
ಪ್ರವಾಸಿಗರೇ ಕಾಶ್ಮೀರಕ್ಕೆ ಹೋಗಬೇಡಿ. ಕಾಶ್ಮೀರಿ ಯುವಕರು ಅಲ್ಲಿನ ಪ್ರವಾಸಿಗರ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ ಎಂಬ ಸಂದೇಶದೊಂದಿಗಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಪ್ರತಿಭಟನಾಕಾರರ ಗುಂಪೊಂದು ರಸ್ತೆಯಲ್ಲಿ ಕಾರೊಂದನ್ನು ಅಡ್ಡಗಟ್ಟಿ ಆಕ್ರಮಣಕ್ಕೆ ಮುಂದಾಗುವ ದೃಶ್ಯವಿದೆ. ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ‘ಈ ಘಟನೆ
ನಡೆದಿರುವುದು ಕಾಶ್ಮೀರದಲ್ಲಿ. ಕಣಿವೆಗೆ ಪ್ರವಾಸಕ್ಕೆಂದು ಬಂದಿದ್ದ ಪ್ರವಾಸಿಗರ ಮೇಲೆ ಪ್ರತಿಭಟನಾಕಾರ ಗುಂಪು ಆಕ್ರಮಣ ಮಾಡಿ ಹಲ್ಲೆ ಮಾಡಿದೆ’ ಎಂದು ಒಕ್ಕಣೆಯನ್ನು ಬರೆಯಲಾಗಿದೆ.
ಸದ್ಯ ಫೇಸ್‌ಬುಕ್ ವಾಟ್ಸ್‌ಆ್ಯಪ್‌ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಆದರೆ ನಿಜಕ್ಕೂ ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಹಲ್ಲೆ ನಡೆಸಲಾಗಿತ್ತೇ , ಈ ವಿಡಿಯೋ ಕಾಶ್ಮೀರದ್ದೇ ಎಂದು ಹುಡುಕ ಹೊರಟಾಗ ಈ ವಿಡಿಯೋ ಸ್ವಿಡ್ಜರ್‌ಲ್ಯಾಂಡಿನದ್ದು ಎಂದು ಪತ್ತೆಯಾಗಿದೆ. ರಿವರ್ಸ್ ಸರ್ಚ್ ಗೂಗಲ್ ಇಮೇಜ್‌ನಲ್ಲಿ ಈ ವಿಡಿಯೋ ಕುರಿತು ಪರಿಶೀಲಿಸಿದಾಗ ಈ ಘಟನೆ ನಡೆದಿರುವುದು ಸ್ವಿಡ್ಜರ್‌ಲ್ಯಾಂಡ್‌ನ ಬಾಸೆಲ್ ನಗರದಲ್ಲಿ ಎಂಬುದು ಪತ್ತೆಯಾಗಿದೆ.
ಈ ಘಟನೆ ಸ್ವಿಡ್ಜರ್ ಲ್ಯಾಂಡಿನಲ್ಲಿ 2018 ಮೇ 19 ರಂದು ನಡೆದಿತ್ತು. ಈ ವಿಡಿಯೋವನ್ನು 2 ಲಕ್ಷಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದರು. ಈ ಹಿಂದೆ ಕೂಡ ಇದೇ ವಿಡಿಯೋವನ್ನು ಪ್ರಕಟಿಸಿ ಬರ್ಮಿಂಗ್‌ಹ್ಯಾಮ್‌ನಲ್ಲಿ ಈ ಘಟನೆ ನಡೆದಿದ್ದು, ಮುಸ್ಲಿಂ ಸಮುದಾಯದ ಒಂದು ಗುಂಪು ರಂಜಾನ್ ಉಪವಾಸ ಅಂತ್ಯಗೊಳಿಸುವ ಭಾಗವಾಗಿ ರಸ್ತೆಯಲ್ಲಿಯೇ ಊಟ ಮಾಡಬೇಕೆಂದು ಕಾರಿನ ಮೇಲೆ ಆಕ್ರಮಣ ಮಾಡಿದೆ ಎಂದು ಹೇಳಲಾಗಿತ್ತು. ಹಾಗಾಗಿ ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಅಲ್ಲಿನ ಯುವಕರ ಗುಂಪು ಹಲ್ಲೆ ಮಾಡುತ್ತಿದೆ ಎಂಬ ಒಕ್ಕಣೆಯೊಂದಿಗೆ ಹರಿದಾಡುತ್ತಿರುವ ಈ ವಿಡಿಯೋ ಸುಳ್ಳು.
-ಸಾಂದರ್ಭಿಕ ಚಿತ್ರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.