ಹಫೀಜ್‌, ಅಜರ್‌ ವಿರುದ್ಧ ಕ್ರಮಕ್ಕೆ ಪಾಕಿಸ್ತಾನಕ್ಕೆ ಅಮೆರಿಕ ವಾರ್ನಿಂಗ್!

By Web DeskFirst Published Sep 28, 2019, 11:46 AM IST
Highlights

ವಿಶ್ವಸಂಸ್ಥೆಯ 74ನೇ ಮಹಾಧಿವೇಶನದಲ್ಲಿ ವಿಶೇಷ ಸುದ್ದಿಗೋಷ್ಠಿ| ಹಫೀಜ್‌, ಅಜರ್‌ ವಿರುದ್ಧ ಕ್ರಮಕ್ಕೆ ಪಾಕಿಸ್ತಾನಕ್ಕೆ ಅಮೆರಿಕದ ತಾಕೀತು!| 

ವಿಶ್ವಸಂಸ್ಥೆ[ಸೆ.28]: 2008ರ ದಾಳಿ ರೂವಾರಿ ಹಫೀಜ್‌ ಸಯೀದ್‌ ಹಾಗೂ ಮಸೂರ್‌ ಅಜರ್‌ನಂಥ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಅಮೆರಿಕ ತಾಕೀತು ಮಾಡಿದೆ. ಅಲ್ಲದೆ ಉಭಯ ದೇಶಗಳ ನಡುವಿನ ಕಾಣಿಸಿಕೊಂಡಿರುವ ಉದ್ವಿಗ್ನ ಪರಿಸ್ಥಿತಿಯ ಶಮನವು, ಭಾರತದ ಗಡಿಯೊಳಕ್ಕೆ ನುಸುಳಿ ಉಗ್ರ ಕೃತ್ಯ ಕೈಗೊಳ್ಳುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಪಾಕಿಸ್ತಾನ ಎಷ್ಟುಗಂಭೀರವಾಗಿ ಪರಿಗಣಿಸುತ್ತದೆ ಎಂಬುದನ್ನು ಅವಲಂಬಿಸಿದೆ ಎಂದು ಅಮೆರಿಕ ಪ್ರತಿಪಾದಿಸಿದೆ.

ವಿಶ್ವಸಂಸ್ಥೆಯ 74ನೇ ಮಹಾಧಿವೇಶನದಲ್ಲಿ ವಿಶೇಷ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಕ್ಷಿಣ ಮತ್ತು ಕೇಂದ್ರೀಯ ಏಷ್ಯಾಕ್ಕೆ ಅಮೆರಿಕದ ಹಂಗಾಮಿ ಸಹಾಯಕ ಕಾರ್ಯದರ್ಶಿಯಾದ ಅಲೈಸ್‌ ವೆಲ್ಸ್‌ ಅವರಿಗೆ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿ ಟ್ರಂಪ್‌ ಅವರು ಮಧ್ಯಸ್ಥಿಕೆಗೆ ಸಿದ್ಧ ಎಂದಿದ್ದಾರಲ್ಲ ಎಂದು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಅಲೈಸ್‌, ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಯಾವುದೇ ರಾಷ್ಟ್ರದ ಮಧ್ಯಸ್ಥಿಕೆ ಬಯಸುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಆದರೆ, ಒಂದು ವೇಳೆ ಉಭಯ ಪಕ್ಷಗಳು ಒಪ್ಪಿದ್ದಲ್ಲಿ ಮಾತ್ರವೇ ಟ್ರಂಪ್‌ ಅವರು ಮಧ್ಯಸ್ಥಿಕೆ ವಹಿಸಲಿದ್ದಾರೆ ಎಂದು ಅಲೈಸ್‌ ಸ್ಪಷ್ಟಪಡಿಸಿದರು.

ಅಣ್ವಸ್ತ್ರ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಭಾರತ ನಡುವೆ ರಚನಾತ್ಮಕವಾದ ಮಾತುಕತೆಯು ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿಗೆ ನೆರವಾಗಲಿದೆ ಎಂದು ನಾವು ಭಾವಿಸುತ್ತೇವೆ. ಭಯೋತ್ಪಾದನೆ ನಿಗ್ರಹ, ಉಗ್ರರು ಗಡಿಯಾಚನೆಗಿನ ಒಳನುಸುಳುವಿಕೆ ನಿಗ್ರಹ, ಪಾಕಿಸ್ತಾನ ಈಗಾಗಲೇ ಒಪ್ಪಿದ ಎಫ್‌ಎಟಿಎಫ್‌ ಕಾರ್ಯ ಯೋಜನೆ ಜಾರಿ ಹಾಗೂ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಿಂದ ಜಾಗತಿಕ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಪಾಕಿಸ್ತಾನ ಗಂಭೀರತೆ ಪ್ರದರ್ಶಿಸಬೇಕು. ಜೊತೆಗೆ ಪಾಕಿಸ್ತಾನದ ನೆಲದಲ್ಲಿ ದೀರ್ಘಾಕಾಲೀನವಾಗಿ ಆಶ್ರಯ ಪಡೆದ ಹಫೀಜ್‌, ಜೈಷ್‌-ಎ-ಮೊಹಮ್ಮದ್‌ ಉಗ್ರರು ಹಾಗೂ ಮಸೂದ್‌ ಅಜರ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಲೈಸ್‌ ಒತ್ತಾಯಿಸಿದರು.

click me!