ಮನುಷ್ಯರನ್ನು ಕೊಂದು ಮಾಂಸ ಭಕ್ಷಿಸುತ್ತಿದ್ದಾರೆ ರೋಹಿಂಗ್ಯಾಗಳು?

By Web DeskFirst Published Dec 20, 2018, 9:18 AM IST
Highlights

ಸಾಮಾಜಿಕ ಜಾಲತಾಣಗಳಲ್ಲಿ ರೋಹಿಂಗ್ಯಾಗಳು ಮನುಷ್ಯರನ್ನು ಕೊಂದು ತಿನ್ನುತ್ತಿದ್ದಾರೆಂಬ ಸಂದೆಶವೊಂದು ಹರಿದಾಡಲಾರಮಭಿಸಿದೆ. ಹಾಗಾದ್ರೆ ಇದು ನಿಜನಾ? ರೋಹಿಂಗ್ಯಾಗಳು ನಿಜಕ್ಕೂ ಮನುಷ್ಯರ ಮಾಂಸ ತಿನ್ನುತ್ತಾರಾ ಎಂದು ಹುಟುಕಾಡಿದಾಗ ಕಂಡು ಬಂದ ವಾಸ್ತವ ಇಲ್ಲಿದೆ.

ರೋಹಿಂಗ್ಯಾಗಳು ಹಿಂದುಗಳನ್ನು ಕೊಂದು ನರಮಾಂಸವನ್ನೇ ಭಕ್ಷಿಸುತ್ತಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದೈನಿಕ ಭಾರತ್ ಹೆಸರಿನ ನಕಲಿ ವೆಬ್‌ಸೈಟ್ ಮನುಷ್ಯರು ಸತ್ತ ಶವಗಳೊಂದಿಗೆ ಇರುವ ಫೋಟೋವನ್ನು ಪೋಸ್ಟ್ ಮಾಡಿ, ‘ರೋಹಿಂಗ್ಯಾಗಳು ಹಿಂದುಗಳನ್ನೇ ಕೊಂದು ನರ ಮಾಂಸ ಭಕ್ಷಿಸುತ್ತಿದ್ದಾರೆ. ಹರಿಯಾಣದ ಮೇವಾಟ್ನಲ್ಲಿ ಇಂಥದ್ದೊಂದು ಪ್ರಕರಣ ದಾಖಲಾಗಿದೆ. ಇದು ನಿಜಕ್ಕೂ ಭಯ ಮೂಡಿಸುತ್ತದೆ’ ಎಂದು ಬರೆಯಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ವೈರಲ್ ಆಗಿದೆ. ಆಜ್‌ತಾಕ್ ಗುರ್‌ಗಾಂವ್ ಎಂಬ ಹೆಸರಿನ ವೆಬ್ ಜಾಲತಾಣದಲ್ಲಿಯೂ ‘ಹಿಂದುಗಳನ್ನು ಕೊಂದು ಅವರನ್ನೇ ಭಕ್ಷ್ಯಿಸುತ್ತಿರುವುದು ಮೇವಾಟ್‌ನಲ್ಲಿ ಪತ್ತೆಯಾಗಿದೆ’ ಎಂದು ಬರೆಯಲಾಗಿದೆ. ಮತ್ತೆ ಕೆಲವರು ‘ಹರಿಯಾಣದಲ್ಲಿರುವ ಮಿನಿ ಪಾಕಿಸ್ತಾನ’ ಎಂದು ಬರೆದು ಈ ಫೋಟೋವನ್ನು ಶೇರ್ ಮಾಡಿದ್ದಾರೆ. 

ಆದರೆ ನಿಜಕ್ಕೂ ರೋಹಿಂಗ್ಯಾಗಳು ಹರಿಯಾಣದಲ್ಲಿ ಹಿಂದುಗಳನ್ನು ಹತ್ಯೆ ಮಾಡಿ ನರಮಾಂಸ ಭಕ್ಷಣೆ ಮಾಡುತ್ತಿದ್ದರೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂದು ದೃಢವಾಗಿದೆ. ಆಲ್ಟ್‌ನ್ಯೂಸ್ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಈ ಚಿತ್ರದ ಜಾಡು ಹಿಡಿದು ಪರಿಶೀಲಿಸಿದಾಗ 2009ಲ್ಲಿ ಬ್ಲಾಗ್‌ವೊಂದರಲ್ಲಿ ಈ ಬಗ್ಗೆ ಬರೆದ ಲೇಖನ ಪತ್ತೆಯಾಗಿದೆ. ಅದರಲ್ಲಿ ‘ಈ ಚಿತ್ರಗಳು ಟಿಬೆಟಿಯನ್ ಸಂಪ್ರದಾಯದ ಅಂತಿಮ ಸಂಸ್ಕಾರಕ್ಕೆ ಸಂಬಂಧಿಸಿದ ಫೋಟೋಗಳು.  ಟಿಬೆಟಿಯನ್ನರು ಮೃತದೇಹವನ್ನು ವನ್ಯ ಜೀವಿಗಳಿಗೆ ಆಹಾರವಾಗಿ ನೀಡುತ್ತಾರೆ’ ಎಂದಿದೆ. 

ಯುಟ್ಯೂಬ್‌ನಲ್ಲಿ ಈ ಕುರಿತ ವಿಡಿಯೋವೂ ಇದ್ದು ಅದರಲ್ಲಿ ಸತ್ತ ಮನುಷ್ಯರ ದೇಹದ ಭಾಗಗಳನ್ನು ಕತ್ತರಿಸಿ ರಣಹದ್ದು ಗಳಿಗೆ ಅರ್ಪಿಸುವ ದೃಶ್ಯವಿದೆ. ಹಾಗಾಗಿ ವೈರಲ್ ಆಗಿರುವ ಫೋಟೋವು ಟಿಬೆಟಿಯನ್ನರ ಅಂತಿಮ ಸಂಸ್ಕಾರಕ್ಕೆ ಸಂಬಂಧಿಸಿದ ಫೋಟೋವೇ ಹೊರತು ರೋಹಿಂಗ್ಯಾಗಳಿಗೆ ಸಂಬಂಧಿಸಿದ್ದಲ್ಲ ಎಂಬುದು ಸ್ಪಷ್ಟ.

click me!