ಬಿಜೆಪಿ ಬೆದರಿಕೆ ಹಾಕಿತ್ತು, ರಕ್ಷಣೆಗೆ ಇಲ್ಲಿಗೆ ಬಂದಿದ್ದೇವೆ: ಗುಜರಾತ್ ಕೈ ಶಾಸಕರ ಹೇಳಿಕೆ

By Suvarna Web DeskFirst Published Jul 31, 2017, 10:15 AM IST
Highlights

ನಾವೆಲ್ಲರು ಹಣಕ್ಕೆ ಮಾರಾಟ ಆಗುವವರಲ್ಲ ಎನ್ನುವ ಕಾರಣಕ್ಕೆ ಅಪಹರಣ, ತನಿಖಾ ದಳದಿಂದ ದಾಳಿ ನಡೆಸುವ ಬೆದರಿಕೆಗಳು ಬರುತ್ತಿದ್ದವು. ಪ್ರಜಾತಂತ್ರದ ರಕ್ಷಣೆ ಹಾಗೂ ನಮ್ಮ ಸುರಕ್ಷತೆ ದೃಷ್ಟಿಯಿಂದ ನಾವು ಅನಿವಾರ್ಯವಾಗಿ ಕರ್ನಾಟಕಕ್ಕೆ ಬಂದಿದ್ದೇವೆ ಎಂದು ಗುಜರಾತ್‌ನ ಅಬ್ದಾಸ ಕ್ಷೇತ್ರದ ಶಾಸಕ ಶಕ್ತಿ ಸಿನ್ಹಾ ಗೋಹಿಲ್ ಹೇಳಿದರು.

ಬೆಂಗಳೂರು(ಜು.31): ನಾವೆಲ್ಲರು ಹಣಕ್ಕೆ ಮಾರಾಟ ಆಗುವವರಲ್ಲ ಎನ್ನುವ ಕಾರಣಕ್ಕೆ ಅಪಹರಣ, ತನಿಖಾ ದಳದಿಂದ ದಾಳಿ ನಡೆಸುವ ಬೆದರಿಕೆಗಳು ಬರುತ್ತಿದ್ದವು. ಪ್ರಜಾತಂತ್ರದ ರಕ್ಷಣೆ ಹಾಗೂ ನಮ್ಮ ಸುರಕ್ಷತೆ ದೃಷ್ಟಿಯಿಂದ ನಾವು ಅನಿವಾರ್ಯವಾಗಿ ಕರ್ನಾಟಕಕ್ಕೆ ಬಂದಿದ್ದೇವೆ ಎಂದು ಗುಜರಾತ್‌ನ ಅಬ್ದಾಸ ಕ್ಷೇತ್ರದ ಶಾಸಕ ಶಕ್ತಿ ಸಿನ್ಹಾ ಗೋಹಿಲ್ ಹೇಳಿದರು.

ಬಿಡದಿ ಬಳಿಯ ಈಗಲ್‌'ಟನ್ ರೆಸಾರ್ಟ್‌ನಲ್ಲಿ ತಂಗಿರುವ ಶಾಸಕರ ಮಧ್ಯೆಯೆ ಒಡಕು ಸೃಷ್ಟಿಯಾಗಿದೆ ಎಂಬ ಸುದ್ದಿಗಳು ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ಹಿನ್ನೆಲೆಯಲ್ಲಿ ಗುಜರಾತ್ ಕಾಂಗ್ರೆಸ್‌ನ ಎಲ್ಲ 44 ಶಾಸಕರ ಉಪಸ್ಥಿತಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದರು. ನಾವೆಲ್ಲ ಒಂದಾಗಿದ್ದೇವೆ, ಸ್ವಇಚ್ಛೆಯಿಂದ ಇಲ್ಲಿಗೆ ಬಂದಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

Latest Videos

ಕಾಂಗ್ರೆಸ್ ಶಾಸಕರೆಲ್ಲರೂ ಸ್ವಯಂ ನಿರ್ಧಾರದಿಂದಲೇ ಇಲ್ಲಿಗೆ ಬಂದಿದ್ದೇವೆ. ನಾವೆಲ್ಲರೂ ಒಗ್ಗಟ್ಟಾಗಿದ್ದು, ಯಾವುದೇ ಭಿನ್ನಾಭಿಪ್ರಾಯವಾಗಲಿ, ಒಡಕಾಗಲಿ ನಮ್ಮ ನಡುವೆ ಇಲ್ಲ. ಎಲ್ಲರ ಬಳಿ ಮೊಬೈಲ್‌ಗಳಿವೆ. ಕ್ಷೇತ್ರದ ಜನರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಗೋಹಿಲ್ ತಿಳಿಸಿದರು.

