
ಬೆಂಗಳೂರು (ಸೆ. 04): ರಾಜ್ಯದ ಜನರು ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಸಮ್ಮಿಶ್ರ ಸರ್ಕಾರಕ್ಕೆ ತಮ್ಮ ಸಂಪೂರ್ಣ ಸಹಮತವಿದೆ ಎಂಬ ಸ್ಪಷ್ಟಸಂದೇಶವನ್ನು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಬಳಿಕ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಅಸ್ತಿತ್ವದ ಕುರಿತು ಅನುಮಾನಿಸುವ ವಿರೋಧ ಪಕ್ಷದ ಬಿಜೆಪಿ ನಾಯಕರಿಗೆ ಸ್ಥಳೀಯ ಸಂಸ್ಥೆಗಳ ಫಲಿತಾಂಶವೇ ಉತ್ತರವಾಗಿದೆ ಎಂದರು.
ನಮ್ಮ ಸರ್ಕಾರದ ರೈತರ ಸಾಲ ಮನ್ನಾ ಸೇರಿದಂತೆ ಎಲ್ಲಾ ವಿಚಾರಗಳಿಗೆ ಜನರು ಬೆಂಬಲಿಸಿದ್ದಾರೆ. ವಿಪಕ್ಷಗಳು ಸರ್ಕಾರದ ಅಸ್ತಿತ್ವದ ಕುರಿತು ಅಪಪ್ರಚಾರ ನಡೆಸಿದರೂ ನಮ್ಮನ್ನು ಬೆಂಬಲಿಸಿದ ಮತದಾರರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಪರವಾಗಿ ಗೌರವಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹರ್ಷ ವ್ಯಕ್ತಪಡಿಸಿದರು.
ಚುನಾವಣೆ ಪ್ರಾರಂಭದಲ್ಲೇ ಮೈತ್ರಿ ಸರ್ಕಾರದ ಉಭಯ ಪಕ್ಷಗಳ ರಾಜ್ಯಮಟ್ಟದ ನಾಯಕರು ಸ್ಥಳೀಯ ಚುನಾವಣೆಯನ್ನು ಸ್ಥಳೀಯ ನಾಯಕರ ಜವಾಬ್ದಾರಿಗೆ ಬಿಡುವ ಒಮ್ಮತದ ನಿರ್ಧಾರಕ್ಕೆ ಬಂದಿದ್ದೆವು. ಅದರಂತೆ ಎರಡೂ ಪಕ್ಷಗಳು ದೊಡ್ಡ ಮಟ್ಟದ ಚುನಾವಣಾ ಪ್ರಚಾರ ನಡೆಸಲಿಲ್ಲ. ಆದರೆ ಬಿಜೆಪಿಯವರು ಜಿಲ್ಲಾವಾರು ಸಮಿತಿ ರಚಿಸಿ ಅಬ್ಬರದ ಚುನಾವಣೆ ನಡೆಸಿದ್ದರು. ಆದಾಗ್ಯೂ ಚುನಾವಣಾ ಫಲಿತಾಂಶವು ನಮ್ಮ ಪರವಾಗಿ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಅತಂತ್ರ ಫಲಿತಾಂಶ ಬಂದಿರುವ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳಲಿವೆ. ಯಾವುದೇ ಕಾರಣಕ್ಕೂ ಬಿಜೆಪಿಗೆ ಅಧಿಕಾರ ಬಿಟ್ಟು ಕೊಡುವುದಿಲ್ಲ. ಈಗಾಗಲೇ ಈ ಸಂಬಂಧ ಸ್ಥಳೀಯ ಘಟಕಗಳಿಗೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಮೊದಲಿನಿಂದಲೂ ನಗರ ಪ್ರದೇಶಗಳ ಮತದಾರರು ಬಿಜೆಪಿ ಪರ ಒಲವುಳ್ಳವರು ಎನ್ನಲಾಗುತ್ತದೆ. ಆದರೆ ಇಂದಿನ ಸ್ಥಳೀಯ ಚುನಾವಣಾ ಫಲಿತಾಂಶವನ್ನು ಪರಾಮರ್ಶಿಸಿದರೆ ನಗರ ಪ್ರದೇಶದಲ್ಲಿ ಸಹ ಬಿಜೆಪಿ ಬಲ ಕಳೆದುಕೊಳ್ಳುತ್ತಿದೆ ಎಂಬುದನ್ನು ರಾಜಕೀಯ ವಿಶ್ಲೇಷಕರು ಒಪ್ಪಬಹುದು. ರಾಜ್ಯದಲ್ಲಿ ಲೋಕಸಭಾ ಚುನಾವಣೆಯನ್ನು ಹೊಂದಾಣಿಕೆಯೊಂದಿಗೆ ಎದುರಿಸಿ ಕ್ಲೀನ್ ಸ್ವೀಪ್ ಮಾಡಲು ಈಗಿನಿಂದಲೇ ತಯಾರಿ ನಡೆಸುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.