
ಕಾರವಾರ (ಫೆ.22): ನದಿಯಲ್ಲಿ ನೀರಿದೆ, ಆದರೆ ರೈತರು ಗದ್ದೆ, ತೋಟಗಳಿಗೆ ಬಳಸಲು ಆಗುತ್ತಿಲ್ಲ. ಉಪ್ಪಾಗುತ್ತಿರುವ ನದಿ ನೀರು ತಡೆಯಲು ಚೆಕ್ ಡ್ಯಾಮ್ ಬೇಕು. ಆದರೆ ಸರ್ಕಾರ ಚೆಕ್ ಡ್ಯಾಮ್ ನಿರ್ಮಿಸಿಲ್ಲ. ಹೀಗಾಗಿ ಗ್ರಾಮಸ್ಥರೇ ನದಿಗೆ ಮಣ್ಣುಹಾಕಿ ತಡೆಗೋಡೆ ಕಟ್ಟಲು ಮುಂದಾಗಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸಂತೆಪೇಟೆ ಗ್ರಾಮದ ಜನತೆಯ ದಣಿವು ಆರಿಸುತ್ತಿರುವ ನದಿ ಗಂಗಾವಳಿ. ಗಂಗಾವಳಿ ನದಿಗೆ ಹೊನ್ನಳ್ಳಿ ಏತ ನೀರಾವರಿ ಯೋಜನೆಯ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.
ಆದರೆ ನದಿ ನೀರು ಉಪ್ಪಾಗುತ್ತಿರುವುದರಿಂದ ಜನಕ್ಕೆ ಕಂಟಕಪ್ರಾಯವಾಗಿ ಕಾಡುತ್ತಿದೆ. ಗಂಗಾವಳಿ ನದಿಗೆ ಉಪ್ಪು ನೀರು ಸೇರದಂತೆ ಚೆಕ್ ಡ್ಯಾಮ್ ನಿರ್ಮಿಸಿ ಕೊಡುವಂತೆ ಗ್ರಾಮದ ಜನರು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ ಇನ್ನೂ ಚೆಕ್ ಡ್ಯಾಮ್ ನಿರ್ಮಾಣ ಆಗಿಲ್ಲ. ಹೀಗಾಗಿ ಚೆಕ್ ಡ್ಯಾಮ್ ಆಗಿಲ್ಲ ಎಂದು ಬೇಸತ್ತ ಗ್ರಾಮಸ್ಥರೇ ಈಗ ಮಣ್ಣು ಸುರಿದು, ತಾವೇ ತಡೆಗೋಡೆ ಕಟ್ಟಲು ಮುಂದಾಗಿದ್ದಾರೆ.
ಗಂಗಾವಳಿ ನದಿ ಸಂತೇಪೇಟೆ, ಶಿರಗುಂಜಿ, ಹಿಲ್ಲೂರು, ಮೊಗಟಾ, ಗುಂಡಬಾಳ, ಮೊರಳ್ಳಿ, ಸೇರಿದಂತೆ ಹತ್ತಾರು ಗ್ರಾಮಗಳ ಜನರು ಕುಡಿಯಲು ಇದೇ ನೀರನ್ನು ಬಳಸುತ್ತಾರೆ.
ಆದರೆ ಬೇಸಿಗೆ ಆರಂಭವಾಗುತ್ತಿದ್ದಂತೆ ನದಿಯ ಒಡಲನ್ನು ಸಮುದ್ರದ ಉಪ್ಪು ನೀರು ಆವರಿಸುತ್ತದೆ. ಇದನ್ನು ತಡೆಯಲು ಗ್ರಾಮಸ್ಥರಿಂದ ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಇಲ್ಲಿ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ಇದೀಗ, ಗ್ರಾಮಸ್ಥರ ನೆರವಿಗೆ ಧಾವಿಸಬೇಕಿದ್ದ ಸರಕಾರ ಸ್ಪಂದಿಸದಿದ್ದರೂ ರೈತರು ಮಾತ್ರ ಕಂಗೆಡಲಿಲ್ಲ.
ಒಟ್ನಳ್ಳಿ ಸಂತೇಪೇಟೆಯ ಗ್ರಾಮಸ್ಥರು ಸ್ವತಃ ತಾವೇ ನದಿಗೆ ಒಡ್ಡು ಕಟ್ಟುವ ಮೂಲಕ ಗಂಗಾವಳಿ ನದಿಯ ನೀರು ಉಪ್ಪಾಗದಂತೆ ತಡೆಯಲು ಮುಂದಾಗಿದ್ದಾರೆ. ಗ್ರಾಮಸ್ಥರ ಈ ಕಾರ್ಯ ರಾಜ್ಯದಲ್ಲಿಯೇ ಮಾದರಿ ಎಂದರೂ ತಪ್ಪಾಗಲಿಕ್ಕಿಲ್ಲ. ಅಧಿಕಾರಿಗಳು ಇನ್ನಾದರೂ ಇಲ್ಲಿ ಚೆಕ್ ಡ್ಯಾಮ್ ನಿರ್ಮಿಸುವ ಮೂಲಕ ರೈತರ ನೆರವಿಗೆ ಧಾವಿಸಬೇಕಿದೆ.
ವರದಿ: ಕಡತೋಕಾ ಮಂಜು, ಕಾರವಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.