‘ವೀರಶೈವ ಮತ್ತು ಲಿಂಗಾಯತ ಬೇರೆಯಲ್ಲ; ಲಿಂಗಾಯತ ಪ್ರತ್ಯೇಕ ಧ್ವನಿಯನ್ನು ನಾವು ಒಪ್ಪುವುದಿಲ್ಲ‘

By Suvarna Web DeskFirst Published Aug 2, 2017, 10:06 PM IST
Highlights

ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಅಲ್ಲ. ವೀರಶೈವ ಲಿಂಗಾಯತ ಒಂದೇ ಧರ್ಮ. ಈ ಧರ್ಮದ ಘೋಷಣೆ ಮಾಡಬೇಕೆಂಬ ಬೇಡಿಕೆ ಅಚಲವಾದುದು. ಲಿಂಗಾಯತ ಪ್ರತ್ಯೇಕ ಧ್ವನಿಯನ್ನು ನಾವು ಒಪ್ಪುವುದಿಲ್ಲ. ಲಿಂಗಾಯತರು ಬೇರೆ ಎನ್ನುವವರನ್ನು ಕರೆದು ಮಾತನಾಡುತ್ತೇವೆ. ಇಂಡಿಯಾ-ಭಾರತ ಎಂಬಂತೆ ವೀರಶೈವ-ಲಿಂಗಾಯತ ಕೂಡ ಒಂದೇ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಸ್ಪಷ್ಟಪಡಿಸಿದೆ.

ಬೆಂಗಳೂರು (ಆ.02): ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಅಲ್ಲ. ವೀರಶೈವ ಲಿಂಗಾಯತ ಒಂದೇ ಧರ್ಮ. ಈ ಧರ್ಮದ ಘೋಷಣೆ ಮಾಡಬೇಕೆಂಬ ಬೇಡಿಕೆ ಅಚಲವಾದುದು. ಲಿಂಗಾಯತ ಪ್ರತ್ಯೇಕ ಧ್ವನಿಯನ್ನು ನಾವು ಒಪ್ಪುವುದಿಲ್ಲ. ಲಿಂಗಾಯತರು ಬೇರೆ ಎನ್ನುವವರನ್ನು ಕರೆದು ಮಾತನಾಡುತ್ತೇವೆ. ಇಂಡಿಯಾ-ಭಾರತ ಎಂಬಂತೆ ವೀರಶೈವ-ಲಿಂಗಾಯತ ಕೂಡ ಒಂದೇ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಸ್ಪಷ್ಟಪಡಿಸಿದೆ.


ಸದಾಶಿವ ನಗರದಲ್ಲಿರುವ ಅಖಿಲ ಭಾರತ ವೀರಶೈವ ಮಹಾಸಭಾದ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ಮಹಾಸಭಾದ ಕಾರ್ಯಕಾರಿ ಸದಸ್ಯರು ಮತ್ತು ಜಿಲ್ಲಾ ಅಧ್ಯಕ್ಷರ ತುರ್ತು ಸಭೆಯ ಬಳಿಕ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮತ್ತು ಮಹಾಪ್ರಧಾನ ಕಾರ್ಯದರ್ಶಿ, ಪೌರಾಡಳಿತ ಸಚಿವ ಈಶ್ವರ್ ಖಂಡ್ರೆ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.


