ವೈರಲ್ ಚೆಕ್: ಇಮ್ರಾನ್ ಖಾನ್ ಜೊತೆ ಕುಳಿತು ಬಿರಿಯಾನಿ ತಿಂದ್ರಾ ರಾಹುಲ್ ಗಾಂಧಿ?

By Web DeskFirst Published May 4, 2019, 9:29 AM IST
Highlights

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರೊಟ್ಟಿಗೆ ಕುಳಿತು ಊಟ ಮಾಡುತ್ತಿರುವ ಫೋಟೋವೊಂದು ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ಧಿ? ಏನಿದರ ಸತ್ಯಾಸತ್ಯತೆ? 

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರೊಟ್ಟಿಗೆ ಕುಳಿತು ಊಟ ಮಾಡುತ್ತಿರುವ ಫೋಟೋವೊಂದು ವೈರಲ್‌ ಆಗುತ್ತಿದೆ. ಈ ಫೋಟೋದೊಂದಿಗೆ, ‘ಇಮ್ರಾನ್‌ ಖಾನ್‌ ಸರ್‌ ಅವರೊಟ್ಟಿಗೆ ಕುಳಿತು ಚಿಕನ್‌ ಬಿರಿಯಾನಿ ತಿನ್ನುತ್ತಿರುವವರು ಯಾರು?’ ಎಂದು ಒಕ್ಕಣೆ ಬರೆಯಲಾಗಿದೆ. ಇದೀಗ ಫೇಸ್‌ಬುಕ್‌ನಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಈ ಸುದ್ದಿಯ ಸತ್ಯಾಸತ್ಯ ಪರಿಶೀಲಿಸಲು ಕ್ವಿಂಟ್‌ ಸುದ್ದಿಸಂಸ್ಥೆಯು ‘ರಾಹುಲ್‌ ಗಾಂಧಿ’ ಮತ್ತು ‘ಇಮ್ರಾನ್‌ ಖಾನ್‌’ ಎಂಬ ಕೀ ವರ್ಡ್ಸ್ ಬಳಸಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಸುದ್ದಿ ನಿಜವೇ ಆಗಿದ್ದರೆ ಮಾಧ್ಯಮಗಳಲ್ಲಿ ವರದಿಯಾಗುತ್ತಿತ್ತು. ಆದರೆ ಈ ಕುರಿತ ಯಾವುದೇ ವರದಿಗಳು ಲಭ್ಯವಾಗಿಲ್ಲ.

ಈ ಹಿಂದೆ ಇದೇ ಫೋಟೋದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಫೋಟೋವನ್ನು ಫೋಟೋಶಾಪ್‌ ಮೂಲಕ ಸಂಕಲಿಸಿ ಜಾಲತಾಣಗಳಲ್ಲಿ ಹರಡಲಾಗಿತ್ತು. ಈಗ ನರೇಂದ್ರ ಮೋದಿ ಅವರಿದ್ದ ಜಾಗದಲ್ಲಿ ರಾಹುಲ್‌ ಗಾಂಧಿ ಫೋಟೋವನ್ನು ಜೋಡಿಸಲಾಗಿದೆ. ಅಲ್ಲದೆ, ವೈರಲ್‌ ಆಗಿರುವ ಫೋಟೋದ ಮೂಲ ಪತ್ತೆಗಾಗಿ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ, ಮೂಲ ಚಿತ್ರ ಪತ್ತೆಯಾಗಿದೆ.

ಅದರಲ್ಲಿ ಇಮ್ರಾನ್‌ ಖಾನ್‌ ಅವರೊಟ್ಟಿಗೆ ಅವರ ಮಾಜಿ ಪತ್ನಿ ರೆಹಾಂ ಖಾನ್‌ ಇದ್ದಾರೆ. 2015ರಲ್ಲಿ ಜುಲೈ 5ರಂದು ಖಲೀದ್‌ ಖಿ ಎಂಬುವವರು ಈ ಫೋಟೋವನ್ನು ಟ್ವೀಟ್‌ ಮಾಡಿದ್ದರು. ಅದರೊಂದಿಗೆ ರೆಹಾಂ ಖಾನ್‌ ಇದ್ದ ಜಾಗದಲ್ಲಿ, 2017 ಅಗಸ್ಟ್‌ನಲ್ಲಿ ಬೆಂಗಳೂರಿನ ಜಯನಗರ ಇಂದಿರಾ ಕ್ಯಾಂಟೀನ್‌ನಲ್ಲಿ ರಾಹುಲ್‌ ಗಾಂಧಿ ಊಟ ಮಾಡಿದ್ದ ಪೋಟೋವನ್ನು ಜೋಡಿಸಿ ಸುಳ್ಳುಸುದ್ದಿ ಹರಡಲಾಗುತ್ತಿದೆ.

- ವೈರಲ್ ಚೆಕ್ 

click me!