ಕೊಡಗಿನ 20 ಪಟ್ಟು ಈ ಜಿಲ್ಲೆಯಲ್ಲಿ ಬೆಳೆಹಾನಿ!

By Web DeskFirst Published Sep 21, 2018, 8:09 AM IST
Highlights

ಮುಂಗಾರು ಕೊರತೆ, ಅಂತರ್ಜಲ ಕುಸಿತ ಇತ್ಯಾದಿ ಕಾರಣಗಳಿಂದ ಈಗಾಗಲೇ ಶೇ.75ಕ್ಕಿಂತ ಹೆಚ್ಚು ಬಿತ್ತನೆಯಾಗಿದ್ದರೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಿನ ಬೆಳೆ ಹಾನಿ ಸಂಭವಿಸಿದೆ. ವಿಜಯಪುರ ಜಿಲ್ಲೆಯಲ್ಲಿ 2.03 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದ್ದು, ಪ್ರಥಮ ಸ್ಥಾನದಲ್ಲಿದೆ. 

ಬೆಂಗಳೂರು :  ರಾಜ್ಯದಲ್ಲಿ ಬರದಿಂದ ಅತಿ ಹೆಚ್ಚು ಬೆಳೆ ಹಾನಿ ವಿಜಯಪುರ ಜಿಲ್ಲೆಯಲ್ಲಿ ಆಗಿದ್ದರೆ, ಅತಿವೃಷ್ಟಿಯಿಂದ ಕೊಡಗು ಜಿಲ್ಲೆಯಲ್ಲಿ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆಯ ಪ್ರಾಥಮಿಕ ಹಂತದ ಸಮೀಕ್ಷೆ ಹೇಳಿದೆ.

ಮುಂಗಾರು ಕೊರತೆ, ಅಂತರ್ಜಲ ಕುಸಿತ ಇತ್ಯಾದಿ ಕಾರಣಗಳಿಂದ ಈಗಾಗಲೇ ಶೇ.75ಕ್ಕಿಂತ ಹೆಚ್ಚು ಬಿತ್ತನೆಯಾಗಿದ್ದರೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಿನ ಬೆಳೆ ಹಾನಿ ಸಂಭವಿಸಿದೆ. ವಿಜಯಪುರ ಜಿಲ್ಲೆಯಲ್ಲಿ 2.03 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದ್ದು, ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಗದಗ (1.63 ಲಕ್ಷ ಹೆಕ್ಟೇರ್‌), ಕೊಪ್ಪಳ (1.57 ಲಕ್ಷ ಹೆಕ್ಟೇರ್‌), ಚಿತ್ರದುರ್ಗ (1.41 ಲಕ್ಷ ಹೆಕ್ಟೇರ್‌) ಹಾಗೂ ಬಾಗಲಕೋಟೆ (1.14 ಲಕ್ಷ ಹೆಕ್ಟೇರ್‌) ಜಿಲ್ಲೆಗಳಲ್ಲಿ ಅಧಿಕ ಬೆಳೆ ಹಾನಿಯಾಗಿದೆ. ಅತಿ ಕಡಿಮೆ ಬೆಳೆ ಹಾನಿಯು ಬೆಂಗಳೂರು ನಗರ ಜಿಲ್ಲೆಯಲ್ಲಿ (586 ಹೆಕ್ಟೇರ್‌) ಸಂಭವಿಸಿದ್ದು, ನಂತರದ ಸ್ಥಾನದಲ್ಲಿ ರಾಮನಗರ (4786 ಹೆಕ್ಟೇರ್‌) ಜಿಲ್ಲೆ ಇದೆ. ಒಟ್ಟಾರೆ 22 ಜಿಲ್ಲೆಗಳಲ್ಲಿ 14.40 ಲಕ್ಷ ಹೆಕ್ಟೇರ್‌ ಪ್ರದೇಶ ಬರಕ್ಕೆ ತುತ್ತಾಗಿದ್ದು, ಬೆಳೆಹಾನಿ ಸಂಭವಿಸಿದೆ.

ಅತಿವೃಷ್ಟಿಮತ್ತು ಪ್ರವಾಹ:

