
ಹೈದರಾಬಾದ್ (ಅ.31): ಮೂರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಹೊಸ ರಾಜ್ಯ ತೆಲಂಗಾಣ ಈ ಬಾರಿ ವಿನೂತನ ಕಾರಣದಿಂದಾಗಿ ಸುದ್ದಿಯಾಗಿದೆ. ಹೊಸ ರಾಜ್ಯದ ರಸ್ತೆ ಮತ್ತು ಕಟ್ಟಡ ನಿರ್ಮಾಣ ಇಲಾಖೆಯಲ್ಲಿ ವಾಸ್ತು ವಿಚಾರವನ್ನು ಕಟ್ಟುನಿಟ್ಟಾಗಿ ಅನುಸರಿಸಲು ತಜ್ಞರೊಬ್ಬರನ್ನು ನೇಮಿಸಿದ್ದಾರೆ. ಅವರ ಹೆಸರೇ ಸುದ್ದಲ ಸುಧಾಕರ ತೇಜಾ. ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ನೇತೃತ್ವದ ಸಂಪುಟದಲ್ಲಿ ಅಷ್ಟೊಂದು ಪ್ರಭಾವಶಾಲಿಯಲ್ಲದಿದ್ದರೂ ನಿರ್ಮಾಣ ವಿಚಾರದಲ್ಲಿ ಅವರ ಮಾತೇ ಅಂತಿಮ!
ವಾಸ್ತು ಸಲಹೆಗಾರರಾಗಿ ನೇಮಕಗೊಂಡಿದ್ದರೂ, ಸಂಪುಟ ದರ್ಜೆ ಸಚಿವರಿಗೆ ನೀಡುವ ಸ್ಥಾನಮಾನ ಅವರಿಗೆ ನೀಡಲಾಗಿದೆ. ಹೊಸ ರಾಜ್ಯದಲ್ಲಿ ನಿರ್ಮಾಣವಾಗುವ ಎಲ್ಲ ಸರ್ಕಾರಿ ಕಟ್ಟಡಗಳೂ ವಾಸ್ತು ನಿಯಮದಂತೆಯೇ ಇರಬೇಕು ಎಂದು ಅವರು ಸಲಹೆ, ಸೂಚನೆ ನೀಡುತ್ತಾರೆಂದು ‘ದ ಹಿಂದುಸ್ತಾನ್ ಟೈಮ್ಸ್' ವರದಿ ಮಾಡಿದೆ. ರಸ್ತೆ ಮತ್ತು ಕಟ್ಟಡ ನಿರ್ಮಾಣ ಇಲಾಖೆಯ ಎಲ್ಲ ಸಭೆಗಳಲ್ಲಿಯೂ ಅವರು ಹಾಜರಿದ್ದು ಸಲಹೆ ಸೂಚನೆ ನೀಡುತ್ತಾರೆ.
ಮುಖ್ಯಮಂತ್ರಿ ಚಂದ್ರಶೇಖರ ರಾವ್‌ಗೆ ವಾಸ್ತು ವಿಚಾರದಲ್ಲಿ ನಂಬಿಕೆ ಹೆಚ್ಚು. ಹೀಗಾಗಿಯೇ ಹೈದರಾಬಾದ್‌ನಲ್ಲಿರುವ ಹುಸೇನ್ ಸಾಗರ್ ಕೆರೆ ಮುಖ ಮಾಡಿ ಇರುವ ಸಚಿವಾಲಯದಲ್ಲಿ ಕೆಲಸ ಮಾಡಲು ಒಪ್ಪಿಯೇ ಇಲ್ಲ. ಅವರ ಪ್ರಕಾರ ಹಾಲಿ ಇರುವ ಕಟ್ಟಡದಲ್ಲಿ ಧನಾತ್ಮಕ ಅಂಶಗಳೇ ಇಲ್ಲವಂತೆ. ಹೀಗಾಗಿ, .1,200 ಕೋಟಿ ವೆಚ್ಚದಲ್ಲಿ ಹೊಸ ಸಚಿವಾಲಯ ನಿರ್ಮಿಸುವ ಇರಾದೆಯನ್ನು ಮುಖ್ಯಮಂತ್ರಿ ಹೊಂದಿದ್ದಾರೆ. ಅದಕ್ಕಾಗಿ ಖ್ಯಾತ ಕಟ್ಟಡ ವಿನ್ಯಾಸಕಾರ ಹಫೀಜ್ ಕಾಂಟ್ರಾಕ್ಟರ್‌ಗೆ ಹೊಸ ಸಚಿವಾಲಯ ಹೇಗಿರಬೇಕೆಂಬ ಬಗ್ಗೆ ವಿನ್ಯಾಸ ರೂಪಿಸಲು ಸೂಚಿಸಲಾಗಿದೆ. ಗಮನಾರ್ಹ ಅಂಶವೆಂದರೆ ಅವರು ವಿನ್ಯಾಸ ರೂಪಿಸಿದರೂ, ಸುಧಾಕರ ತೇಜಾ ಸೂಚಿಸುವ ವಾಸ್ತು ನಿಯಮಗಳಿಗೆ ಅನುಗುಣವಾಗಿರಬೇಕು!
