
ಬೆಂಗಳೂರು: ಹಿಂದಿ ರಾಷ್ಟ್ರೀಯ ಭಾಷೆ, ಹಿಂದಿ ಇಲ್ಲದೇ ದೇಶದ ಪ್ರಗತಿ ಸಾಧ್ಯವಿಲ್ಲ ಎಂದಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿಕೆಗೆ ಕನ್ನಡಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕನ್ನಡ ಭಾಷೆಯೂ ಸೇರಿದಂತೆ ದೇಶದ ಎಲ್ಲ ರಾಜ್ಯಗಳ ಪ್ರಾದೇಶಿಕ ಭಾಷೆಗಳು ರಾಷ್ಟ್ರೀಯ ಭಾಷೆಗಳೇ ಆಗಿದ್ದರೂ ಕೇಂದ್ರ ಸರ್ಕಾರ ಕ್ರಮೇಣ ಸದ್ದಿಲ್ಲದೇ ಹಿಂದಿ ಭಾಷೆ ಹೇರುವ ಮೂಲಕ ಪ್ರಾದೇಶಿಕ ಭಾಷಿಕರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಕನ್ನಡಪರ ಸಂಘಟನೆಗಳು, ಕನ್ನಡದ ಹಿರಿಯ ಸಾಹಿತಿಗಳು ಮತ್ತು ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.
ಹಿಂದಿ ಭಾಷೆ ರಾಷ್ಟ್ರೀಯ ಭಾಷೆ ಎಂದು ಹೇಳುವ ಮೂಲಕ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹಸಿ ಸುಳ್ಳುಹೇಳುತ್ತಿದ್ದಾರೆ. ಇದು ಸಂವಿಧಾನ ವಿರೋಧಿ ಹೇಳಿಕೆ. ಇದರ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರ ಹೇಳಿಕೆ ಸಂವಿಧಾನ ವಿರೋಧಿಯಾದುದು. ಆ ಮಾತನ್ನು ಕನ್ನಡಿಗರು ಆದಿಯಾಗಿ ದೇಶದ ಎಲ್ಲ ಭಾಷಿಕ ಜನರು ವಿರೋಧಿಸಲೇಬೇಕು ಮತ್ತು ವಿರೋಧಿಸುತ್ತಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ‘ನಮ್ಮದು ಬಹುಭಾಷೆಗಳ ರಾಷ್ಟ್ರ. ಬಹುತ್ವದ ದೇಶ. ನಮ್ಮ ಸಂವಿಧಾನ ಅಂಗೀಕರಿಸಿರುವುದು ಮುಖ್ಯವಾಗಿ 22 ಭಾಷೆಗಳು. ನಮಗೆ ಯಾವುದೇ ಏಕೈಕ ರಾಷ್ಟ್ರಭಾಷೆ ಎಂಬುದು ಇಲ್ಲ. ಸಂವಿಧಾನದ ಮೂಲಕ ಅಂಗೀಕೃತಗೊಂಡಿರುವ 22 ಭಾಷೆಗಳು ರಾಷ್ಟ್ರಭಾಷೆಗಳೇ ಆಗಿವೆ. ಇದು ಸಂವಿಧಾನದತ್ತವಾದ ಭಾಷಿಕ ಅಧಿಕಾರ. ಈ ತಿಳಿವಳಿಕೆ ಇಲ್ಲದೇ ಹಿಂದಿಯನ್ನು ರಾಷ್ಟ್ರಭಾಷೆ ಎನ್ನುವುದು ಸಂವಿಧಾನ ವಿರೋಧಿ ಮಾತು' ಎಂದಿದ್ದಾರೆ.