ಒಂದೆಡೆ ಮುಂಗಾರು ಮಳೆ ಕೊರತೆಯಿಂದ ಬಿತ್ತನೆಯಾದ ಬೀಜ ಫಲ ನೀಡದೆ ಬರದ ಛಾಯೆ ಹರಡಿದ್ದರೆ ಮತ್ತೊಂದೆಡೆ ಅತಿವೃಷ್ಟಿಮತ್ತು ಪ್ರವಾಹದಿಂದಾಗಿ ಸುಮಾರು 27,484 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಹಾನಿಯಾಗಿದೆ. ಸುಮಾರು 313.52 ಕೋಟಿ ರು.ಗಳಷ್ಟುಮೌಲ್ಯದ ಬೆಳೆ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಅತಿಯಾದ ಮಳೆ ಮತ್ತು ಭೂಕುಸಿತ, ಪ್ರವಾಹದಿಂದ ತತ್ತರಿಸಿ ಸುಮಾರು 13ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡ ಕೊಡಗು ಜಿಲ್ಲೆಯಲ್ಲಿ 9075 ಹೆಕ್ಟೇರ್‌ ಜಮೀನಿನ ಬೆಳೆ ನಾಶವಾಗಿದ್ದು, ಮೊದಲ ಸ್ಥಾನದಲ್ಲಿದೆ. ಶಿವಮೊಗ್ಗ (7896 ಹೆಕ್ಟೇರ್‌), ಹಾಸನ (2265 ಹೆಕ್ಟೇರ್‌), ಮೈಸೂರು (2140 ಹೆಕ್ಟೇರ್‌), ಚಿಕ್ಕಮಗಳೂರು (1250 ಹೆಕ್ಟೇರ್‌), ಬೆಳಗಾವಿ (1118 ಹೆಕ್ಟೇರ್‌) ಜಿಲ್ಲೆಯಲ್ಲಿ ಅತಿವೃಷ್ಟಿಯಾಗಿದೆ. ವಿಜಯಪುರ (48 ಹೆಕ್ಟೇರ್‌), ಉಡುಪಿ (154 ಹೆಕ್ಟೇರ್‌) ಮತ್ತು ದಕ್ಷಿಣ ಕನ್ನಡ (233 ಹೆಕ್ಟೇರ್‌) ಜಿಲ್ಲೆಗಳಲ್ಲಿ ಅತಿ ಕಡಿಮೆ ಪ್ರದೇಶ ಅತಿವೃಷ್ಟಿಗೆ ಒಳಗಾಗಿದೆ.

ಹೀಗೆ ರಾಜ್ಯದಲ್ಲಿ ಬರದಿಂದ 14.40 ಲಕ್ಷ ಹೆಕ್ಟೇರ್‌ ಮತ್ತು ಅತಿವೃಷ್ಟಿಹಾಗೂ ಪ್ರವಾಹಕ್ಕೆ 27 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದ ಬೆಳೆ ನಾಶವಾಗಿದ್ದು, ಒಟ್ಟಾರೆಯಾಗಿ ಎಂಟು ಸಾವಿರ ಕೋಟಿ ರು.ಗಳಿಗೂ ಅಧಿಕ ನಷ್ಟವುಂಟಾಗಿದೆ ಎಂದು ಕೃಷಿ ಇಲಾಖೆಯ ಮೊದಲ ಹಂತದ ಸಮೀಕ್ಷೆ ಅಂದಾಜಿಸಿದೆ.

ಬೆಳೆ ನಷ್ಟದ ಪ್ರಮಾಣ:

ಬರದಿಂದ ಸುಮಾರು 2.28 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಯಲಾಗಿದ್ದ ಮೆಕ್ಕೆಜೋಳ, 1.32 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಯಲಾದ ಸಜ್ಜೆ ಬೆಳೆಗಳು ಹಾನಿಯಾಗಿದ್ದು, ಮೊದಲೆರಡು ಸ್ಥಾನದಲ್ಲಿವೆ. ಉಳಿದಂತೆ ರಾಗಿ, ಭತ್ತ, ಜೋಳ, ಸಣ್ಣ ಸಿರಿಧಾನ್ಯಗಳು ಇವೆ. ಬೇಳೆ ಕಾಳು ವಿಭಾಗದಲ್ಲಿ 3.99 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಯಲಾದ ತೊಗರಿ, 1.95 ಲಕ್ಷ ಹೆಕ್ಟೇರ್‌ನಲ್ಲಿ ಹೆಸರು ಕಾಳು ಬೆಳೆ ನಾಶವಾಗಿದೆ. ಜತೆಗೆ ಅವರೆ, ಹುರುಳಿ, ಉದ್ದು, ಅಲಸಂದೆ, ಮಡಿಕೆಕಾಳು ಒಟ್ಟು ಸೇರಿದಂತೆ ಆಹಾರ ಧಾನ್ಯ ವಿಭಾಗದಲ್ಲಿ ಸುಮಾರು 10.90 ಲಕ್ಷ ಹೆಕ್ಟೇರ್‌ ಬೆಳೆ ಬರದಿಂದ ನಾಶವಾಗಿದೆ.

