ಡೈರಿ ವಿವಾದಕ್ಕೆ ಹೊಸ ತಿರುವು: ಅಕ್ಷರ ಗೋವಿಂದರಾಜುವುದಲ್ಲ ಎಂದ ವರದಿ

Published : Mar 21, 2017, 03:42 AM ISTUpdated : Apr 11, 2018, 01:06 PM IST
ಡೈರಿ ವಿವಾದಕ್ಕೆ ಹೊಸ ತಿರುವು: ಅಕ್ಷರ ಗೋವಿಂದರಾಜುವುದಲ್ಲ ಎಂದ ವರದಿ

ಸಾರಾಂಶ

ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ‘ಡೈರಿ ಕಪ್ಪ' ಪ್ರಕರಣಕ್ಕೆ ಹೊಸ ತಿರುವು ಲಭಿಸಿದ್ದು, ಡೈರಿಯ ಕೈಬರಹ ಕಾಂಗ್ರೆಸ್‌ ನಾಯಕ ಗೋವಿಂದರಾಜು ಅವರದ್ದಲ್ಲ ಎಂದು ಖಾಸಗಿ ಲ್ಯಾಬ್‌ನ ತಜ್ಞರು ವರದಿ ನೀಡಿದ್ದಾರೆಂದು ಕಾಂಗ್ರೆಸ್‌ ಹೇಳಿಕೊಂಡಿದೆ. ಪದ್ಮಭೂಷಣ ಪುರಸ್ಕೃತ ತಜ್ಞ ಡಾ|ಪಿ.ಚಂದ್ರಶೇಖರನ್‌ ಹೀಗೊಂದು ವರದಿ ನೀಡಿದ್ದಾರೆ ಎಂಬ ಸಂಗತಿಯೊಂದಿಗೆ ಈಗ ಡೈರಿಯಲ್ಲಿನ ಕೈಬರಹ ಅಸಲಿಯೋ ನಕಲಿಯೋ ಎಂಬ ಚರ್ಚೆ ಆರಂಭವಾಗಿದೆ.

ಬೆಂಗಳೂರು(ಮಾ.21): ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ‘ಡೈರಿ ಕಪ್ಪ' ಪ್ರಕರಣಕ್ಕೆ ಹೊಸ ತಿರುವು ಲಭಿಸಿದ್ದು, ಡೈರಿಯ ಕೈಬರಹ ಕಾಂಗ್ರೆಸ್‌ ನಾಯಕ ಗೋವಿಂದರಾಜು ಅವರದ್ದಲ್ಲ ಎಂದು ಖಾಸಗಿ ಲ್ಯಾಬ್‌ನ ತಜ್ಞರು ವರದಿ ನೀಡಿದ್ದಾರೆಂದು ಕಾಂಗ್ರೆಸ್‌ ಹೇಳಿಕೊಂಡಿದೆ. ಪದ್ಮಭೂಷಣ ಪುರಸ್ಕೃತ ತಜ್ಞ ಡಾ|ಪಿ.ಚಂದ್ರಶೇಖರನ್‌ ಹೀಗೊಂದು ವರದಿ ನೀಡಿದ್ದಾರೆ ಎಂಬ ಸಂಗತಿಯೊಂದಿಗೆ ಈಗ ಡೈರಿಯಲ್ಲಿನ ಕೈಬರಹ ಅಸಲಿಯೋ ನಕಲಿಯೋ ಎಂಬ ಚರ್ಚೆ ಆರಂಭವಾಗಿದೆ.

 

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಬಿಜೆಪಿಯವರು ಹೇಳುತ್ತಿರುವ ಡೈರಿ ಪ್ರಕರಣದಲ್ಲಿ ಯಾವುದೇ ಸತ್ಯಾಂಶವಿಲ್ಲ. ಏಕೆಂದರೆ, ಡೈರಿಯಲ್ಲಿನ ಕೈಬರಹ ನಕಲಿ ಎಂಬ ವರದಿ ನಮ್ಮ ಕೈಸೇರಿದೆ. ಅದನ್ನು ಶೀಘ್ರವೇ ಬಹಿರಂಗ ಪಡಿಸುತ್ತೇವೆ ಎಂದು ಹೇಳಿದರು. ಆದರೆ, ಇದನ್ನು ಅಲ್ಲಗಳೆದ ಬಿಜೆಪಿ ವಕ್ತಾರರು, ಉಪ ಚುನಾವಣೆ ಹಿನ್ನೆಲೆಯಲ್ಲಿ ಇದು ಕಾಂಗ್ರೆಸ್‌ ಮಾಡಿರುವ ಷಡ್ಯಂತ್ರ. ಜನರನ್ನು ತಪ್ಪುದಾರಿಗೆ ಎಳೆಯಲು ಕಾಂಗ್ರೆಸ್‌ ಡೈರಿಯ ಅಸಲಿಯತ್ತನ್ನೇ ಪ್ರಶ್ನಿಸುತ್ತಿರುವುದು ಆ ಪಕ್ಷಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದರು. ಈ ಮಧ್ಯೆ ಸ್ಥಳೀಯ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಡೈರಿ ಸೋರಿ ಕೆಯಾಗಿಲ್ಲ. ಗೋವಿಂದರಾಜು ಅವರ ನಿವಾಸದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಡೈರಿಯೊಂದನ್ನು ವಶಪಡಿಸಿಕೊಳ್ಳಲಾಗಿತ್ತು. ಅದನ್ನು ದೆಹಲಿ ಕಚೇರಿಗೆ ಕಳುಹಿಸಲಾಗಿದೆ. ಒಂದೊಮ್ಮೆ ಸೋರಿಕೆಯಾಗಿದ್ದರೆ, ಅದು ಅಲ್ಲಿಂದಲೇ ಆಗಿರಬಹುದು ಎಂದು ಹೇಳುವ ಮೂಲಕ ಪ್ರಕರಣದ ನಿಗೂಢತೆಯನ್ನು ಹೆಚ್ಚಿಸಿದರು.

