
ದಾವಣಗೆರೆ (ಮೇ. 30): ಕೇಂದ್ರದ ಪ್ಯಾರಾ ಮಿಲಿಟರಿ ಪಡೆಯಲ್ಲಿ 21 ವರ್ಷ ಸೇವೆ ಸಲ್ಲಿಸಿದ್ದ ಮಾಜಿ ಯೋಧನಿಗೆ ಜಮೀನು, ನಿವೇಶನ ನೀಡಬೇಕಾದ ಆಡಳಿತ ಯಂತ್ರವೇ ಕಳೆದ 16 ವರ್ಷದಿಂದ ಕಚೇರಿಯಿಂದ ಕಚೇರಿಗೆ ಅಲೆದಾಡಿಸುವ ಮೂಲಕ ಅಸಡ್ಡೆ ತೋರುತ್ತಿವೆ.
ಜಗಳೂರು ತಾಲೂಕು ಭರಮಸಮುದ್ರ ಗ್ರಾಮದ ಬಿ.ಎನ್.ಪ್ರಹ್ಲಾದ ರೆಡ್ದಿ ಸೆಂಟ್ರಲ್ ಪ್ಯಾರಾ ಮಿಲಿಟರಿ ಪಡೆಯಲ್ಲಿ 21 ವರ್ಷ ಕಾಲ ಸೇವೆ ಸಲ್ಲಿಸಿದವರು. 2011ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದರು.
ಇಂತಹ ಮಾಜಿ ಯೋಧರ ಜೀವನಾಧಾರಕ್ಕೆಂದು ಜಮೀನು ಮತ್ತು ನಿವೇಶನ ನೀಡಬೇಕೆಂಬ ಸರ್ಕಾರದ ಮಾರ್ಗಸೂಚಿಯೇ ಇದ್ದರೂ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಯಂತ್ರ ಮಾತ್ರ ಒಂದೂವರೆ ದಶಕದಿಂದಲೂ ಮಾಜಿ ಯೋಧನ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ.
ಭರಮಸಮುದ್ರ ಸ.ನಂ.24ರಲ್ಲಿ ಸರ್ಕಾರಿ ಸೇಂದಿವನ ಇದ್ದು, ಅದರಲ್ಲೇ 5 ಎಕರೆ ಜಮೀನು ಮಂಜೂರು ಮಾಡಲು ಹಾಗೂ ಜಗಳೂರು ಪಪಂ ವ್ಯಾಪ್ತಿಯಲ್ಲಿ 30-40 ಅಳತೆ ನಿವೇಶನ ಕೋರಿ ಮಾಜಿ ಯೋಧ ಪ್ರಹ್ಲಾದ ರೆಡ್ಡಿ 2003ರಲ್ಲಿ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದರು. ಆಗಿನಿಂದಲೂ ಪ್ರಹ್ಲಾದ ರೆಡ್ಡಿ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾರೆ.
ಬಳ್ಳಾರಿ ಖಾಸಗಿ ಕಂಪನಿಯೊಂದರಲ್ಲಿ ಸೇಫ್ಟಿ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಪ್ರಹ್ಲಾದ ರೆಡ್ಡಿ ಬಳ್ಳಾರಿಯಿಂದ ಜಗಳೂರು, ಹರಪನಹಳ್ಳಿ, ದಾವಣಗೆರೆಯಲ್ಲಿ ಕಚೇರಿಯಿಂದ ಕಚೇರಿಗೆ ಅಲೆಯುತ್ತಲೇ ಇದ್ದಾರೆ. ಪ್ರಧಾನಿ, ರಾಷ್ಟ್ರಪತಿ, ಕೇಂದ್ರ ರಕ್ಷಣಾ ಸಚಿವರ ಕಚೇರಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿದಲೂ ಡೀಸಿ ಕಚೇರಿಗೆ ನಿರ್ದೇಶನ ಬಂದಿದೆ. ಆದರೂ ಪ್ರಯೋಜನವಾಗಿರಲಿಲ್ಲ.
ಸಿಎಂ ಕಚೇರಿಯಿಂದ ಜಮೀನು ನೀಡುವಂತೆ ಆದೇಶ ಬರುತ್ತಲೇ ಹಿಂದಿನ ತಹಸೀಲ್ದಾರ್ ಶ್ರೀಧರಮೂರ್ತಿ 4.05 ಎಕರೆ ಜಮೀನು ಮಂಜೂರು ಮಾಡಲು ಉಪ ವಿಭಾಗಾಧಿಕಾರಿ ಕಚೇರಿಗೆ ವರದಿ ಕಳಿಸಿದ್ದರು. ಎಸಿ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಕಡತ ತಲುಪಿತು.
ಹಿಂದಿನ ಡೀಸಿ ಡಿ.ಎಸ್.ರಮೇಶ್ ದಾಖಲಾತಿ ಪರಿಶೀಲಿಸಿ, ಜಮೀನು ಮಂಜೂರು ಮಾಡುವಂತೆ ಎಡಿಸಿಗೆ ಮೌಖಿಕ ಆದೇಶ ಹೊರಡಿಸಿದ್ದರು. ಆದರೂ ಯೋಧನಿಗೆ ಮಾತ್ರ ಜಮೀನು, ನಿವೇಶನ ಯಾವುದೂ ಸಿಕ್ಕಿಲ್ಲ.
ಮಾಜಿ ಯೋಧ ಪ್ರಹ್ಲಾದ ರೆಡ್ಡಿಗೆ ಸಿಗಬೇಕಾದ ಜಮೀನು, ನಿವೇಶನ ಕೊಡಿಸಲು ಬದ್ಧವಾಗಿದ್ದೇನೆ. ಸದ್ಯಕ್ಕೆ ಬೆಂಗಳೂರಿನಲ್ಲಿದ್ದು, ದಾವಣಗೆರೆ, ಜಗಳೂರಿಗೆ ಮರಳುತ್ತಿದ್ದಂತೆಯೇ ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಮಾಜಿ ಯೋಧನೆಗೆ ನಿವೇಶನ, ಜಮೀನು ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳುವೆ.
-ಎಸ್.ವಿ.ರಾಮಚಂದ್ರ, ಜಗಳೂರು ಶಾಸಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.