ಎಣ್ಣೆ ಕಾಳು ವಿಭಾಗದಲ್ಲಿ 1.99 ಲಕ್ಷ ಹೆಕ್ಟೇರನಲ್ಲಿ ಬಿತ್ತನೆ ಮಾಡಲಾದ ನೆಲಗಡಲೆ ಹಾನಿಗೊಳಗಾಗಿದೆ. 54 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದ ಸೂರ್ಯಕಾಂತಿ, 3681 ಹೆಕ್ಟೇರ್‌ ಸೋಯಾ ಅವರೆ ಸೇರಿದಂತೆ ಹರಳು, ಹುಚ್ಚೆಳ್ಳು, ಸಾಸಿವೆ ಸೇರಿ 2.67 ಲಕ್ಷ ಹೆಕ್ಟೇರ್‌ ಪ್ರದೇಶದ ಎಣ್ಣೆಕಾಳು ಬೆಳೆ ಹಾನಿಗೀಡಾಗಿದೆ. 83 ಸಾವಿರ ಹೆಕ್ಟೇರ್‌ನಲ್ಲಿ ಬೆಳೆದ ವಾಣಿಜ್ಯ ಬೆಳೆ ಹತ್ತಿಯೂ ಕೂಡ ನಾಶವಾಗಿದೆ. ಹೀಗೆ ಬರ ಮತ್ತು ಅತಿವೃಷ್ಟಿಯಿಂದ ಒಟ್ಟು 14,68,214 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಕೃಷಿ ಬೆಳೆಗಳಿಗೆ ಹಾನಿಗೊಳಗಾಗಿವೆ ಎಂದು ಕೃಷಿ ಇಲಾಖೆ ಸಮೀಕ್ಷೆಯಿಂದ ತಿಳಿದುಬಂದಿದೆ.


ಮೊದಲ ಹಂತದ ಸಮೀಕ್ಷೆಯ ಅಷ್ಟುಅಂಕಿ ಅಂಶಗಳು ತಾತ್ಕಾಲಿಕವಷ್ಟೆ. ಎರಡನೇ ಹಂತವಾಗಿ ಸೆ.17ರಿಂದ ಕಂದಾಯ ಇಲಾಖೆ, ಕೃಷಿ ಇಲಾಖೆ ಜಂಟಿಯಾಗಿ ವೈಜ್ಞಾನಿಕವಾಗಿ ಬೆಳೆ ಹಾನಿ ಸಮೀಕ್ಷೆ ಆರಂಭಿಸಿದ್ದು, ಸೆ.31ರೊಳಗೆ ಅಂತಿಮಗೊಳ್ಳಲಿದೆ. ಬಳಿಕ ಅಂತಿಮ ವರದಿ ಸಿದ್ಧವಾಗಲಿದೆ. ಪ್ರಥಮ ಹಂತದ ಸಮೀಕ್ಷೆಯ ಬೆಳೆ ಹಾನಿ ಪ್ರಮಾಣ ಎರಡನೇ ವರದಿಯಲ್ಲಿ ಕಡಿಮೆ ಆಗಬಹುದು ಅಥವಾ ಹೆಚ್ಚಾಗಲೂಬಹುದು. ಆ ನಂತರವೇ ಸರ್ಕಾರ ಅಧಿಕೃತಗೊಳಿಸಲಿದೆ.

- ಶ್ರೀನಿವಾಸ್‌, ನಿರ್ದೇಶಕರು, ಕೃಷಿ ಇಲಾಖೆ


86 ತಾಲೂಕು ಬರಪೀಡಿತ

ಒಂದು ಪ್ರದೇಶ ಬರ ಪೀಡಿತ ಎಂದು ಘೋಷಿಸಲು ಕೇಂದ್ರ ಸರ್ಕಾರ ಐದು ಮಾನದಂಡಗಳನ್ನು ನಿಗದಿಪಡಿಸಿದೆ. ಶೇ.50ರಷ್ಟುತೇವಾಂಶ ಕೊರತೆ, ಬೆಳೆ ಹಾನಿ, ಅಂತರ್ಜಲ ಕೊರತೆ, ಅಂಕಿ-ಅಂಶಗಳ ಆಧಾರದ ಮೇಲೆ ಬರ ಘೋಷಣೆ ಮಾಡಲಾಗುತ್ತಿದೆ. ಈ ಎಲ್ಲ ಅಂಶಗಳು ಉತ್ತರ ಒಳನಾಡು ಜಿಲ್ಲೆಗಳಾದ ಕೊಪ್ಪಳ, ಬಳ್ಳಾರಿ, ರಾಯಚೂರು, ಕಲಬುರ್ಗಿ, ವಿಜಯಪುರ, ಗದಗ, ಯಾದಗಿರಿ, ಬಾಗಲಕೋಟೆಯಲ್ಲಿ ಹೆಚ್ಚು ಕಂಡುಬಂದಿದ್ದು, ಸಚಿವ ಸಂಪುಟ ಉಪಸಮಿತಿ ಇತ್ತೀಚೆಗೆ 86 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದೆ. ಸರ್ಕಾರಿ ಆದೇಶ ಹೊರಡಿಸುವುದೊಂದೆ ಬಾಕಿ ಉಳಿದಿದೆ.

ಸಂಪತ್‌ ತರೀಕೆರೆ

click me!