‘‘ವೀರಶೈವ ಲಿಂಗಾಯತರು ಶತಮಾನಗಳಿಂದ ಒಂದೇ ಸಂಸ್ಕೃತಿ, ಪೂಜೆ, ಪುನಸ್ಕಾರ, ಆಚರಣೆ, ವೈವಾಹಿಕ ಸಂಬಂಧಗಳನ್ನು ಪಾಲಿಸಿಕೊಂಡು ಬಂದಿದ್ದಾರೆ. ಈಗ ಲಿಂಗಾಯತ ಪ್ರತ್ಯೇಕ ಧರ್ಮ ಬೇಕು ಎನ್ನುವವರು ಹಿಂದೆ ಎರಡೂ ಒಂದೇ ಎನ್ನುತ್ತಲೇ ಬಂದವರು. ಈಗ ೧೫ ದಿನಗಳಲ್ಲಿ ಕೆಲವರ ಧ್ವನಿ ಬದಲಾಗಿದೆ. ಅದು ಸರಿಯಲ್ಲ. ಎಲ್ಲರೂ ಸೇರಿ ಒಂದಾಗಿ ಹೋಗಬೇಕು. ಅಂದಾಗ ಮಾತ್ರ ಸಮಾಜ ಉಳಿಯಲು ಸಾಧ್ಯ. ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಎಂಬುದರಲ್ಲಿ ಎರಡು ಮಾತಿಲ್ಲ. ಆ ಬೇಡಿಕೆ ಈಡೇರಿಕೆಗೆ ಒಂದಾಗಿ ಹೋರಾಡಬೇಕೆಂಬುದೇ ಮಹಾಸಭಾದ ಆಶಯವಾಗಿದೆ’’ ಎಂದು ಅಧ್ಯಕ್ಷ ಶಾಮನೂರು ಹೇಳಿದರು.  ಶತಮಾನಗಳ ಕಾಲದಿಂದ ವೀರಶೈವ ಮಹಾಸಭಾ ಸಮಾಜದ ಒಳಿತಿಗಾಗಿ ಉಳಿದೆಲ್ಲ ಸಮಾಜಗಳೊಂದಿಗೆ ಸೌಹಾರ್ದಯುತ ಸಂಬಂಧ ಇಟ್ಟುಕೊಂಡು ಬಂದಿದೆ. ಗುರು-ವಿರಕ್ತರು ಒಂದಾಗಿ ಕೆಲಸ ಮಾಡಿದ್ದರಿಂದಲೇ ಶತಮಾನಗಳಿಂದ ಮಹಾಸಭಾ ವೀರಶೈವ ಲಿಂಗಾಯತ ಸಮುದಾಯದ ಪ್ರಗತಿಗಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ೨೦೦೩ರಲ್ಲಿ ಕೂಡಲಸಂಗಮದಲ್ಲಿ ನಡೆದ ಐತಿಹಾಸಿಕ ವೀರಶೈವ ಲಿಂಗಾಯತ ಸಮಾವೇಶದಲ್ಲಿ ಪಂಚಪೀಠಾಧೀಶರು ಸೇರಿದಂತೆ ರಾಜ್ಯದ ೮೫೦ಕ್ಕೂ ಅಧಿಕ ಶಿವಾಚಾರ್ಯರು, ಸ್ವಾಮೀಜಿಗಳು ಪಾಲ್ಗೊಂಡಿದ್ದರು. ಎಲ್ಲರೂ ಸೇರಿ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಬೇಕೆಂಬ ಬೇಡಿಕೆ ಮಂಡಿಸಿದ್ದರು. ಇವತ್ತು ಲಿಂಗಾಯತ ಧರ್ಮ ಪ್ರತ್ಯೇಕ ಎಂದು ವಾದ ಮಾಡುತ್ತಿರುವ ಮಠಾಧೀಶರು ಕೂಡ ಅಂದು ವೀರಶೈವ ಲಿಂಗಾಯತ ಒಂದೇ ಎಂಬ ಅಭಿಪ್ರಾಯಕ್ಕೆ ಒಪ್ಪಿಗೆ ಸೂಚಿಸಿದ್ದರು. ಹೀಗಾಗಿ ಮತ್ತೊಮ್ಮೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜದ ಹಿತದೃಷ್ಟಿಯಿಂದ ಏಕಾಭಿಪ್ರಾಯ ರೂಪಿಸಲು ಮಹಾಸಭಾ ಶೀಘ್ರ ಸಭೆ ನಡೆಸಲಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಮಹಾಸಭಾ ತುರ್ತು ಸಭೆಯಲ್ಲಿ ಪಂಚ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದ್ದು, ಯಾರನ್ನೂ ಕಡೆಗಣಿಸುವ ಅಥವಾ ನೋವುಂಟು ಮಾಡುವ ಉದ್ದೇಶ ಮಹಾಸಭಾಕ್ಕೆ ಇಲ್ಲ. ಎಲ್ಲರೂ ಒಂದಾಗಿ ಹೋಗಬೇಕೆಂಬುದೇ ಮಹಾಸಭಾದ ಗುರಿಯಾಗಿದೆ ಎಂದರು.