ಇಷ್ಟಾಗಿಯೂ ಡೈರಿ ಗೋವಿಂದರಾಜು ಅವರ ನಿವಾಸದಲ್ಲೇ ದೊರಕಿರುವುದರಿಂದ ಅದರ ಸ್ವಾಮಿತ್ವ ಗೋವಿಂದರಾಜು ಅವರದ್ದೇ ಆಗುತ್ತದೆ ಎಂದು ಹೇಳಲಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳ ಮೂಲಕ ಮತ್ತೆ ಡೈರಿ ಪ್ರಕರಣದ ಚರ್ಚೆ ವಿಪರೀತಕ್ಕೆ ಹೋಗುವಂತಾಗಿದ್ದು, ಅದರಲ್ಲೂ ಉಪ ಚುನಾವಣೆಯ ಕಾವು ಏರುತ್ತಿರುವ ವೇಳೆ ಡೈರಿ ಪ್ರಕರಣ ನಕಲಿ ಎನ್ನುವ ಮಾಹಿತಿ ಬಂದಿರುವುದು ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಮತ್ತೊಂದು ಸುತ್ತಿನ ವಾಕ್ಸಮರಕ್ಕೂ ದಾರಿಯಾಗುವ ಸಾಧ್ಯತೆ ಇದೆ.

ದಿನೇಶ್‌ ಗುಂಡೂರಾವ್‌ ಹೇಳಿದ್ದೇನು?: ಸೋಮವಾರ ದಿಢೀರ್‌ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಇದು ಬಿಜೆಪಿ ಹೆಣೆದಿರುವ ಸುಳ್ಳು. ಪವನ್‌ ಎಂಬ ವಕೀಲರೊಬ್ಬರು ಡೈರಿಯಲ್ಲಿರುವ ಹಸ್ತಾಕ್ಷರದ ಬಗ್ಗೆ ಫೋರೆನ್ಸಿಕ್‌ ಪರೀಕ್ಷೆ ಮಾಡಿಸಿದ್ದಾರೆ. ಪ್ರಖ್ಯಾತ ತಜ್ಞರು ಪರೀಕ್ಷೆ ನಡೆಸಿ ವರದಿ ನೀಡಿದ್ದು, ಡೈರಿಯಲ್ಲಿರುವ ಹಸ್ತಾಕ್ಷರ ಗೋವಿಂದರಾಜು ಅವರದಲ್ಲ ಎನ್ನುವುದು ಪರೀಕ್ಷೆಯಿಂದ ಸ್ಪಷ್ಟವಾಗಿದೆ ಎಂದು ಹೇಳಿದರು.