ಒಕ್ಕೂಟ ವ್ಯವಸ್ಥೆ ಒಳಗೆ ಭಾಷಾವಾರು ಪ್ರಾಂತ್ಯ ರಚನೆ ಮಾಡಿರುವ ಉದ್ದೇಶದ ವಿರುದ್ಧದ ಮಾತು. ಈ ಹೊತು ಅಧಿಕಾರದಲ್ಲಿರುವ ಯಾವುದೇ ರಾಜಕಾರಣಿ ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆ ಗೌರವಿಸುವಂತೆ ಹೆಜ್ಜೆ ಇಡಬೇಕು ಮತ್ತು ಮಾತನಾಡಬೇಕು. ಅಧಿಕಾರದಲ್ಲಿ ಇರುವವರೇ ಸಂವಿಧಾನ ವಿರೋಧಿಸುವಂತೆ ಮಾತನಾಡಿದರೆ ಒಕ್ಕೂಟ ವ್ಯವಸ್ಥೆ ಹೇಗೆ ಉಳಿಯಲು ಸಾಧ್ಯ? ಒಕ್ಕೂಟ ವ್ಯವಸ್ಥೆ ಉಳಿಯುವುದಿಲ್ಲ. ಹಿಂದಿಯೂ ಕೂಡ ಹಲವು ಭಾಷೆಗಳಂತೆ ಒಂದು ಭಾಷೆ. ಆದ್ದರಿಂದ ಹಿಂದಿಯನ್ನು ಕಲಿಯಲೇಬೇಕು ಎನ್ನುವ ಬಲವಂತ ವಾಕ್ ಸ್ವಾತಂತ್ರ್ಯಕ್ಕೆ ದೊಡ್ಡ ಧಕ್ಕೆ ತಂದಂತೆ. ಆದ್ದರಿಂದ ಪ್ರತಿಯೊಂದು ರಾಜ್ಯದ ಭಾಷಿಕ ಜನರು ಕೂಡ ನಾಯ್ಡು ಅವರ ಮಾತನ್ನು ವಿರೋಧಿಸುತ್ತಾರೆ ಮತ್ತು ವಿರೋಧಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕದಲ್ಲಿ ಕನ್ನಡಕ್ಕೇ ಅಗ್ರಸ್ಥಾನ ಇರಲೇಬೇಕು. ಇನ್ನಿತರ ಭಾಷೆಗಳ ಕಲಿಯುವಿಕೆ ಐಚ್ಛಿಕವೇ ಹೊರತು ಹಿಂದಿಯನ್ನು ಕರ್ನಾಟಕದಲ್ಲಿ ಹೇರಲು ಆಗುವುದಿಲ್ಲ. ಯಾವುದೇ ಭಾಷೆಯನ್ನು ಒತ್ತಾಯಪೂರ್ವಕವಾಗಿ ಹೇರುವುದುನ್ನು ಕಡುವಾಗಿ ವಿರೋಧಿಸುತ್ತೇನೆ. ಯಾವ ಸರ್ಕಾರಗಳೂ ಕೂಡ ಭಾಷೆಯ ವಿಚಾರದಲ್ಲಿ ಒತ್ತಡ ಹೇರುವುದನ್ನು ಯಾವ ಭಾಷಿಕರೂ ಸಹಿಸುವುದಿಲ್ಲ. ಕನ್ನಡಿಗರಂತೂ ಕನ್ನಡದ ವಿರುದ್ಧ ಹೇರಿಕೆಯನ್ನು ಯಾವತ್ತಿಗೂ ಒಪ್ಪುವುದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಮನು ಬಳಿಗಾರ ಸ್ಪಷ್ಟಪಡಿಸಿದ್ದಾರೆ.
ಕಳೆದ ಐದು ದಶಕಗಳಿಂದ ಕನ್ನಡ ಭಾಷೆ, ನೆಲ, ಜಲಕ್ಕಾಗಿ ಸತತ ಹೋರಾಟ ನಡೆಸುತ್ತ ಬಂದಿದ್ದೇವೆ. ಕೇಂದ್ರ ಸರ್ಕಾರ ಕಾಲಕಾಲಕ್ಕೆ ಹಿಂದಿ ಹೇರಿಕೆಗೆ ಪ್ರಯತ್ನ ನಡೆಸುತ್ತಲೇ ಬಂದಿದೆ. ಆದರೆ ಎಂತಹುದೇ ಒತ್ತಡವಿದ್ದರೂ ಕನ್ನಡಿಗರು ಎಂದಿಗೂ ಸ್ವಾಭಿಮಾನ ಬಿಟ್ಟುಕೊಟ್ಟಿಲ್ಲ. ಇತ್ತೀಚೆಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಹಿಂದಿಯನ್ನು ಹೇರುವ ದುಸ್ಸಾಹಸಕ್ಕೆ ಮುಂದಾಗಿದೆ. ಇಷ್ಟೆಲ್ಲ ಆದರೂ ಕೂಡ ಕನ್ನಡ ನೆಲದ ಸರ್ಕಾರ ಸುಮ್ಮನೆ ಕುಳಿತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಗುಡುಗಿದ್ದಾರೆ.
