ದಿಲ್ಲಿ, ಬೆಂಗಳೂರಲ್ಲಿ ಬಾಂಬ್ ಸ್ಫೋಟಿಸಲು ಉಗ್ರರ ಸಿದ್ಧತೆ?: ಇಲ್ಲಿದೆ ಸುದ್ದಿಯಾಚೆಗಿನ ಸತ್ಯ

By Web DeskFirst Published Jan 26, 2019, 9:50 AM IST
Highlights

ಜನನಿಬಿಡ ಪ್ರದೇಶಗಳಲ್ಲಿ ಉಗ್ರರು ಬಾಂಬ್ ಇಡುವ ಸಂಚು ರೂಪಿಸಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ದೆಹಲಿ ಪೊಲೀಸರು ಪ್ರಕಟಣೆ ನೀಡಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜಾನಾ? ಇಲ್ಲಿದೆ ವಿವರ

ದೆಹಲಿ ಮತ್ತು ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲಿ ಉಗ್ರರು ಬಾಂಬ್ ಇಡುವ ಸಂಚು ರೂಪಿಸಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ದೆಹಲಿ ಪೊಲೀಸರು ಪ್ರಕಟಣೆ ನೀಡಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೈರಲ್ ಆಗಿರುವ ಸಂದೇಶದಲ್ಲಿ ಹೀಗಿದೆ, ‘ ಲಷ್ಕರ್-ಎ-ತೊಯ್ಬಾ ಸಂಘಟನೆಯ 2 ಗುಂಪುಗಳು ಆತ್ಮಹತ್ಯಾ ಬಾಂಬ್ ದಾಳಿ ನಡೆಸುವ ಸಂಚು ರೂಪಿಸಿವೆ. ಹಾಗಾಗಿ ದೆಹಲಿಯ ಚಾಂದನಿಚೌಕ್ ಮುಂತಾದ ಜನನಿಬಿಡ ಸ್ಥಳಗಳಿಗೆ ತೆರಳದಂತೆ ನಿಮ್ಮ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ಎಚ್ಚರಿಕೆ ನೀಡಿ. ಬೆಂಗಳೂರಿನಲ್ಲೂ ಜನನಿಬಿಡ ಸ್ಥಳಗಳಿಗೆ ಹೋಗುವಾಗ ನಾಗರಿಕರು ಎಚ್ಚರಿಕೆಯಿಂದಿರಬೇಕು’ ಎಂದು ಅಂತಾರಾಷ್ಟ್ರೀಯ ಗುಪ್ತಚರ ಸಂಸ್ಥೆಯ ಮಾಹಿತಿ ಆಧಾರದ ಮೇಲೆ ದೆಹಲಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ ಎನ್ನಲಾಗಿದೆ. ಜೊತೆಗೆ, ‘ಭಾರತದಲ್ಲಿ ಬೆಂಗಳೂರು ಮತ್ತು ದೆಹಲಿಯನ್ನೇ ಉಗ್ರರು ಟಾರ್ಗೆಟ್ ಮಾಡಿಕೊಂಡಿದ್ದಾರಂತೆ’ ಎಂದೂ ಹೇಳಲಾಗಿದೆ

All persons are requested to inform their family and loved ones to avoid Chandni chowk and other crowded areas in Delhi and Bangalore.

Two LET groups have reached Delhi and are planning on carrying out two suicide attacks.

Likely target in Chandni chowk area

— Harshal Jagtap 🇮🇳 (@HarshalIdea)

ಆದರೆ ನಿಜಕ್ಕೂ ದೆಹಲಿ ಪೊಲೀಸರು ಜನರಿಗೆ ಇಂಥದ್ದೊಂದು ಎಚ್ಚರಿಕೆ ನೀಡಿದ್ದಾರೆಯೇ ಎಂದು ಕ್ವಿಂಟ್ ಸುದ್ದಿಸಂಸ್ಥೆಯು ನವದೆಹಲಿಯ ಡಿಸಿಪಿ ಮಧುರ್‌ವರ್ಮಾ ಅವರ ಬಳಿ ಸ್ಪಷ್ಟೀಕರಣ ಪಡೆದಿದೆ. ಅವರು ‘ದೆಹಲಿ ಪೊಲೀಸರು ಇಂತಹ ಯಾವುದೇ ಪ್ರಕಟಣೆಯನ್ನೂ ನೀಡಿಲ್ಲ. ಇದೊಂದು ಸುಳ್ಳು ಸುದ್ದಿ’ ಎಂದಿದ್ದಾರೆ.

2004ರಲ್ಲಿ ಗುಪ್ತಚರ ಮಾಹಿತಿ ಆಧಾರದ ಮೇಲೆ ದೆಹಲಿ ಪೊಲೀಸರು ಇಂಥ ಪ್ರಕಟಣೆ ನೀಡಿದ್ದರು. ಆಗ ದೆಹಲಿಯಾದ್ಯಂತ ಬಿಗಿ ಭದ್ರತೆ ಒದಗಿಸಲಾಗಿತ್ತು. ಏರ್‌ಪೋರ್ಟ್, ರೈಲು ನಿಲ್ದಾಣ, ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಈಗ ಅದೇ ಪ್ರಕಟಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಸುಳ್ಳುಸುದ್ದಿ ಹರಡಲಾಗುತ್ತಿದೆ.

click me!