
ಬೆಂಗಳೂರು (ಮೇ. 30): ನಗರ ಪ್ರದೇಶಗಳಲ್ಲಿ ಕಟ್ಟಡ, ಲೇ ಔಟ್ ನಿರ್ಮಾಣ, ಭೂ ಪರಿವರ್ತನೆಗೆ ಅನುಮತಿಯನ್ನು ಪಡೆಯಲು ಹತ್ತಾರು ಇಲಾಖೆಗಳಲ್ಲಿ ಅಲೆದಾಡುವ ಕಿರಿಕಿರಿ ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ಇನ್ನು ಮುಂದೆ ಆನ್‌ಲೈನ್‌ನಲ್ಲಿ ಕಾಲಮಿತಿಯಲ್ಲಿ ಅನುಮತಿ ಪಡೆಯುವಂತಹ ಹೊಸ ವ್ಯವಸ್ಥೆಯನ್ನು ಶೀಘ್ರದಲ್ಲಿ ಜಾರಿಗೆ ತರಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಟ್ಟಡ ನಿರ್ಮಾಣ, ಲೇಔಟ್ ನಿರ್ಮಾಣಕ್ಕೆ ಅನುಮತಿ ಪಡೆಯಬೇಕಾದರೆ 16 ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕಾಗಿತ್ತು. ಎಲ್ಲ ದಾಖಲೆಗಳು ಸರಿ ಇದ್ದರೂ ಅರ್ಜಿ ತಿರಸ್ಕೃತವಾಗುತ್ತಿತ್ತು. ಇಲ್ಲವೇ ವಿಳಂಬ ಮಾಡಲಾಗುತ್ತಿತ್ತು.
ಇದಕ್ಕೆ ಬದಲಾಗಿ ದಾಖಲೆಗಳು ಸರಿ ಇಲ್ಲದಿದ್ದರೂ ಅನುಮತಿ ಸಿಗುವಂತಹ ವ್ಯವಸ್ಥೆ ಇತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಮಧ್ಯವರ್ತಿಗಳ ಹಾವಳಿ ಇರುತ್ತಿತ್ತು. ಇದಕ್ಕೆಲ್ಲ ಕಡಿವಾಣ ಹಾಕಲು ಆನ್‌ಲೈನ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದರು.
ಅರ್ಜಿದಾರರು ಆನ್‌ಲೈನ್‌ನಲ್ಲಿ ಕಟ್ಟಡದ ನಕ್ಷೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಈ ಅರ್ಜಿ ಆನ್‌ಲೈನ್‌ನಲ್ಲೇ ಸಂಬಂಧಪಟ್ಟಎಲ್ಲ ಇಲಾಖೆಗಳಿಗೆ ರವಾನೆಯಾಗಲಿವೆ. ನಂತರ ಸಂಬಂಧಪಟ್ಟಅಧಿಕಾರಿ ಕಾಲಮಿತಿಯಲ್ಲಿ ಅರ್ಜಿಯನ್ನು ಇತ್ಯರ್ಥ ಪಡಿಸಬೇಕಾಗುತ್ತದೆ. ಕಾಲ ಮಿತಿಯಲ್ಲಿ ಅರ್ಜಿ ಇತ್ಯರ್ಥವಾಗದಿದ್ದರೆ ಅಂತಹ ಅರ್ಜಿಗೆ ಅನುಮತಿ ನೀಡಲಾಗಿದೆ ಎಂದು ಪರಿಭಾವಿಸಲಾಗುವುದು ಎಂದು ಅವರು ವಿವರಿಸಿದರು.
ವಿಶೇಷವಾಗಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದೇ ಇದ್ದರೂ ಭೇಟಿ ನೀಡಿರುವುದಾಗಿ ದಾಖಲಿಸುತ್ತಿದ್ದರು. ಇದನ್ನು ತಪ್ಪಿಸಲು ಆನ್‌ಲೈನ್‌ನಲ್ಲಿ ಅರ್ಜಿದಾರರಿಗೆ ಸ್ಥಳ ಪರಿಶೀಲನೆಗೆ ಅಧಿಕಾರಿಗಳು ಯಾವಾಗ ಭೇಟಿ ನೀಡಲಿದ್ದಾರೆಂಬುದನ್ನು ಸಹ ತಿಳಿಸಲಾಗುವುದು.
ನಿಗದಿತ ದಿನದಂದು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕಾಗುತ್ತದೆ. ಮೊಬೈಲ್‌ನಲ್ಲಿ ಭೇಟಿಯ ಫೋಟೋವನ್ನು ಅಪ್ ಲೋಡ್ ಮಾಡುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಸಚಿವರು ತಿಳಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ವಿವಿಧ ಕೆಲಸಗಳು ವೇಗದಿಂದ ನಡೆಯುತ್ತಿವೆ. ಈಗಾಗಲೇ ಎರಡು ಸಾವಿರ ಕೋಟಿ ರು. ಮೊತ್ತದ ಕಾಮಗಾರಿ ಮುಗಿದಿದೆ. ಎರಡು ಸಾವಿರ ಕೋಟಿ ರು. ಮೊತ್ತದ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. 1500 ಕೋಟಿ ರು. ಮೊತ್ತದ ಕಾಮಗಾರಿ ಕೈಗೆತ್ತಿಕೊಳ್ಳುವುದು ಬಾಕಿ ಇದೆ ಎಂದು ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.