ಅಮೆರಿಕಾಗೆ ಹೋಗಬೇಕಾ ? ಹಾಗಾದ್ರೆ ಈ ನಿಯಮ ಕಡ್ಡಾಯ

By Web DeskFirst Published Jun 3, 2019, 3:29 PM IST
Highlights

ಅಮೆರಿಕಾಗೆ ತೆರಳಲು ವೀಸಾ ಪಡೆದುಕೊಳ್ಳಲು ಹೊಸ ಕಡ್ಡಾಯ ನಿಯಮವೊಂದನ್ನು ಜಾರಿ ಮಾಡಲಾಗುತ್ತಿದೆ. ಯಾವು ಆ ನಿಯಮ..? 

ಬೆಂಗಳೂರು :  ತನ್ನ ದೇಶಕ್ಕೆ ಭೇಟಿ ನೀಡುವ ವಿದೇಶಿಗರ ಪೂರ್ವಾಪರ ಪರಿಶೀಲನೆಯನ್ನು ಮತ್ತಷ್ಟು ತೀವ್ರಗೊಳಿಸಿರುವ ಅಮೆರಿಕ, ವೀಸಾಗೆ ಅರ್ಜಿ ಸಲ್ಲಿಸುವವರು ಸಾಮಾಜಿಕ ಜಾಲತಾಣಗಳ ಬಳಕೆ ಕುರಿತು ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಿದೆ. ಅಲ್ಲದೆ 5 ವರ್ಷ ಕಾಲ ಉಪಯೋಗಿಸಿದ ಇ-ಮೇಲ್ ವಿಳಾಸ ಹಾಗೂ ಫೋನ್ ಸಂಖ್ಯೆಗಳನ್ನೂ ನೀಡುವಂತೆಯೂ ಸೂಚನೆ ನೀಡಿದೆ.

ಅಮೆರಿಕದ ವಿದೇಶಾಂಗ ಇಲಾಖೆ ಜಾರಿಗೆ ತಂದಿರುವ ಈ ನಿಯಮಾವಳಿಯಿಂದ ವಾರ್ಷಿಕ 1.47 ಕೋಟಿ ಜನರ ಮೇಲೆ ಪರಿಣಾಮ ಉಂಟಾಗಲಿದೆ. ಉದ್ಯೋಗ ಅಥವಾ ಶಿಕ್ಷಣಕ್ಕಾಗಿ ಅಮೆರಿಕ ವೀಸಾ ಬಯಸುವವರು ಇನ್ನು ಮುಂದೆ ಈ ಮಾಹಿತಿ ನೀಡುವುದು ಕಡ್ಡಾಯ. ಆದರೆ ಕೆಲವು ರಾಜತಾಂತ್ರಿಕರು ಹಾಗೂ ಸರ್ಕಾರಗಳಿಂದ ಅಧಿಕೃತ ಪ್ರವಾಸಕ್ಕೆ ಬರುವವರಿಗೆ ವಿನಾಯಿತಿ ಇರಲಿದೆ.

ವೀಸಾ ಅರ್ಜಿಯಲ್ಲಿ ವೈಯಕ್ತಿಕ ಮಾಹಿತಿ ಅಲ್ಲದೆ, 5 ವರ್ಷಗಳಿಂದ ತಾವು ಬಳಸುತ್ತಿರುವ ಸಾಮಾಜಿಕ ಜಾಲತಾಣಗಳ ಮಾಹಿತಿ ನೀಡಬೇಕು. ಸದ್ಯಕ್ಕೆ ಪ್ರಮುಖ ಸಾಮಾಜಿಕ ಜಾಲತಾಣಗಳ ಪಟ್ಟಿಯನ್ನು ಅಮೆರಿಕ ನೀಡಿದೆ. ಶೀಘ್ರದಲ್ಲೇ ಎಲ್ಲ ಸಾಮಾಜಿಕ ಜಾಲತಾಣಗಳ ಪಟ್ಟಿ ಲಭ್ಯವಾಗುತ್ತದೆ.

ಒಂದು ವೇಳೆ, ವೀಸಾ ಅರ್ಜಿದಾರರು ಸಾಮಾಜಿಕ ಜಾಲತಾಣವನ್ನು ಬಳಸುತ್ತಿ ಲ್ಲವಾದರೆ, ಅದನ್ನು ಘೋಷಿಸಿಕೊಳ್ಳಲು ಆಯ್ಕೆಯೂ ಇರುತ್ತದೆ. ಆದರೆ ಸುಳ್ಳು ಮಾಹಿತಿ ನೀಡಿರುವುದು ಸಾಬೀತಾದರೆ ಗಂಭೀರ ವಲಸೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ಇತ್ತೀಚಿನ ವರ್ಷಗಳಲ್ಲಿ ವಿಶ್ವಾದ್ಯಂತ ನಾವು ಗಮನಿಸಿರುವ ಪ್ರಕಾರ, ಭಯೋತ್ಪಾದಕ ಭಾವನೆ ಹಾಗೂ ಚಟುವಟಿಕೆಗಳಿಗೆ ಸಾಮಾಜಿಕ ಜಾಲತಾಣಗಳು ಪ್ರಮುಖ ವೇದಿಕೆಯಾಗಿವೆ’ ಎಂದು ಹೇಳಿದ್ದಾರೆ. 

click me!