ಮಗನ ಮದುವೆ: ವಿನಾಯ್ತಿ ಕೋರಿದ ವಿ. ನಾಗರಾಜ್

By Suvarna Web deskFirst Published Jan 18, 2018, 4:54 PM IST
Highlights

ಅಮಾನ್ಯಗೊಂಡ 500 ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ಅಕ್ರಮವಾಗಿ ಬದಲಿಸಿದ ಆರೋಪ ಸಂಬಂಧ ಶ್ರೀರಾಂಪುರ ಠಾಣಾ ಪೊಲೀಸರು ತಮ್ಮ ವಿರುದ್ಧ ದಾಖಲಿಸಿದ್ದ ಪ್ರಕರಣದಲ್ಲಿ ಹೈಕೋರ್ಟ್ 2017ರ ಸೆ.21ರಂದು ತಮಗೆ ಜಾಮೀನು ನೀಡಿತ್ತು.

ಬೆಂಗಳೂರು(ಜ.18): ಮಗನ ಮದುವೆಯ ಹಿನ್ನೆಲೆಯಲ್ಲಿ ಶ್ರೀರಾಂಪುರ ಪೊಲೀಸ್ ಠಾಣೆಗೆ ಹಾಜರಾಗುವುದರಿಂದ ವಿನಾಯ್ತಿ ನೀಡುವಂತೆ ಕೋರಿ ಅಮಾನ್ಯಗೊಂಡ 500 ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ಅಕ್ರಮವಾಗಿ ಬದಲಿಸಿದ ಮತ್ತು ಹಲವರಿಂದ ಹಣ ದರೋಡೆ ಮಾಡಿದ್ದ ಆರೋಪ ಸಂಬಂಧ ಪೊಲೀಸರಿಂದ ಬಂಧನಕ್ಕೊಳಗಾಗಿ ಜಾಮೀನು ಪಡೆದಿರುವ ಆರೋಪಿ ಮಾಜಿ ರೌಡಿ ಶೀಟರ್ ವಿ.ನಾಗರಾಜ್ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಅಮಾನ್ಯಗೊಂಡ 500 ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ಅಕ್ರಮವಾಗಿ ಬದಲಿಸಿದ ಆರೋಪ ಸಂಬಂಧ ಶ್ರೀರಾಂಪುರ ಠಾಣಾ ಪೊಲೀಸರು ತಮ್ಮ ವಿರುದ್ಧ ದಾಖಲಿಸಿದ್ದ ಪ್ರಕರಣದಲ್ಲಿ ಹೈಕೋರ್ಟ್ 2017ರ ಸೆ.21ರಂದು ತಮಗೆ ಜಾಮೀನು ನೀಡಿತ್ತು. ಈ ವೇಳೆ ತನಿಖೆ ಪೂರ್ಣವಾಗುವರೆಗೂ ಪ್ರತಿ ಗುರುವಾರ ಶ್ರೀರಾಮಪುರ ಠಾಣೆಗೆ (ಕೆಲಸದ ಅವಧಿಯಲ್ಲಿ) ಹಾಜರಾಗಬೇಕು ಎಂದು ಹೈಕೋರ್ಟ್ ಷರತ್ತು ವಿಧಿಸಿದೆ.

ಆದರೆ, ನನ್ನ ಮಗ ಎನ್.ಗಾಂಧಿ ಅವರ ಮದುವೆ ಜ.18 ಮತ್ತು 19ರಂದು ನಗರದ ಕಲ್ಯಾಣ ಮಂಟಪವೊಂದರಲ್ಲಿ ನಡೆಯುತ್ತಿದೆ. ಜ.18 ರಂದು ಸಂಜೆ 6.30ಕ್ಕೆ ಆರಕ್ಷತೆಯು ನಡೆಯಲಿದೆ. ಜ.19ರಂದು ಬೆಳಗ್ಗೆ 8.30ರಿಂದ 9.30ರವರೆಗೆ ಮುಹೂರ್ತ ನಡೆಯಲಿದೆ. ಮದುವೆ ನಡೆಯುವ ಸಂದರ್ಭದಲ್ಲಿ ನಾನು ಕಲ್ಯಾಣ ಮಂಟಪದಲ್ಲಿ ಇರಬೇಕಿರುವುದರಿಂದ ಶ್ರೀರಾಮಪುರ ಠಾಣೆಗೆ ಹಾಜರಾಗಲು ಕಷ್ಟಸಾಧ್ಯವಿದೆ. ಆದ್ದರಿಂದ ಠಾಣೆಗೆ ಹಾಜರಾಗುವುದರಿಂದ ವಿನಾಯ್ತಿ ನೀಡಬೇಕು ಎಂದು ಕೋರಿ ವಿ.ನಾಗರಾಜು ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಯು ಬುಧವಾರ ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ್ ಅವರಿದ್ದ ಏಕ ಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಆದರೆ, ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿದ ನ್ಯಾಯಮೂರ್ತಿಗಳು, ಈ ಅರ್ಜಿಯನ್ನು ಜಾಮೀನು ಮಂಜೂರು ಮಾಡಿದ ನ್ಯಾಯಪೀಠವೇ ವಿಚಾರಣೆ ನಡೆಸಬೇಕಿದೆ ಎಂದು ತಿಳಿಸಿದರು. ನಂತರ ವಿ.ನಾಗರಾಜು ಅವರಿಗೆ ಜಾಮೀನು ಮಂಜೂರು ಮಾಡಿದ್ದ ನ್ಯಾಯಮೂರ್ತಿ ರತ್ನಕಲಾ ಅವರ ಪೀಠದ ಮುಂದೆ ಈ ಅರ್ಜಿ ವಿಚಾರಣೆಗೆ ನಿಗದಿಪಡಿಸಲು ಕೋರ್ಟ್ ಸಿಬ್ಬಂದಿಗೆ ನಾಯಮೂರ್ತಿ ಬೂದಿಹಾಳ್ ಅವರು ನಿರ್ದೇಶಿಸಿದರು.

ವಿ.ನಾಗರಾಜು ಅವರೊಂದಿಗೆ ಅವರ ಪುತ್ರನಾದ ಮದುವೆ ಗಂಡು ಎನ್.ಗಾಂಧಿ ಹಾಗೂ ಮತ್ತೊಬ್ಬ ಪುತ್ರ ಶಾಸ್ತ್ರಿ ಸಹ, ಶ್ರೀರಾಮಪುರ ಠಾಣೆಗೆ ಹಾಜರಾಗುವುದರಿಂದ ವಿನಾಯ್ತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯು ಗುರುವಾರ ನ್ಯಾಯಮೂರ್ತಿ ರತ್ನಕಲಾ ಅವರ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿದೆ. 2019ರ ನ.8ರಂದು ಅಮಾನ್ಯಗೊಂಡಿದ್ದ 500 ಹಾಗೂ 1000 ರು. ಮುಖಬೆಲೆ ನೋಟುಗಳು ಅಕ್ರಮವಾಗಿ ಬದಲಿಸಿದ ಪ್ರಕರಣದಲ್ಲಿ ಈ ಮೂವರು ಆರೋಪಿಗಳಾಗಿದ್ದಾರೆ.

click me!