ಕಾಂಗ್ರೆಸ್, ಬಿಜೆಪಿಯಿಂದ ವಿರೋಧ
ತೆಲಂಗಾಣ ಮುಖ್ಯಮಂತ್ರಿಗಳ ಪ್ರಸ್ತಾಪಕ್ಕೆ ಕಾಂಗ್ರೆಸ್, ಬಿಜೆಪಿಯಿಂದ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ಶಾಸಕ ಟಿ.ಜೀವನ್ ರೆಡ್ಡಿಯವರಂತೂ ನಿರ್ಧಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ‘‘ಹೊಸ ಸಚಿವಾಲಯದ ನಿರ್ಮಾಣ ನಿಜಕ್ಕೂ ಹಣದ ದುರುಪಯೋಗ,'' ಎಂದಿದ್ದಾರೆ ಕಾಂಗ್ರೆಸ್ ಶಾಸಕ. ಬಿಜೆಪಿಯ ಜಿ.ಕಿಶನ್ ರೆಡ್ಡಿ ಮಾತನಾಡಿ ‘‘ಅರವತ್ತು ವರ್ಷಗಳಿಂದ ಅವಿಭಜಿತ ಆಂಧ್ರಪ್ರದೇಶದ ಆಡಳಿತವನ್ನು ಹಾಲಿ ಸಚಿವಾಲಯದಲ್ಲಿಯೇ ನಿರ್ಧರಿಸಲಾಗುತ್ತಿತ್ತು. ಈಗ ಏಕೆ ಲೋಪ ಕಾಣಲಾಗುತ್ತಿದೆ?'' ಎಂದು ಪ್ರಶ್ನಿಸಿದ್ದಾರೆ.
ಆದರೆ ವಾಸ್ತು ಸಲಹೆಗಾರ ಸುದ್ದಲ ಸುಧಾಕರ ತೇಜಾ ಪ್ರಕಾರ ‘‘ಹಾಲಿ ಇರುವ ಕಟ್ಟಡದಲ್ಲಿ ವಾಸ್ತು ಸಮಸ್ಯೆ ಇದೆ. ಯಾವುದೇ ಕಟ್ಟಡದಲ್ಲಿ ನೈಸರ್ಗಿಕವಾಗಿ ಗಾಳಿ, ಬೆಳಕು ಎಲ್ಲ ಕಡೆಯಿಂದ ಹರಿದಾಡುವಂತಿರಬೇಕು. ವಾಸ್ತು ಎನ್ನುವುದು ಮೂಢನಂಬಿಕೆಯಲ್ಲ. ಅದೊಂದು ಧಾರ್ಮಿಕ ವಿಜ್ಞಾನ,'' ಎಂದು ಅವರು ಸಮರ್ಥನೆ ನೀಡಿದ್ದಾರೆ. ಉತ್ತಮ ಕೆಲಸ ಮಾಡುವ ವಾತಾವರಣ ಇದ್ದರೆ ಮುಖ್ಯಮಂತ್ರಿಗೆ ಉತ್ತಮ ರೀತಿಯಲ್ಲಿ ನಿರ್ಧಾರ ಕೈಗೊಂಡು, ಸರಿಯಾದ ರೀತಿಯಲ್ಲಿ ಆಡಳಿತ ನಿರ್ವಹಿಸಲು ಸಾಧ್ಯವಾಗುತ್ತದೆ ಎನ್ನುವುದು ತೇಜಾ ಪ್ರತಿಪಾದನೆ.
ರಂಗಭೂಮಿ ಮತ್ತು ತೆಲುಗಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ತೇಜಾ ಕೆ.ಚಂದ್ರಶೇಖರ ರಾವ್ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿ ಅದ್ದೂರಿ ಯಾಗಿ ನಿರ್ಮಿಸಿರುವ ಮನೆಗೂ ವಾಸ್ತು ಸಲಹೆ ನೀಡಿದ್ದಾರೆ. ಇಷ್ಟುಮಾತ್ರವಲ್ಲದೆ .35 ಕೋಟಿ ವೆಚ್ಚದಲ್ಲಿ ಸಿಎಂ ಅಧಿಕೃತ ನಿವಾಸ ಮತ್ತು 125 ಅಡಿ ಎತ್ತರದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ, ಹೈದರಾಬಾದ್‌ನ ಎನ್‌ಟಿಆರ್ ಗಾರ್ಡನ್‌ನಲ್ಲಿ ತೆಲಂಗಾಣ ಹುತಾತ್ಮರ ಸ್ಮಾರಕ ತೇಜಾ ಅವರ ಸಲಹೆಯಂತೆ ನಿರ್ಮಾಣವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.