ದೇರಳಕಟ್ಟೆಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಯು ಟಿ ಖಾದರ್ ಭೇಟಿ | ಸಕಾಲಕ್ಕೆ ಆಸ್ಪತ್ರೆ, ವೈದ್ಯರ ತಂಡ ಹಾಗೂ ಪ್ರಮುಖವಾಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನರ್ಸ್ ನಿಮ್ಮಿ ಹಾಗೂ ಆಂಬ್ಯುಲೆನ್ಸ್ ಚಾಲಕ ಪ್ರವೀಣ್ ಅವರಿಗೆ ಅಭಿನಂದಿಸಿದರು
ಉಳ್ಳಾಲ (ಜು.01): ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು ದೇರಳಕಟ್ಟೆಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಪ್ರಿಯಕರನಿಂದ ಚೂರಿ ದಾಳಿಗೆ ತುತ್ತಾಗಿ ಗಂಭೀರ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿ ದೀಕ್ಷಾಳ ಆರೋಗ್ಯ ವಿಚಾರಣೆ ನಡೆಸಿದರು.
ಸಕಾಲಕ್ಕೆ ಆಸ್ಪತ್ರೆ, ವೈದ್ಯರ ತಂಡ ಹಾಗೂ ಪ್ರಮುಖವಾಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನರ್ಸ್ ನಿಮ್ಮಿ ಹಾಗೂ ಆಂಬ್ಯುಲೆನ್ಸ್ ಚಾಲಕ ಪ್ರವೀಣ್ ಅವರಿಗೆ ಅಭಿನಂದಿಸಿದರು. ನರ್ಸ್‌ಗೆ ಶೌರ್ಯ ಪ್ರಶಸ್ತಿ ದೊರಕಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹೆತ್ತವರಿಗೆ ಸಮಾಧಾನ ಹೇಳಿದ ಸಚಿವ ಖಾದರ್, ದೀಕ್ಷಾ ಕುಟುಂಬಕ್ಕೆ ವೈಯಕ್ತಿಕ ಸಹಾಯಧನ ನೀಡಿ, ಸರ್ಕಾರದಿಂದ ಚಿಕಿತ್ಸಾ ವೆಚ್ಚ ಭರಿಸುವ ಭರವಸೆ ನೀಡಿದರು.
ದೀಕ್ಷಾ ಈಗ ಚೇತರಿಸಿಕೊಳ್ಳುತ್ತಿದ್ದು, ಆರೋಪಿ ಈಗಾಗಲೇ ಪೊಲೀಸ್ ವಶದಲ್ಲಿದ್ದು ಆತನ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸುವ ವಿಶ್ವಾಸ ಪೊಲೀಸ್ ಇಲಾಖೆಯಿಂದ ದೊರೆತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಮಾದಕ ವ್ಯಸನ ಜಿಲ್ಲೆಯಲ್ಲಿ ವ್ಯಾಪಕವಾಗಿದೆ ಅನ್ನುವ ಖೇದವಿದೆ. ನಿಯಂತ್ರಣಕ್ಕೆ ಕ್ರಮ ನಿರಂತರವಾಗಿದ್ದರೂ ಮುಂದುವರಿಯುತ್ತಲೇ ಇದೆ. ಈ ಸಂಬಂಧ ಪೊಲೀಸ್ ಇಲಾಖೆಗೆ ಇನ್ನಷ್ಟುಒತ್ತಡ ಹಾಕಲಾಗುವುದು. ಇಂತಹ ವ್ಯಸನದಿಂದಲೇ ದೀಕ್ಷಾ ಮೇಲೆ ದಾಳಿಯಾಗಿರುವ ಸಾಧ್ಯತೆ ಇದೆ ಎಂದು ಖಾದರ್ ಹೇಳಿದರು.