
ಲಂಡನ್(ಜೂನ್ 13): ಗಡೀಪಾರು ಪ್ರಕರಣದ ವಿಚಾರಣೆ ಮುಗಿಸಿ ವೆಸ್ಟ್'ಮಿನ್ಸ್'ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್'ನಿಂದ ಆಚೆ ಬಂದ ವಿಜಯ್ ಮಲ್ಯ ಪತ್ರಕರ್ತರಿಗೆ ಟಾಂಗ್ ಕೊಟ್ಟಿದ್ದಾರೆ. ಕೋರ್ಟ್'ನಿಂದ ಹೊರಬರುತ್ತಲೇ ಮುತ್ತಿಕೊಂಡ ಪತ್ರಕರ್ತರನ್ನು ದಿವ್ಯ ನಿರ್ಲಕ್ಷ್ಯದಿಂದ ಕಂಡ ಮಲ್ಯ, ನೂರಾರು ಕೋಟಿಯ ಕನಸು ಕಾಣುತ್ತಿರಿ ಎಂದು ಹಂಗಿಸಿದ್ದಾರೆ. ಕೀಪ್ ಡ್ರೀಮಿಂಗ್ ಅಬೌಟ್ ಬಿಲಿಯನ್ಸ್ ಆಫ್ ಪೌಂಡ್ಸ್ ಎಂದು ಪತ್ರಕರ್ತರನ್ನು ಲೇವಡಿ ಮಾಡಿದ್ದಾರೆ.
ಪತ್ರಕರ್ತರ ಮೇಲ್ಯಾಕೆ ಕೋಪ?
ಮೊನ್ನೆಯ ಭಾರತ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ ಪಂದ್ಯದ ವೇಳೆ ಒಂದು ವರ್ಗದ ಪ್ರೇಕ್ಷಕರು ಮಲ್ಯರನ್ನು ಕಂಡು "ಕಳ್ಳ ಕಳ್ಳ" ಎಂದು ಕಿರುಚಿದ್ದರು. ಅದನ್ನು ಮಾಧ್ಯಮಗಳು ರಸವತ್ತಾಗಿ ವರದಿ ಮಾಡಿದ್ದವು. ಇದು ಮಲ್ಯರನ್ನು ಘಾಸಿಗೊಳಿಸಿದಂತೆ ಕಂಡಿತು. ವೆಸ್ಟ್'ಮಿನ್'ಸ್ಟರ್ ಕೋರ್ಟ್'ನಿಂದ ಆಚೆ ಬಂದಾಗ ಪ್ರತಿಕ್ರಿಯೆಗೆ ಪತ್ರಕರ್ತರು ಎದುರುಗೊಂಡಾಗ ಮಲ್ಯ ಈ ವಿಚಾರವನ್ನು ಪ್ರಸ್ತಾಪಿಸಿ ಕುಟುಕಿದರು.
"ನಿಮ್ಮ ಯಾವ ಪ್ರಶ್ನೆಗೂ ನಾನು ಉತ್ತರಿಸುವುದಿಲ್ಲ... ಇಬ್ಬರು ಕುಡುಕರು ಗಲಾಟೆ ಮಾಡಿದ್ದರು. ನೀವು ಅದನ್ನೇ ಹೈಲೈಟ್ ಮಾಡಿ ತೋರಿಸಿದಿರಿ. ಓವಲ್ ಸ್ಟೇಡಿಯಂನಲ್ಲಿ ಸಾಕಷ್ಟು ಮಂದಿ ನನಗೆ ಶುಭ ಹಾರೈಸಿದ್ದರು," ಎಂದು ವಿಜಯ್ ಮಲ್ಯ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಅಷ್ಟೇ ಅಲ್ಲ, ಮುಂದಿನ ವಿಚಾರಣೆಯಲ್ಲಿ ಮಾಧ್ಯಮಗಳನ್ನು ಹತ್ತಿರಕ್ಕೆ ಬರಲು ಬಿಡಬಾರದು ಎಂದು ಕೋರ್ಟ್'ಗೆ ಮಲ್ಯ ಮನವಿ ಮಾಡಿಕೊಂಡಿದ್ದಾರಂತೆ.
