
ಬೆಂಗಳೂರು(ಜೂ.13): ನಂದಿ ಗಿರಿಧಾಮದಲ್ಲಿ ಪರಿಸರದ ಮೇಲಾ ಗುತ್ತಿರುವ ದುಷ್ಪರಿಣಾಮ ತಡೆಯುವ ಸಲುವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿರುವ ಪ್ರವಾಸೋದ್ಯಮ ಇಲಾಖೆ ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ಸಂಚಾರ ಸ್ಥಗಿತಗೊಳಿಸಲು ತೀರ್ಮಾನಿಸಿದೆ.
ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಕಡೆಗಳಿಂದ ನಂದಿ ಗಿರಿಧಾಮಕ್ಕೆ ಪ್ರತಿದಿನ ನೂರಾರು ವಾಹನಗಳ ಬರುತ್ತಿವೆ. ಇದರಿಂದ ಪ್ರವಾಸಿಗರು ಮಾಲಿನ್ಯದ ಗಾಳಿ ಸೇವಿಸು ವಂತಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಪೆಟ್ರೋಲ್, ಡೀಸೆಲ್ ವಾಹನ ಬೆಟ್ಟಕ್ಕೆ ಬರಲು ಅವಕಾಶವಿಲ್ಲದಂತೆ ನಿಷೇಧ ಹೇರ ಲಾಗುತ್ತಿದ್ದು ಪ್ರವಾಸಿಗರಿಗೆ ಪರ್ಯಾಯ ಸಾರಿಗೆ ಕಲ್ಪಿಸಲು ನಿರ್ಧರಿಸಲಾಗಿದೆ.
ವಿಪರೀತ ಪೆಟ್ರೋಲ್, ಡೀಸೆಲ್ ವಾಹನ ಗಳಿಂದ ಬೆಟ್ಟದ ಉಷ್ಣಾಂಶ ಹೆಚ್ಚಾಗುತ್ತಿದ್ದು ಪರಿಸರಕ್ಕೆ ತೀವ್ರ ಹಾನಿಯಾಗುತ್ತಿದೆ. ಇದೇ ರೀತಿ ಮುಂದುವರಿದಲ್ಲಿ ಗಿರಿಧಾಮ ಪೂರ್ತಿ ಮಾಲಿನ್ಯಗೊಳ್ಳಲಿದೆ. ಹಾಗಾಗಿ ತಕ್ಷಣ ವಾಹನಗಳ ಸ್ಥಗಿತಗೊಳಿಸಬೇಕು ಎಂದು ಪರಿಸರ ಪ್ರೇಮಿಗಳಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಹೊರ ಭಾಗದಿಂದ ಬರುವ ವಾಹನಗಳ ನಿಲುಗಡೆಗೆ ಬೆಟ್ಟದ ತಪ್ಪಲಿನಲ್ಲಿ ವ್ಯವಸ್ಥೆ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಬೆಟ್ಟದ ತಪ್ಪಲಿನಿಂದ 8 ಕಿಲೋ ಮೀಟರ್ ದೂರದ ಬೆಟ್ಟದ ತುದಿ ಕ್ರಮಿಸಲು ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ. ವಾಹನ ಸಂಚಾರ ಸ್ಥಗಿತಗೊಳಿಸುವ ಸಂಬಂಧ ಇಲಾಖೆ ಅಧಿಕಾರಿಗಳೊಂದಿಗೆ ಸಚಿವರು ಸೇರಿದಂತೆ ಸ್ಥಳಿಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗಿದೆ. ಶೀಘ್ರದಲ್ಲಿ ಬೆಟ್ಟಕ್ಕೆ ಬರುವ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳನ್ನು ಸ್ಥಗಿತಗೊಳಿಸಲು ಆದೇಶಿಸಲು ನಿರ್ಧರಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಟ್ರೆಕ್ಕಿಂಗ್ ಪಾಥ್ ನಿರ್ಮಾಣ: ಅಲ್ಲದೆ, ನಂದಿ ಗಿರಿಧಾಮ ಸುತ್ತಲಿನ ಪ್ರದೇಶದಲ್ಲಿ ಸೈಕ್ಲಿಂಗ್, ವಾಕಿಂಗ್ ಮತ್ತು ರನ್ನಿಂಗ್ ಮ್ಯಾರಥಾನ್, ಹೈಕಿಂಗ್, ಟ್ರೆಕ್ಕಿಂಗ್ ಸೇರಿದಂತೆ ವಿವಿಧ ಸಾಹಸ ಕ್ರೀಡೆಗಳಿಗೆ ಸಾಕಷ್ಟುಅವಕಾಶಗಳಿದ್ದು, ನಂದಿಗಿರಿ, ಸ್ಕಂದಗಿರಿ, ಚೆನ್ನಗಿರಿ, ಬ್ರಹ್ಮಗಿರಿ ಬೆಟ್ಟದಲ್ಲಿ ಪರಿಸರ ಜಾಡುಗಳನ್ನು ಗುರುತಿಸುತ್ತಿದ್ದು, ಆ ಪೈಕಿ ಮೂರು ಟ್ರೆಕ್ಕಿಂಗ್ ಮಾರ್ಗಗಳ ಅಂತಿಮಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು. ದ್ವಿಚಕ್ರ ವಾಹನಗಳನ್ನು ನಂದಿ ಗಿರಿಧಾಮದ ತಪ್ಪಲಿನಲ್ಲಿ ವಾಹನಗಳ ನಿಲುಗಡೆಗೆ ಜಾಗ ಗುರುತಿಸುವ ಕಾರ್ಯ ನಡೆಯುತ್ತಿದೆ. ಸೂಕ್ತ ಸ್ಥಳಾವಕಾಶ ಸಿಕ್ಕ ಬಳಿಕ ಈ ಯೋಜನೆ ಜಾರಿಗೆ ಬರಲಿದೆ.
ಕಬ್ಬನ್‌ಪಾರ್ಕ್ ಮಾದರಿ: ಕಬ್ಬನ್ ಪಾರ್ಕ್ನ ಮಾದರಿಯಲ್ಲಿ ಶನಿವಾರ ಮತ್ತು ಭಾನುವಾರ ತಕ್ಷಣದಿಂದ ಜಾರಿ ಬರುವಂತೆ ನಂದಿ ಬೆಟ್ಟದಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಬೇಕು ಎಂದು ಬೆಂಗಳೂರು ಸೈಕಲಿಂಗ್ ಗ್ರೂಪ್ ವತಿಯಿಂದ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ. ಸುಧಾಕರ್ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ. ಈ ಮನವಿಗೆ ಸ್ಪಂದಿಸಿರುವ ಶಾಸಕರು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಶೀಘ್ರದಲ್ಲಿ ಕ್ರಮ ಕೈಗೊಳ್ಳುವ ಭರವಸೆ ಭರವಸೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.