ರಾಯಚೂರು: ನದಿಗಳು ಎರಡಿದ್ದರೂ ಕುಡಿಯಲು ನೀರಿಲ್ಲ!

By Suvarna Web DeskFirst Published Feb 21, 2017, 11:58 PM IST
Highlights

ನೀರು..ಕಣ್ಣೀರುಸುವರ್ಣ ನ್ಯೂಸ್ ಅಭಿಯಾನ
ಕೆರೆಯ ಕೊಳಕು ನೀರನ್ನೇ ಕುಡಿಯಬೇಕು ಜನ
ಎರಡು ನದಿಗಳಿದ್ದರೂ..ಕುಡಿಯುವ ನೀರಿಗೆ ಬರ
ನೀರು ಬೇಕಾ..ಸ್ಕೂಲಿಗೆ ಹೋಗೋಕಾಗಲ್ಲ..
ಸ್ಕೂಲಿಗೆ ಹೋಗಬೇಕಾ..ಕುಡಿಯೋಕೆ ನೀರು ಸಿಗಲ್ಲ..!
ಕಾಲು ತೊಳೆಯೋಕೂ ಯೋಗ್ಯವಲ್ಲದ ನೀರು..!

ರಾಯಚೂರು (ಫೆ.22): ಇದು ರಾಯಚೂರಿನ ಪುಟ್ಟ ಹಳ್ಳಿಯೊಂದರ ಕಥೆ. ರಾಯಚೂರು ಜಿಲ್ಲೆಯಲ್ಲಿ ಎರಡು- ತುಂಗಭದ್ರೆ ಮತ್ತು ಕೃಷ್ಣಾ- ಪ್ರಮುಖ ನದಿಗಳಿವೆ, ಆದರೆ ಲ್ಲಿನ ಜನರಿಗೆ ಕುಡಿಯಲು ನೀರಿಲ್ಲ.

ನೀರು ಕಣ್ಣೀರು ಅಭಿಯಾನದಲ್ಲಿ ಸುವರ್ಣ ನ್ಯೂಸ್ ರಾಯಚೂರು ಜಿಲ್ಲೆಯ ಸರ್ಜಾಪುರ ಗ್ರಾಮಕ್ಕೆ ಭೇಟಿ ಕೊಟ್ಟಾಗ ಆ ಊರಿನಲ್ಲಿ ಜನರೇ ಇರಲಿಲ್ಲ! ಎಲ್ಲಿ ಹೋದರೆಂದು ಹುಡುಕುತ್ತಾ ಹೊರಟಾಗ ಊರಿನ ಜನ ಕಾಣಿಸಿದ್ದು ಸರ್ಜಾರಪುರದಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಕೆರೆಯ ಬಳಿ.

ಆ ಜನರು ಕುಡಿಯುವ ನೀರು ಹೇಗಿದೆ ಎಂದು ನೋಡಿದರೆ ಸಾಕು, ಅವರು ಅನುಭವಿಸುತ್ತಿರುವ ಭೀಕರ ಸಂಕಟದ ಸಾಕ್ಷಾತ್ ದರ್ಶನವಾಗುತ್ತದೆ. ಈ ಊರಿಗೆ ಕೆರೆಯ ಈ ನೀರೇ ಆಧಾರ. ಆದರೆ ಈ ನೀರೇನು ಶುದ್ಧವಲ್ಲ. ಅದು ಹೊಲಸು, ಕೊಳಕು ನೀರು. ಈ ನೀರನ್ನೇ ಆ ಜನ ಕುಡಿಯಬೇಕು. ಕುಡಿದರೆ ಭೇದಿ ಗ್ಯಾರಂಟಿ, ಕಾಯಿಲೆ ಕಸಾಲೆ ತಪ್ಪಿದ್ದಲ್ಲ!