‘‘ರಾಜ್ಯಸಭೆ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂದು ಹೊರಟಿರುವ ಬಿಜೆಪಿ ಇದಕ್ಕಾಗಿ ಬೇರೆ ಬೇರೆ ಮಾರ್ಗಗಳನ್ನು ಅನುಸರಿಸುತ್ತಿದೆ. ಇದಕ್ಕಾಗಿ ಗುಜರಾತ್‌ನ ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರಿಗೆ ೧೫ ಕೋಟಿಯಷ್ಟು ಹಣದ ಆಮಿಷವೊಡ್ಡುವ, ಒಪ್ಪದಿದ್ದರೆ ತೋಳ್ಬಲ ಪ್ರದರ್ಶಿಸಿ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಬಗ್ಗದ ಶಾಸಕರ ಮೇಲೆ ಐಟಿ, ಸಿಬಿಐ ದಾಳಿ ಮಾಡಿಸುವುದಾಗಿ ಹೇಳುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ನಮಗೆ ರಕ್ಷಣೆ ಸಿಗುತ್ತದೆ ಎಂಬ ಕಾರಣಕ್ಕೆ ಇಲ್ಲಿಗೆ ಬಂದಿದ್ದೇವೆ. ನಾವು ಇಲ್ಲಿದ್ದುಕೊಂಡೇ ಪ್ರಜಾತಂತ್ರ ಉಳಿಸಲು ಸತ್ಯಕ್ಕಾಗಿ ಹೋರಾಟ ನಡೆಸುತ್ತೇವೆ’’ ಎಂದು ಸಿನ್ಹಾ ಹೇಳಿದರು.

ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಎನ್‌ಸಿಪಿ ಮತ್ತು ಜೆಡಿಯು ಸೇರಿ 60 ಶಾಸಕರ ಬೆಂಬಲ ಇತ್ತು. ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಹಮದ್ ಪಟೇಲ್ ಗೆಲುವಿಗೆ 45 ಮತಗಳು ಬೇಕು. ಅಹ್ಮದ್ ಪಟೇಲ್‌ರನ್ನು ಸೋಲಿಸಲು ಬಿಜೆಪಿ ನಮ್ಮ ಪಕ್ಷದ ಶಾಸಕರ ಕುದುರೆ ವ್ಯಾಪಾರಕ್ಕೆ ಕೈ ಹಾಕಿದೆ. ನಾಲ್ಕು ವರ್ಷಗಳಲ್ಲಿ ಕಾಂಗ್ರೆಸ್ ಶಾಸಕರಿಂದ ಬಿಜೆಪಿಗೆ ಯಾವುದೇ ತೊಂದರೆ ಆಗಿರಲಿಲ್ಲ. ನಮ್ಮ ಪಕ್ಷ ಅಥವಾ ವರಿಷ್ಠರ ಬಗ್ಗೆ ವಿರೋಧವೂ ಇರಲಿಲ್ಲ. ಈಗ ರಾಜ್ಯಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಶಾಸಕರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವ, ತನಿಖಾ ದಳದಿಂದ ದಾಳಿ ನಡೆಸುವ ಬೆದರಿಕೆ ಹಾಕಲಾಗುತ್ತಿದೆ.

ರಾಜ್ಯಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ನ 22 ಶಾಸಕರಿಂದ ರಾಜಿನಾಮೆ ಪಡೆದು ಪಕ್ಷವನ್ನು ಮುಗಿಸಬೇಕು. ಕಾಂಗ್ರೆಸ್ ಅಭ್ಯರ್ಥಿ ಚುನಾವಣೆಗೆ ಸ್ಪರ್ಧಿಸದಂತೆಯೇ ತಡೆಯಬೇಕು ಎಂಬುದು ಬಿಜೆಪಿ ಹುನ್ನಾರ. ಇದಕ್ಕಾಗಿ ಆರು ಶಾಸಕರಿಂದ ರಾಜಿನಾಮೆ ಕೊಡಿಸಿದರು. ಅವರ ರಾಜಿನಾಮೆ ಅಂಗೀಕಾರವಾಗಿಲ್ಲ. ಹಣ ಅಥವಾ ತನಿಖಾ ದಳದ ದಾಳಿಗೆ ಹೆದರಿ ರಾಜಿನಾಮೆ ಸಲ್ಲಿಸಿದ್ದ ಶಾಸಕರು ಇದೀಗ ನಮ್ಮ ಸಂಪರ್ಕದಲ್ಲಿದ್ದಾರೆ. ಅವರೆಲ್ಲರೂ ಚುನಾವಣೆ ದಿನ ಆತ್ಮಸಾಕ್ಷಿಗೆ ಬದ್ಧವಾಗಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸುವ ಮೂಲಕ ಪಕ್ಷ ನಿಷ್ಠೆ ಮೆರೆಯುತ್ತಾರೆಂಬ ವಿಶ್ವಾಸವಿದೆ ಎಂದು ಸಿನ್ಹಾ ಹೇಳಿದರು.