ಏನಿದು ಗಡಿಪಾರು ಪ್ರಕರಣ?
ಭಾರತದಲ್ಲಿ ವಿವಿಧ ಬ್ಯಾಂಕುಗಳಿಂದ ಸುಮಾರು 9 ಸಾವಿರ ಕೋಟಿ ರೂಪಾಯಿ ಸಾಲ ಪಡೆದು ಮರುಪಾವತಿ ಮಾಡದೇ ವಂಚನೆ ಮಾಡಿರುವ ಆರೋಪ ವಿಜಯ್ ಮಲ್ಯ ಮೇಲಿದೆ. ಪ್ರಕರಣ ಬಯಲಿಗೆ ಬರುತ್ತಲೇ ಭಾರತದಿಂದ ಕಾಲ್ಕಿತ್ತ ವಿಜಯ್ ಮಲ್ಯ ಇದೀಗ ಇಂಗ್ಲೆಂಡ್'ನಲ್ಲಿದ್ದಾರೆ. ಮಲ್ಯರನ್ನು ಗಡೀಪಾರು ಮಾಡಿ ಭಾರತಕ್ಕೆ ಒಪ್ಪಿಸಬೇಕೆಂದು ಭಾರತ ಸರಕಾರ ಮನವಿ ಮಾಡಿಕೊಂಡಿದೆ. ಆ ಸಂಬಂಧ, ಏಪ್ರಿಲ್ 18ರಂದು ಲಂಡನ್ ಪೊಲೀಸರು ವಿಜಯ್ ಮಲ್ಯರನ್ನು ಬಂಧಿಸಿತು. ಮಲ್ಯಗೆ ಕೂಡಲೇ ಷರತುಬದ್ಧ ಜಾಮೀನು ಕೂಡ ಸಿಕ್ಕಿತು. ಇದೀಗ ಅವರು ತಮ್ಮ ಜಾಮೀನು ಅವಧಿಯನ್ನೂ ವಿಸ್ತರಿಸಿಕೊಂಡಿದ್ದಾರೆ.
ಪ್ರಕರಣದ ಮುಂದಿನ ಮ್ಯಾನೇಜ್ಮೆಂಟ್ ವಿಚಾರಣೆ ಜುಲೈ 6ರಂದು ನಡೆಯಲಿದೆ. ಡಿಸೆಂಬರ್ 4ರಂದು ಗಡೀಪಾರು ಮನವಿಯ ವಿಚಾರಣೆ ನಡೆಸಲು ಕೋರ್ಟ್ ತೀರ್ಮಾನಿಸಿದೆ. ಇದೇ ವೇಳೆ, ಭಾರತವು ಬೇರೆ ಬೇರೆ ಆರೋಪಗಳನ್ನು ಹೊಸದಾಗಿ ಸೇರಿಸಿ ಮಲ್ಯರ ಗಡೀಪಾರು ಮಾಡಲು ಎರಡನೇ ಮನವಿಗೆ ಸಿದ್ಥತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಮ್ಯಾನೇಜ್ಮೆಂಟ್ ಹಿಯರಿಂಗನ್ನು ಮುಂದಕ್ಕೆ ಹಾಕಿ ಎಂದು ಸರಕಾರ ಪರ ವಕೀಲರು ಕೋರ್ಟ್'ಗೆ ಮನವಿ ಮಾಡಿಕೊಂಡರು. ಆದರೆ, ಇದಕ್ಕೆ ನ್ಯಾಯಾಲಯ ಒಪ್ಪಲಿಲ್ಲ. ಈಗ ಏನೇನು ದಾಖಲೆಗಳಿವೆಯೋ ಅದನ್ನೇ ಆಧಾರವಾಗಿಟ್ಟುಕೊಂಡು ಕೇಸ್ ನಡೆಸಿ ಎಂದು ತಿಳಿಸಿತು.
ಕೋರ್ಟ್'ನಲ್ಲಿ ವಿಜಯ್ ಮಲ್ಯ ಜೊತೆ ಅವರ ಪುತ್ರ ಸಿದ್ದಾರ್ಥ್ ಮಲ್ಯ ಕೂಡ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.