
ಮುಂಬೈ(ಆ.10): ಭಾರತದಲ್ಲಿ ರೇಮಂಡ್ ಹೆಸರು ಕೇಳದವರು ಅಪರೂಪ. ಬಟ್ಟೆ ಸೇರಿದಂತೆ ಪುರುಷರ ಶೃಂಗಾರ ಸಾಮಗ್ರಿಯಲ್ಲಿ ದಶಕಗಳ ಕಾಲ ದೇಶವನ್ನೇ ಆಳಿದ್ದ ಈ ಸಂಸ್ಥೆಯನ್ನು ಬೃಹದಾಕಾರವಾಗಿ ಬೆಳೆಸಿದ, ದೇಶದ ಅತಿ ಶ್ರೀಮಂತ ವ್ಯಕ್ತಿಗಳ ಪೈಕಿ ಒಬ್ಬರಾದ ವಿಜಯ್'ಪತ್ ಸಿಂಘಾನಿಯಾ ಇದೀಗ ‘ದಿವಾಳಿ’ಯಾಗಿದ್ದಾರೆ.
ವಾಸ ಮಾಡಲು ಸ್ವಂತ ಮನೆ ಇಲ್ಲದೇ ಬಾಡಿಗೆ ಮನೆಯಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನ ಕಳೆಯುವುದೇ ಕಷ್ಟ ಎನ್ನುವ ಸ್ಥಿತಿಯಲ್ಲಿ ಇದ್ದಾರೆ. ಹಾಗೆಂದು ಇದಕ್ಕೆಲ್ಲಾ ಕಾರಣ, ಅವರ ಕಂಪನಿ ನಷ್ಟದಲ್ಲಿದೆ ಎಂದಲ್ಲ. ಇದ್ದ ಆಸ್ತಿಯನ್ನೆಲ್ಲಾ ಪುತ್ರ ಗೌತಮ್ ಸಿಂಘಾನಿಯಾಗೆ ಬರೆದುಕೊಟ್ಟ ಮೇಲೆ, ಇದೀಗ ಪುತ್ರನೇ ಅವರನ್ನು ಮನೆಯಿಂದ ಹೊರಹಾಕಿದ್ದಾರೆ.
ಹೀಗಾಗಿ ಸಾವಿರಾರು ಕೋಟಿ ರು. ಆಸ್ತಿ ಹೊಂದಿದ್ದ ವಿಜಯ್'ಪತ್ ಸಿಂಘಾನಿಯಾ ಇದೀಗ ಮುಂಬೈನಲ್ಲಿ ಬಾಡಿಗೆ ಮನೆಯೊಂದಲ್ಲಿ ವಾಸ ಮಾಡುತ್ತಿದ್ದಾರೆ. ತಾವೇ ಕಟ್ಟಿದ್ದ ಬೃಹತ್ ಕಟ್ಟಡದಲ್ಲಿನ ಒಂದು ಡ್ಯುಪ್ಲೆಕ್ಸ್ ಅನ್ನು ತಮಗೆ ಮರಳಿಸುವಂತೆ ವಿಜಯ್'ಪತ್ ಅವರು ನ್ಯಾಯಾಲಯದ ಮೊರೆ ಹೋಗಿದ್ದು, ಅಲ್ಲಿ ಅವರ ಪರ ವಕೀಲರು ಉದ್ಯಮಿಯ ಈ ಕರುಣಾಜನಕ ಕಥೆಯನ್ನು ಬಿಚ್ಚಿಟ್ಟಿದ್ದಾರೆ.
