂತಕಥೆ ಹೇಮರೆಡ್ಡಿ ಮಲ್ಲಮ್ಮನವರ ಮೈದುನನೀತನೆನ್ನಲಾಗಿದೆ. ಆರಂಭದಲ್ಲಿ ದುಷ್ಚಟಗಳ ದಾಸನಾಗಿದ್ದ ವೇಮನ ಅವರು ಮಲ್ಲಮ್ಮನವರಿಂದಾಗಿ ಜ್ಞಾನಿಯಾಗಿ ಬದಲಾದರೆನ್ನಲಾಗಿದೆ.
ಯೋಗಿ ವೇಮನ ಅವರು ವೀರಶೈವ ಲಿಂಗಾಯತದ ಜಂಗಮ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕೆಲ ಸಂಶೋಧಕರು ವೇಮನರನ್ನು ರೈತ ಸಮುದಾಯಕ್ಕೆ ಸೇರಿದವರೆಂದು ಹೇಳಿದರೆ, ಕೆಲವರು ಈತ ಕೊಂಗವೀಡು ಸಂಸ್ಥಾನದ ರಾಜ ಗದ್ದಮ್ ವೇಮ ಅವರ ಕಿರಿಯ ಪುತ್ರನೆಂದು ಹೇಳುತ್ತಾರೆ. ಆಂಧ್ರದ ಅನಂತಪುರ ಜಿಲ್ಲೆಯ ಕದಿರಿ ಪಲ್ಲಿಯಲ್ಲಿ ಯೋಗಿ ವೇಮನ ಅವರ ಸಮಾಧಿ ಇದೆ.
ರೆಡ್ಡಿ ಸಮುದಾಯದ ಮತದ ಮೇಲೆ ಸರಕಾರದ ಕಣ್ಣು?
ಯೋಗಿ ವೇಮನ ಅವರು ರೆಡ್ಡಿ ಲಿಂಗಾಯತ ಸಮುದಾಯದವರೆನ್ನಲಾಗಿದೆ. ಉತ್ತರ ಕರ್ನಾಟಕದಲ್ಲಿ ರೆಡ್ಡಿ ಸಮುದಾಯ ಸಾಕಷ್ಟು ಇದ್ದು, ಎಲ್ಲಾ ಪಕ್ಷಗಳಿಗೂ ಇವರ ಬೆಂಬಲ ಹಂಚಿಹೋಗಿದೆ. ಇವರ ಮತಗಳು ಧ್ರುವೀಕರಣಗೊಂಡರೆ ಚುನಾವಣೆಯಲ್ಲಿ ಬಹಳ ಮುಖ್ಯಪಾತ್ರ ವಹಿಸಲಿವೆ. ಈ ಹಿನ್ನೆಲೆಯಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್ ಮತ್ತು ಬಸವರಾಜರಾಯರೆಡ್ಡಿ ಅವರ ಒತ್ತಡಕ್ಕೆ ಮಣಿದು ವೇಮನ ಜಯಂತಿ ಆಚರಣೆ ಮಾಡಲು ಸಿಎಂ ನಿರ್ಧರಿಸಿದರೆನ್ನಲಾಗಿದೆ. ರೆಡ್ಡಿ ಸಮುದಾಯವನ್ನು ತನ್ನತ್ತ ಸೆಳೆಯುವುದು ಇದರ ಹಿಂದಿನ ತಂತ್ರ ಎಂದು ವಿಶ್ಲೇಷಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.