ವರದಿಯಲ್ಲಿ ಏನಿದೆ?: ಕಾಂಗ್ರೆಸ್‌ ನಾಯಕರು ಹೇಳುವ ಪ್ರಕಾರ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಡಾ| ಪಿ.ಚಂದ್ರಶೇಖರನ್‌ ಹೇಳಿರುವುದು ಹೀಗೆ: ವಕೀಲ ಪವನ್‌ ಎಂಬುವರ ಕೋರಿಕೆ ಮೇರೆಗೆ ಕೈಬರಹ ಗೋವಿಂದರಾಜು ಅವರದ್ದು ಹೌದೋ ಅಲ್ಲವೋ ಎಂಬ ಬಗ್ಗೆ ಪರೀಕ್ಷೆ ನಡೆಸಿದ್ದೇನೆ. ಡೈರಿಯಲ್ಲಿ ನಮೂದಾಗಿರುವ ಬರಹಕ್ಕೂ, ಗೋವಿಂದರಾಜು ಅವರ ಬರವಣಿಗೆಗೂ ಸಾಕಷ್ಟುವ್ಯತ್ಯಾಸ ಕಂಡುಬಂದಿದೆ. ಡೈರಿಯಲ್ಲಿ ಕಂಡುಬಂದಿರುವ ಅಕ್ಷರಗಳಿಗೂ ಅವರ ಕೈಬರಹಕ್ಕೂ ತಾಳೆಯಾಗುತ್ತಿಲ್ಲ. ಡೈರಿಯ ಪ್ರತಿಗಳಲ್ಲಿರುವ ಆರ್‌ ಅಕ್ಷರಕ್ಕೂ ಹಾಗೂ ಇ ಅಕ್ಷರಕ್ಕೂ ಹೊಂದಾಣಿಕೆಯಾಗುತ್ತಿಲ್ಲ. ಅಕ್ಷರಗಳ ರಚನೆಯಲ್ಲಿ ವ್ಯತ್ಯಾಸ ಕಂಡುಬರುತ್ತಿರುವುದರಿಂದ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನಾನು ಇದನ್ನು ಅಧ್ಯಯನ ಮಾಡಿಯೇ ವರದಿ ನೀಡುತ್ತಿ​ದ್ದೇನೆ. ಆಂಗ್ಲ ಭಾಷೆಯಲ್ಲಿರುವ ಅಕ್ಷರ​ಗಳು ಸಾಕಷ್ಟುಗೊಂದಲ ಸೃಷ್ಟಿಸುತ್ತಿರು​ವುದ​ರಿಂದ ಅನೇಕ ಸಂದೇ​ಹಗಳು ಮೂಡುತ್ತಿವೆ. ಒಂದಕ್ಕೊಂದು ಜೋ​ಡಿಸಿ ಬರೆಯಲಾಗಿದ್ದು, ಇದನ್ನು ಉದ್ದೇಶ​ಪೂರ್ವಕ​ವಾಗಿಯೇ ಅಪರಿಚಿತ ವ್ಯಕ್ತಿಗಳು ಬರೆದಿ​ರುವ ಸಾಧ್ಯತೆ ಇದೆ. ಹೀಗಾಗಿ ಡೈರಿಯಲ್ಲಿರುವ ಅಂಶಗಳನ್ನು ನಂಬಲು ಸಾಧ್ಯವಿಲ್ಲ.

ಏನಿದು ಡೈರಿ ಪ್ರಕರಣ?: ರಾಜ್ಯದ ಕಾಂಗ್ರೆಸ್‌ ನಾಯಕರು ಪಕ್ಷದ ಹೈಕಮಾಂಡ್‌ಗೆ ದೇಣಿಗೆ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದ್ದರು. ಕೆಪಿಸಿಸಿ ಖಜಾಂಚಿ ಕೆ.ಗೋವಿಂದರಾಜು ಅವರಿಗೆ ಸೇರಿದ್ದೆ​ನ್ನಲಾದ ಡೈರಿಯಲ್ಲಿನ ವರದಿಗಳು ಬಯ​ಲಾಗಿದ್ದವು. ಈ ಡೈರಿಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ಗೆ ಹಣ ಕೊಟ್ಟಿರುವ ಬಗ್ಗೆ ಮಾಹಿತಿ ಇದೆ. ಡೈರಿಯಲ್ಲಿ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಮೊದಲಾ​ದವರ ಹೆಸರುಗಳೂ ಉಲ್ಲೇಖವಾಗಿವೆ. ಹಲವು ಹೆಸರುಗಳು ಕೇವಲ ಇನಿಶಿಯಲ್‌ಗಳಲ್ಲಿವೆ. ಆದ್ದರಿಂದ ಎಲ್ಲಾ ಹೆಸರುಗಳು ಸ್ಪಷ್ಟವಾಗಿಲ್ಲ. ಸ್ಟೀಲ್‌ ಫ್ಲೈಓವರ್‌ ಯೋಜನೆಗೆ 65 ಕೋಟಿ ರು. ಕೊಟ್ಟಿರುವ ಬಗ್ಗೆಯೂ ಡೈರಿಯಲ್ಲಿದೆ.

 

ವರದಿ: ಕನ್ನಡ ಪ್ರಭ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಘ ಸಂಸ್ಕಾರದಿಂದಲೇ ರಾಜಕಾರಣವನ್ನು ಸಂಸ್ಕರಿಸಿದ ಅಟಲ್ ಜೀ: ಕಿರಣಕುಮಾರ ವಿವೇಕವಂಶಿ ಲೇಖನ!
ಚಿತ್ರದುರ್ಗ ಬಸ್‌ ದುರಂತ: ಕವಿತಾಳ ಮದುವೆಯ ಬ್ಯಾಚುಲರ್ ಪಾರ್ಟಿಗೆ ಪ್ರವಾಸ ಹೊರಟಿದ್ದ ತಾಯಿ-ಮಗಳು ಮಿಸ್ಸಿಂಗ್, ಉಳಿದವರು ಸೇಫ್