ಪ್ರಕರಣ ಹಿನ್ನೆಲೆ:
ವಿಜಯ್‌ಪತ್ ಸಿಂಘಾನಿಯಾ ದಶಕಗಳ ಕಾಲ ರೇಮಂಡ್ ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ದಶಕಗಳ ಹಿಂದೆ ಅವರ ಹಿರಿಯ ಪುತ್ರ, ತನಗೆ ಯಾವುದೇ ಆಸ್ತಿ ಬೇಡ ಎಂದು ಕುಟುಂಬ ಸಮೇತ ವಿದೇಶಕ್ಕೆ ತೆರಳಿದ್ದರು. ಬಳಿಕ ವಿಜಯ್‌ಪತ್, ತಮ್ಮ ಕಿರಿಯ ಪುತ್ರ ಗೌತಮ್‌ಗೆ ಕಂಪನಿಯ ಹೊಣೆ ವಹಿಸಿದ್ದರು. ಗೌತಮ್ ಕೂಡಾ ಕಂಪನಿಯನ್ನು ಯಶಸ್ವಿಯಾಗಿಯೇ ಮುನ್ನಡೆಸಿದ್ದರು. ಈ ನಡುವೆ 2015ರಲ್ಲಿ ವಿಜಯ್‌ಪತ್ ಸಿಂಘಾನಿಯಾ ತಮ್ಮ ಹೆಸರಿನಲ್ಲಿದ್ದ 1000 ಕೋಟಿ ರು.ಮೌಲ್ಯದ ಕಂಪನಿಯ ಷೇರು, ಆಸ್ತಿಯನ್ನು ಪುತ್ರ ಗೌತಮ್'ಗೆ ಬರೆದುಕೊಟ್ಟಿದ್ದರು. ಅದಾದ ಬಳಿಕ ಪುತ್ರ ಹಂತಹಂತವಾಗಿ ತಂದೆಯನ್ನು ಕಡೆಗಣಿಸುತ್ತಾ ಬಂದಿದ್ದು, ಬಳಿಕ ಮನೆಯಿಂದಲೇ ಹೊರಹಾಕಿದ್ದಾರೆ. ಹೀಗಾಗಿ ವಿಜಯಪತ್ ಅವರೀಗ ದಕ್ಷಿಣ ಮುಂಬೈನಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುವ ಪರಿಸ್ಥಿತಿ ಎದುರಾಗಿದೆ. ತಂದೆಗೆ ನೀಡಿದ್ದ ಕಾರು ಮತ್ತು ಕಾರು ಚಾಲಕನನ್ನೂ ಹಿಂದಕ್ಕೆ ಪಡೆದಿದ್ದಾರೆ.
ಮನೆ ಕೊಡಿ:
ತಾವೇ ಕಂಪನಿಯ ಅಧ್ಯಕ್ಷರಾಗಿದ್ದಾಗ ವಿಜಯ್'ಪತ್ ಅವರು ಕಂಪನಿಯ ಹೆಸರಲ್ಲಿ ಮುಂಬೈನ ಮಲಬಾರ್ ಹಿಲ್'ನಲ್ಲಿ 16 ಮಹಡಿಯ ಜೆಕೆ ಹೌಸ್ ಎಂಬ ಬಹುಮಹಡಿ ಕಟ್ಟಡ ಕಟ್ಟಿದ್ದರು. ಕೆಲ ವರ್ಷಗಳ ಹಿಂದೆ ಇದನ್ನು ಮರುನವೀಕರಣ ಮಾಡಿ 36 ಅಂತಸ್ತಿನ ಕಟ್ಟಡವಾಗಿ ಪುನರ್ ನಿರ್ಮಿಸಲಾಗಿತ್ತು. ಈ ಕಟ್ಟಡದಲ್ಲಿ ನಾಲ್ಕು ಡ್ಯುಪ್ಲೆಕ್ಸ್'ಗಳಿದ್ದವು. ಈ ಪೈಕಿ ಒಂದು ವಿಜಯ್'ಪತ್'ಗೆ, ಇನ್ನೊಂದು ಗೌತಮ್'ಗೆ, ಉಳಿದೆರಡು ವಿಜಯಪತ್ ಅವರ ಸೋದರ ಅಜಯ್ ಪತ್ ಕುಟುಂಬಕ್ಕೆ ಸೇರಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ನವೀಕರಣದ ಬಳಿಕ ಎಲ್ಲಾ 4 ಡ್ಯುಪ್ಲೆಕ್ಸ್'ಗಳನ್ನು ಸ್ವತಃ ಗೌತಮ್ ಕಬಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಮನೆಯನ್ನು ಮರಳಿ ತಮಗೆ ಕೊಡಿಸಿ ಎಂದು ಇದೀಗ ವಿಜಯ್‌ಪತ್ ಮತ್ತು ಅವರ ಸೋದರನ ಮೊಮ್ಮಕ್ಕಳು ಕೋರ್ಟ್ ಮೆಟ್ಟಿಲೇರಿದ್ದಾರೆ. ಕಳೆದ ವಾರ ಈ ಅರ್ಜಿ ವಿಚಾರಣೆಗೆ ಬಂದ ವೇಳೆ, ಇಂಥದ್ದೆಲ್ಲಾ ನ್ಯಾಯಾಲಯಕ್ಕೆ ಬರಬಾರದು. ಇದನ್ನು ನೀವೇ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎಂದು ನ್ಯಾಯಾಲಯ ಸಲಹೆ ನೀಡಿ ಕಳುಹಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.