ಒಂದಾಗಲು ಬರದಿದ್ದರೆ ಬಿಡುತ್ತೇವೆ; ಶಾಮನೂರು
ಗುರು-ವಿರಕ್ತರು ಒಂದಾಗಿ ಸಮಾಜದ ಎಲ್ಲ ಉಪ ಪಂಗಡಗಳು ಏಕತೆಯಿಂದ ಬಾಳಬೇಕು ಎಂಬುದು ಮಹಾಸಭಾದ ಆಶಯ. ವೀರಶೈವ ಲಿಂಗಾಯತರು ಬೇರೆ ಬೇರೆ ಅಲ್ಲ. ಏನೇ ಭಿನ್ನಾಭಿಪ್ರಾಯ ಇದ್ದರೂ ಎಲ್ಲರೂ ಕರೆಸಿ ಮಾತನಾಡುತ್ತೇವೆ. ಗುರುಗಳಾಗಲಿ, ವಿರಕ್ತರಾಗಲಿ, ಪಂಚಾಚಾರ್ಯರಾಗಲಿ, ಬಸವಣ್ಣನ ಅನುಯಾಯಿಗಳಾಗಲಿ. ಎಲ್ಲರೂ ಒಂದೇ. ಮಹಾಸಭಾ ಕೂಡ ಎಲ್ಲರನ್ನೂ ಸಮಾನವಾಗಿಯೇ ಗೌರವಿಸುತ್ತ ಬಂದಿದೆ. ಇಷ್ಟೆಲ್ಲ ಆದ ಮೇಲೂ ಯಾರಾದರೂ ಮಹಾಸಭಾದ ಕರೆಗೆ ಸ್ಪಂದಿಸದಿದ್ದರೆ ಅವರನ್ನು ಅಲ್ಲಿಯೇ ಬಿಟ್ಟು ಮುಂದೆ ಹೋಗುತ್ತೇವೆ. ಇನ್ನೇನು ಮಾಡಲು ಸಾಧ್ಯ ಎಂದು ಪ್ರಶ್ನೆಯೊಂದಕ್ಕೆ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯೆ ನೀಡಿದರು. ಲಿಂಗಾಯತ ಪ್ರತ್ಯೇಕ ಧರ್ಮ ಎಂಬ ಸಚಿವ ಎಂ.ಬಿ.ಪಾಟೀಲ್ ಅವರ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ ಅವರು, ಎಂ.ಬಿ.ಪಾಟೀಲರು ಪತ್ರಿಕೆ ಮತ್ತು ಟಿವಿಗಳಲ್ಲಿ ಹೇಳಿಕೆ ನೀಡಿದ್ದನ್ನು ನೋಡಿದ್ದೇನೆ. ಆದರೆ ಅವರು ನನಗೆ ಪತ್ರ ಬರೆದಿಲ್ಲ. ನನ್ನ ಕೈಗೆ ಯಾವುದೇ ಪತ್ರ ಬಂದು ತಲುಪಿಲ್ಲ. ಅವರಿಗೆ ತಪ್ಪು ಕಲ್ಪನೆ ಆಗಿದೆ. ಅವರ ಜೊತೆಯೂ ಮಾತನಾಡುತ್ತೇವೆ ಎಂದು ತಿಳಿಸಿದರು.

click me!