
ಡೆಹ್ರಾಡೂನ್(ಮಾ.21): ಹಿಂದುಗಳ ಪವಿತ್ರ ನದಿ ಗಂಗೆಯನ್ನು ಪುನರುಜ್ಜೀವನಗೊಳಿಸಲು ಕೇಂದ್ರ ಸರ್ಕಾರ ಯೋಜನೆ ಕೈಗೆತ್ತಿಕೊಂಡಿರುವಾಗಲೇ, ದೇಶದ ಅತಿದೊಡ್ಡ ನದಿಗಳಾಗಿರುವ ಗಂಗಾ, ಯಮುನಾ ಮತ್ತು ಅವುಗಳ ಉಪನದಿಗಳಿಗೆ ‘ಜೀವಂತ ವ್ಯಕ್ತಿ'ಯ ಮಾನ್ಯತೆಯನ್ನು ಉತ್ತರಾಖಂಡ ಹೈಕೋರ್ಟ್ ಸೋಮವಾರ ದಯಪಾಲಿಸಿದೆ.
ದೇಶದಲ್ಲಿ ನದಿಗಳಿಗೆ ಮಾನವ ಜೀವಿಯ ಸ್ಥಾನಮಾನ ನೀಡುತ್ತಿರುವ ಮೊದಲ ಪ್ರಕರಣ ಇದಾಗಿದೆ. ನ್ಯೂಜಿಲೆಂಡ್‌ನ ವಾಂಗನುಯಿ ನದಿಗೆ ಇಂತಹುದ್ದೇ ಸ್ಥಾನಮಾನ ನೀಡಲು ಅಲ್ಲಿನ ಸಂಸತ್ತು ಕಳೆದ ಬುಧವಾರವಷ್ಟೇ ಮಸೂದೆ ಅಂಗೀಕರಿಸಿತ್ತು. ಜೀವಂತ ವ್ಯಕ್ತಿಯ ಸ್ಥಾನಮಾನ ಪಡೆದ ವಿಶ್ವದ ಮೊದಲ ನದಿ ಅದಾಗಿತ್ತು. ಇದೀಗ ಅಂತಹ ಮಾನ್ಯತೆ ಪಡೆದ ವಿಶ್ವದ ಎರಡನೇ ನದಿಗಳು ಎಂಬ ಹಿರಿಮೆಗೆ ಗಂಗಾ, ಯಮುನಾ ಮತ್ತು ಅವುಗಳ ಉಪನದಿಗಳು ಪಾತ್ರವಾಗಿವೆ. ಗಂಗಾನದಿ 2500 ಕಿ.ಮೀ., ಯಮುನಾ 960 ಕಿ.ಮೀ ದೂರ ಹರಿಯುತ್ತದೆ. ಆದರೆ ಇದಕ್ಕೆ ಹೋಲಿಸಿದರೆ ವಾಂಗನುಯಿ ಚಿಕ್ಕದಾಗಿದ್ದು, ಕೇವಲ 145 ಕಿ.ಮೀ. ದೂರದವರೆಗೆ ಕ್ರಮಿಸುತ್ತದೆ.ಗಂಗಾ, ಯಮುನಾ ಮತ್ತು ಅವುಗಳ ಉಪನದಿಗಳಿಗೆ ಉತ್ತರಾಖಂಡ ಹೈಕೋರ್ಟ್ ಜೀವಂತ ವ್ಯಕ್ತಿಯ ಸ್ಥಾನಮಾನ ನೀಡಿರುವುದರಿಂದಾಗಿ ಮಾನವರಿಗೆ ಇರುವ ಹಕ್ಕುಗಳು ಈ ನದಿಗಳಿಗೂ ಲಭ್ಯವಾಗಲಿವೆ. ಒಂದು ವೇಳೆ ಈ ನದಿಗಳನ್ನು ಯಾರಾದರೂ ಮಲಿನಗೊಳಿಸಲು ಯತ್ನಿಸಿದರೆ, ಮಾನವರಿಗೆ ಹಾನಿ ಮಾಡಿದಷ್ಟೇ ಅಪರಾಧ ಎನಿಸಿಕೊಳ್ಳಲಿದೆ. ಗಂಗಾ, ಯಮುನಾ ನದಿಯನ್ನು ಸ್ವಚ್ಛಗೊಳಿಸಿ, ಉತ್ತಮವಾಗಿ ನಿರ್ವಹಿಸಲು ಗಂಗಾ ಆಡಳಿತ ಮಂಡಳಿಯನ್ನು ಅಸ್ತಿತ್ವಕ್ಕೆ ತರುವಂತೆಯೂ ಉತ್ತರಾಖಂಡ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿದೆ.
ಗಂಗಾ ಮತ್ತು ಯಮುನಾ ನದಿ ಸ್ವಚ್ಛತೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಾಸಾರಂಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಹೈಕೋರ್ಟ್ ಹರಿಹಾಯ್ದಿತ್ತು. ಅಸ್ತಿತ್ವದಲ್ಲಿ ಇಲ್ಲದ ಸರಸ್ವತಿ ನದಿಯನ್ನು ಪುನರುಜ್ಜೀವನಗೊಳಿಸಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದೀರಿ. ಆದರೆ, ಹಿಂದಿನ ವೈಭವಕ್ಕೆ ಮರಳಬಹುದಾದ ಅವಕಾಶ ಗಂಗೆ ಮತ್ತು ಯಮುನೆಗೆ ಇದ್ದರೂ ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಿಲ್ಲ. ಭವಿಷ್ಯದ ಪೀಳಿಗೆಗಾದರೂ ನದಿಯನ್ನು ಉಳಿಸಬೇಕು ಎಂದು ಹೇಳಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.