25ರ ಸಭೆಯಲ್ಲಿ 53 ಶಾಸಕರಿದ್ದರು: ಜು.25ರಂದು ಅಹಮದ್ ಪಟೇಲ್ ಅವರು ಶಾಸಕರ ಸಭೆ ನಡೆಸಿದ್ದರು. ಆ ಸಭೆಯಲ್ಲಿ 53 ಶಾಸಕರು ಭಾಗವಹಿಸಿದ್ದೆವು. ಗೆಲ್ಲಲೇಬೇಕು ಎನ್ನುವುದಾಗಿದ್ದರೆ ಅದೇ ದಿನ ಶಾಸಕರನ್ನು ಕರ್ನಾಟಕಕ್ಕೆ ಕರೆತರುತ್ತಿದ್ದರು. ಆದರೆ, ಅಹಮದ್ ಪಟೇಲ್ ಅಂಥ ಕೆಲಸ ಮಾಡದೆ ಎಲ್ಲರಿಗೂ ಕ್ಷೇತ್ರಗಳಿಗೆ ವಾಪಸ್ಸಾಗಿ ಜನರ ಮಧ್ಯೆ ಇರುವಂತೆ ಸೂಚನೆ ನೀಡಿದ್ದರು. ನಂತರ ಗುಜರಾತ್‌ನಲ್ಲಿ ಕಾಂಗ್ರೆಸ್ ಶಾಸಕರ ಮೇಲೆ ಹಣಬಲ, ತೋಳ್ಬಲ ಪ್ರದರ್ಶನಗಳು ನಡೆದವು. ಇದಕ್ಕೆ ಬಗ್ಗದ ಶಾಸಕರ ವಿರುದ್ಧ ಸುಳ್ಳು ಮೊಕದ್ದಮೆಗಳು ದಾಖಲಾದವು ಎಂದು ಸಿನ್ಹಾ ಅವರು ತಾವು ಕರ್ನಾಟಕಕ್ಕೆ ಆಗಮಿಸಿರುವ ಉದ್ದೇಶವನ್ನು ವಿವರಿಸಿದರು.

ಗುಜರಾತ್‌ನಲ್ಲಿ ಪ್ರವಾಹ ಬಂದಿರುವುದು ನಮಗೂ ಗೊತ್ತು. ನಾವು ಜು.26ರಂದು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳನ್ನು ಭೇಟಿಯಾಗಿ ಪ್ರವಾಹದಿಂದ ಉಂಟಾಗಿರುವ ಸಮಸ್ಯೆಗಳನ್ನು ವಿವರಿಸಿದ್ದೇವೆ. ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಕೈಲಾದ ಪರಿಹಾರ ನೀಡಿದ್ದೇವೆ. ಈ ಕೆಲಸವನ್ನು ಬಿಜೆಪಿಯ ಯಾವ ನಾಯಕರೂ ಮಾಡಲಿಲ್ಲ. ಬಿಜೆಪಿ ಸರ್ಕಾರ ಪ್ರವಾಹ ಪರಿಸ್ಥಿತಿ ನಿಭಾಯಿಸುವ ಬದಲು ಕಾಂಗ್ರೆಸ್ ಶಾಸಕರ ಖರೀದಿಯಲ್ಲಿ ತೊಡಗಿದೆ. ಸತ್ಯಯಾವುದೇ ಪ್ರಶ್ನೆಗಳಿಗೆ ಹೆದರುವುದಿಲ್ಲ ಎಂಬುದನ್ನು ಬಿಜೆಪಿ ನಾಯಕರು ಅರಿತುಕೊಳ್ಳಬೇಕು ಎಂದು ಹೇಳಿದರು.

click me!