ವೆಂಕಯ್ಯ ನಾಯ್ಡು ಅವರು ಕೇಂದ್ರ ಸಚಿವರಾಗಿ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅಂಥವರು ಹಿಂದಿ ರಾಷ್ಟ್ರೀಯ ಭಾಷೆ ಎಂಬುದಾಗಿ ಹಸಿಸುಳ್ಳು ಹೇಳುತ್ತಿರುವುದು ಮಹಾಪರಾಧ ಎಂದಿರುವ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಸಂವಿಧಾನದಲ್ಲಿ ಹಿಂದಿ ರಾಷ್ಟ್ರೀಯ ಭಾಷೆ ಎಂದು ಘೋಷಣೆ ಮಾಡಿಲ್ಲ. ಹಿಂದಿ ಕಲಿಯುವುದರಿಂದ ದೇಶ ಉದ್ಧಾರ ಆಗುತ್ತದೆ ಎಂಬುದಾದರೆ ಒಕ್ಕೂಟ ವ್ಯವಸ್ಥೆಗೆ ದೊಡ್ಡ ಧಕ್ಕೆ ಉಂಟಾಗಲಿದೆ. ದೇಶದ ಎಲ್ಲ ಭಾಷೆ ಮತ್ತು ಭಾಷಿಕರನ್ನು ಸಮಾನವಾಗಿ ಕಾಣುವಂತೆ ಸಂವಿಧಾನ ಹೇಳಿದೆ. ಎಲ್ಲೂ ಕೂಡ ಹಿಂದಿ ಹೇರಿಕೆಗೆ ಉತ್ತೇಜನ ನೀಡಿಲ್ಲ. ಹಿಂದಿ ಭಾಷೆ ಮೇಲೆ ದೇಶ ನಿಂತಿಲ್ಲ. ಎಲ್ಲ ಭಾಷಿಕರ ಸೌಹಾರ್ದ ಬಾಳ್ವೆಯ ಮೇಲೆ ದೇಶ ನಿಂತಿದೆ. ಭಾಷಾವಾರು ರಾಜ್ಯಗಳ ರಚನೆಯ ಆಧಾರದ ಮೇಲೆ ಭಾರತ ಒಕ್ಕೂಟ ರಾಷ್ಟ್ರವಾಗಿದೆ. ನಮಗೆ ಒಕ್ಕೂಟ ಭಾರತ ಬೇಕೆ ಹೊರತು ಹಿಂದಿ ಭಾರತ ನಮಗೆ ಬೇಕಿಲ್ಲ ಎಂದು ಗುಡುಗಿದ್ದಾರೆ.
ಇತ್ತೀಚೆಗೆ ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಹಿಂದಿಯಲ್ಲಿ ಭಾಷಣ ಮಾಡಿ ದಾಗಲೂ ಯಾವುದೇ ಸಚಿವರು, ಶಾಸಕರು ವಿರೋಧ ವ್ಯಕ್ತಪಡಿಸಲಿಲ್ಲ. ಆದರೆ ಜನಪ್ರ ತಿನಿಧಿಗಳು ಸುಮ್ಮನಿದ್ದರೂ ಕನ್ನಡಿಗರು ಸುಮ್ಮನಿರಲು ಸಾಧ್ಯವಿಲ್ಲ. ಕೇಂದ್ರ ಸಚಿವ ನಾಯ್ಡು ನೀಡಿರುವ ಹೇಳಿಕೆ ದುರಂತವಲ್ಲದೇ ಮತ್ತೇನಲ್ಲ. ಇಂತಹ ಅಟ್ಟಹಾಸವನ್ನು ನಾವು ಸಹಿಸುವುದಿಲ್ಲ.
- ವಾಟಾಳ್ ನಾಗರಾಜ್, ಕನ್ನಡಪರ ಹೋರಾಟಗಾರ
ಕನ್ನಡಪ್ರಭ ವಾರ್ತೆ
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.