
ನವದೆಹಲಿ: ಸಮಾನ ನಾಗರಿಕ ಸಂಹಿತೆಗೆ ಸಂಬಂಧಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿರ್ಧಾರಕ್ಕೆ ಕೇಂದ್ರ ಸರ್ಕಾರ ತಿರುಗೇಟು ನೀಡಿದೆ. ಮಹಿಳೆಯರ ವಿರುದ್ಧದ ಧಾರ್ಮಿಕ ತಾರತಮ್ಯ ಅಂತ್ಯಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಅಲ್ಲದೆ ಈ ವಿಷಯದಲ್ಲಿ ಪ್ರಧಾನಿ ಹೆಸರನ್ನು ಎಳೆದು ತರುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘‘ಭಾರತದಲ್ಲಿ ಮದುವೆ, ವಿಚ್ಛೇದನೆ, ಆಸ್ತಿ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿ ಏಕರೂಪಿ ಕಾನೂನು ರಚನೆ ವಿಷಯವನ್ನು ಪ್ರಭಾವಿ ಮುಸ್ಲಿಂ ಸಂಸ್ಥೆಯೊಂದು ರಾಜಕೀಕರಣಗೊಳಿಸುತ್ತಿದೆ. ಸಮಾನ ನಾಗರಿಕ ಸಂಹಿತೆಯನ್ನು ಒಮ್ಮತದ ಮೂಲಕ ಜಾರಿ ಮಾಡಲಾಗುತ್ತಿದ್ದು, ತರಾತುರಿಯಲ್ಲಲ್ಲ. ಇಲ್ಲಿ ಎಲ್ಲರೂ ರಾಜಕೀಯ ಹೊರಗಿಡಬೇಕು,'' ಎಂದು ನಾಯ್ಡು ಹೇಳಿದ್ದಾರೆ. ಸಂಹಿತೆಗೆ ಸಂಬಂಧಿಸಿದ ಪ್ರಶ್ನಾವಳಿಯನ್ನು ಬಹಿಷ್ಕರಿಸುವುದಾಗಿ ಮುಸ್ಲಿಂ ಕಾನೂನು ಮಂಡಳಿ ಹೇಳಿದ ಬೆನ್ನಲ್ಲೇ, ನಾಯ್ಡು ಹೇಳಿಕೆ ಹೊರಬಿದ್ದಿದೆ. ‘‘ಸರ್ವಾಧಿಕಾರಿ ಧೋರಣೆ ತೋರಿದವರು ಪ್ರಧಾನಿಯಲ್ಲ. ಪ್ರಶ್ನಾವಳಿ ಬಹಿಷ್ಕರಿಸಿ ನೀವೇ ಹಾಗೆ ವರ್ತಿಸಿದ್ದೀರಿ,'' ಎಂದಿದ್ದಾರೆ ನಾಯ್ಡು.
ತಲಾಖ್ ಕೊನೆಯಾಗಲಿ:
‘‘ಟ್ರಿಪಲ್ ತಲಾಖ್ ಕೊನೆಯಾಗಬೇಕೆಂಬುದು ದೇಶದ ಒತ್ತಾಸೆ. ನಿಮ್ಮ ವಾದದಲ್ಲಿ ಪ್ರಮುಖ ಅಂಶವಿದ್ದರೆ, ಅದನ್ನು ಜನತೆಯ ಮುಂದಿಡಿ, ಚರ್ಚೆಗೆ ಚಾಲನೆ ನೀಡಿ. ಪ್ರಧಾನಿ ಹೆಸರನ್ನೇಕೆ ತರುತ್ತೀರಿ? ಟ್ರಿಪಲ್ ತಲಾಖ್ ಮತ್ತು ಸಮಾನ ನಾಗರಿಕ ಸಂಹಿತೆಯ ಬಗ್ಗೆ ಗೊಂದಲ ಬೇಡ. ಎರಡೂ ಭಿನ್ನ ವಿಚಾರಗಳು. ಇವೆಲ್ಲ ಮಾನವ ಹಕ್ಕುಗಳ ವಿಷಯ. ಆಕ್ಷೇಪ ಬಗ್ಗೆ ಅರ್ಥವಾಗುತ್ತಿಲ್ಲ. ರಾಜಕೀಯದಲ್ಲಿ ಆಸಕ್ತಿಯಿದ್ದರೆ, ಸೇರ್ಪಡೆಗೊಳ್ಳಿ,'' ಎಂದು ನಾಯ್ಡು ಹೇಳಿದ್ದಾರೆ.
ಧಾರ್ಮಿಕ ನಾಯಕರಿಗೇ ಬಿಡಿ ಎಂದ ಮುಲಾಯಂ:
ಸಮಾನ ನಾಗರಿಕ ಸಂಹಿತೆಗೆ ಸಂಬಂಧಿಸಿ ಮುಸ್ಲಿಂ ಸಂಸ್ಥೆಗಳ ವಿರೋಧಕ್ಕೆ ಧ್ವನಿಗೂಡಿಸಿರುವ ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್, ‘‘ಇಂಥ ವಿಷಯಗಳನ್ನು ಧಾರ್ಮಿಕ ವಿದ್ವಾಂಸರ ಪಾಲಿಗೆ ಬಿಟ್ಟುಬಿಡಬೇಕು,'' ಎಂದಿದ್ದಾರೆ. ‘‘ಈ ವಿಷಯಕ್ಕೆ ಸಂಬಂಧಿಸಿ ನಾನು ಹೆಚ್ಚಿಗೆ ಹೇಳುವುದಿಲ್ಲ. ಈ ನಿರ್ಧಾರವನ್ನು ಆಯಾ ಧಾರ್ಮಿಕ ನಾಯಕರಿಗೆ ಬಿಡಬೇಕು. ದೇಶ ಮತ್ತು ಮಾನವೀಯತೆ ವಿಷಯದಲ್ಲಿ ಪ್ರತಿಯೊಬ್ಬರೂ ಸಂಘಟಿತರಾಗಿರಬೇಕು,'' ಎಂದು ಮುಲಾಯಂ ಹೇಳಿದ್ದಾರೆ.
(ಏಜೆನ್ಸಿ ವರದಿ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.