ವೈರಲ್ ಚೆಕ್| ರೈತರ ಸಾಲಮನ್ನಾ: ಗೆದ್ದಾಕ್ಷಣ ಉಲ್ಟಾಹೊಡೆದ ರಾಹುಲ್‌ ಗಾಂಧಿ!?

By Web DeskFirst Published Dec 17, 2018, 10:20 AM IST
Highlights

ಚುನಾವಣೆಗೂ ಮೊದಲು ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ರಾಹುಲ್ ಗಾಂಧಿ ಗೆದ್ದಾಕ್ಷಣ ಉಲ್ಟಾಹೊಡೆದಿದ್ದಾರೆನ್ನುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಾಗಿದ್ದರೆ ನಿಜಕ್ಕೂ ರಾಹುಲ್ ಗಾಂಧಿ ಯೂ ಟರ್ನ್ ಹೊಡೆದಿದ್ದಾರಾ? ಈ ವಿಡಿಯೋ ಹಿಂದಿನ ಸತ್ಯವೇನು? ಇಲ್ಲಿದೆ ವಿವರ

ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಗೆದ್ದರೆ, ಸರ್ಕಾರ ರಚನೆಯಾದ 10 ದಿನಗಳಲ್ಲಿ ರೈತರ ಸಾಲಮನ್ನಾ ಮಾಡಲಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಚುನಾವಣಾ ಪ್ರಚಾರದಲ್ಲಿ ಘೋಷಿಸಿದ್ದರು. ಆದರೆ, ಡಿ.11ರಂದು ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಬಂದು, ಮೇಲಿನ ರಾಜ್ಯಗಳಲ್ಲಿ ಕಾಂಗ್ರೆಸ್‌ ಜಯ ಗಳಿಸಿದ ಮೇಲೆ ರಾಹುಲ್‌ ಪತ್ರಿಕಾಗೋಷ್ಠಿ ನಡೆಸಿ, ‘ರೈತರ ಸಮಸ್ಯೆಗೆ ಸಾಲ ಮನ್ನಾ ಪರಿಹಾರವಲ್ಲ’ ಎಂದಿದ್ದಾರೆ. ತನ್ಮೂಲಕ ಅವರು ಗೆದ್ದ ದಿನವೇ ಉಲ್ಟಾಹೊಡೆದಿದ್ದಾರೆ.

- Before & After Election !!

हाँ तो किसान भाइयों, राहुल गांधी आपका क़र्ज़ 10 दिन में माफ करने जा रहे हैं pic.twitter.com/2MxtRG1hPM

— Shobha Karandlaje (@ShobhaBJP)

ಹೀಗೊಂದು ಸಂದೇಶ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ. ‘ಪಿಎಂಒ ಇಂಡಿಯಾ: ರಿಪೋರ್ಟ್‌ ಕಾರ್ಡ್‌’ ಎಂಬ ಫೇಸ್‌ಬುಕ್‌ ಪೇಜು ಮೊದಲಿಗೆ ರಾಹುಲ್‌ ಮಧ್ಯಪ್ರದೇಶದ ಚುನಾವಣಾ ರಾರ‍ಯಲಿಯಲ್ಲಿ ಮಾಡಿದ್ದ ಘೋಷಣೆಯ ವಿಡಿಯೋ ಹಾಗೂ ನಂತರ ಡಿ.11ರಂದು ಮಾತನಾಡಿದ ವಿಡಿಯೋದ ತುಣುಕನ್ನು ಅಕ್ಕಪಕ್ಕ ಇರಿಸಿ ಪೋಸ್ಟ್‌ ಮಾಡಿ ‘ನೋಡಿ, ರಾಹುಲ್‌ ಗಾಂಧಿ ಹೇಗೆ ಉಲ್ಟಾಹೊಡೆದಿದ್ದಾರೆ’ ಎಂದು ಬರೆದಿದೆ. ಅದನ್ನು 3.4 ಲಕ್ಷ ಜನರು ನೋಡಿದ್ದು, 13 ಸಾವಿರಕ್ಕೂ ಹೆಚ್ಚು ಜನ ಶೇರ್‌ ಮಾಡಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವಾರು ಬಿಜೆಪಿ ನಾಯಕರೂ ಇದನ್ನು ಶೇರ್ ಮಾಡಿಕೊಂಡಿದ್ದಾರೆ.

ಆದರೆ, ರಾಹುಲ್‌ ಗಾಂಧಿ ಉಲ್ಟಾಹೊಡೆದಿದ್ದು ನಿಜವೇ ಎಂದು ಎರಡನೇ ವಿಡಿಯೋವನ್ನು ಪೂರ್ತಿ ನೋಡಿದಾಗ ಅದರಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ‘ಕಾಂಗ್ರೆಸ್‌ ಸರ್ಕಾರ ರಚನೆಯಾದ ತಕ್ಷಣ ನಾವು ಸಾಲಮನ್ನಾ ಪ್ರಕ್ರಿಯೆ ಆರಂಭಿಸುತ್ತೇವೆ’ ಎಂದು ಹೇಳಿರುವುದು ಗೋಚರಿಸುತ್ತದೆ.

ಆದರೆ, ರೈತರ ಸಮಸ್ಯೆಗೆ ಸಾಲಮನ್ನಾ ಪರಿಹಾರವಲ್ಲ ಎಂದು ಅದರ ಆಸುಪಾಸಿನಲ್ಲೇ ಅವರು ಹೇಳಿದ್ದನ್ನು ಮಾತ್ರ ಎಡಿಟ್‌ ಮಾಡಿ ವೈರಲ್‌ ಮಾಡಲಾಗಿದೆ. ಹೀಗಾಗಿ ಅವರು ಉಲ್ಟಾಹೊಡೆದಿದ್ದು ಸುಳ್ಳು.

click me!