ಈ ನೀರು ಬಿಟ್ಟರೆ ಇವರಿಗೆ ಬೇರೆ ಗತಿಯಿಲ್ಲ. ಮಕ್ಕಳು, ಹೆಂಗಸರು, ಗಂಡಸರು ಎಲ್ಲರೂ ಸೈಕಲ್​’ಗೆ ಬಿಂದಿಗೆಗಳನ್ನು ನೇತು ಹಾಕಿಕೊಂಡು, ತಳ್ಳುವ ಗಾಡಿಯಲ್ಲಿ ತುಂಬಿಕೊಂಡು ನೀರಿಗೆ ಬರುವುದು ಇಲ್ಲಿ ಸಾಮಾನ್ಯ. ಈ ನೀರು ಆರೋಗ್ಯಕ್ಕೆ ಹಾನಿಕರ ಅನ್ನೋದನ್ನು ಯಾವ ವಿಜ್ಞಾನಿಯೂ ಹೇಳಬೇಕಿಲ್ಲ. ಡಾಕ್ಟರೂ ಹೇಳಬೇಕಿಲ್ಲ. ಕಣ್ಣಲ್ಲಿ ನೋಡಿದರೆ ಸಾಕು, ಈ ನೀರನ್ನು ಪ್ರಾಣಿಗಳೂ ಮೂಸುವುದಿಲ್ಲ.

ಕೇವಲ ಮನೆಗೆ ನೀರು ತುಂಬಿಸುವುದಕ್ಕಾಗಿ ಈ ಗ್ರಾಮದ ಮಕ್ಕಳು ಶಾಲೆ ಬಿಟ್ಟಿದ್ದಾರೆ. ಶಾಲೆಗೆ ಹೋದರೆ, ಮನೆಯಲ್ಲಿ ಅಪ್ಪ ಅಮ್ಮ ಬೈಗುಳ, ಮನೆಯಲ್ಲೇ ಇದ್ದು ನೀರು ತುಂಬ್ತಾ ಇದ್ದರೆ, ಶಾಲೆಯಲ್ಲಿ ಟೀಚರ್ ಬೈತಾರೆ ಎಂಬ ದ್ವಂದ್ವದಲ್ಲಿದ್ದಾರೆ ಇಲ್ಲಿನ ಮಕ್ಕಳು.

ಇದನ್ನು ಸರಿ ಮಾಡಲು ಹೂಳು ತೆಗೆದರೆ ಸಾಕು, ಕೆರೆಯ ನೀರು ಸ್ವಚ್ಛವಾಗುತ್ತದೆ, ಅಲ್ಲದೇ ಊರಿನ ಬೋರುಗಳಲ್ಲೂ ನೀರು ತುಂಬುತ್ತೆ. ಆದರೆ, ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಪುರುಸೊತ್ತಿಲ್ಲ. ಇನ್ನೂ ಬೇಸಗೆ ಅಂಬೆಗಾಲಿಡುತ್ತಿರುವಾಗಲೇ ಪರಿಸ್ಥಿತಿ ಹೀಗಿದೆ. ಇನ್ನು ಸೂರ್ಯ ಸುಡತೊಡಗಿದರೆ ಏನು ಗತಿ?

‘ನೀರು..ಕಣ್ಣೀರು’ ಇದು ಸುವರ್ಣ ನ್ಯೂಸ್ ಅಭಿಯಾನ. ಈ ಅಭಿಯಾನದಿಂದಲಾದ್ರೂ ಸರ್ಕಾರ ಈಗಲೇ ಎಚ್ಚೆತ್ತುಕೊಂಡರೆ, ಸಾವಿರಾರು ಜನರ ಬಾಯಾರಿಕೆ ನೀಗಿಸಬಹುದು. ಅಂತಹ ಮನಕಲಕುವ ಕಥೆಗಳು ಸುವರ್ಣ ನ್ಯೂಸ್​ಗೆ ಎದುರಾಗ್ತಾ ಇವೆ.

ವರದಿ:  ರಾಯಚೂರಿನಿಂದ ಕ್ಯಾಮೆರಾಮನ್ ಶ್ರೀನಿವಾಸ್ ಜೊತೆ ವಿಶ್ವನಾಥ್ ಹೂಗಾರ್ ಸುವರ್ಣ ನ್ಯೂಸ್

click me!