ವಿವಿಗಳಿಗೆ ಏಕರೂಪ ಕಾಯ್ದೆ: ಗವರ್ನರ್‌ ಅಧಿಕಾರಕ್ಕೆ ಕತ್ತರಿ

Published : Jun 15, 2017, 09:48 AM ISTUpdated : Apr 11, 2018, 01:11 PM IST
ವಿವಿಗಳಿಗೆ ಏಕರೂಪ ಕಾಯ್ದೆ: ಗವರ್ನರ್‌ ಅಧಿಕಾರಕ್ಕೆ ಕತ್ತರಿ

ಸಾರಾಂಶ

ರಾಜ್ಯದ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 22 ವಿಶ್ವವಿದ್ಯಾಲಯಗಳಿಗೆ ಏಕರೂಪದ ಸಮಗ್ರ ಶಾಸನ ತರಲು ಹಾಗೂ ವಿವಿಗಳ ನೇಮಕಾತಿಯನ್ನು ರಾಜ್ಯ ಸರ್ಕಾರವೇ ರಚಿಸುವ ಸಾಮಾನ್ಯ ನೇಮಕಾತಿ ಮಂಡಳಿಯಿಂದ ನಡೆಸಲು ಅವಕಾಶ ಇರುವ ಹೊಸ ಕಾಯ್ದೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ 2017ರ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಧೇಯಕವನ್ನು ವಿಧಾನಸಭೆಯಲ್ಲಿ ಬುಧವಾರ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಮಂಡಿಸಿದರು.

ಬೆಂಗಳೂರು: ರಾಜ್ಯದ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 22 ವಿಶ್ವವಿದ್ಯಾಲಯಗಳಿಗೆ ಏಕರೂಪದ ಸಮಗ್ರ ಶಾಸನ ತರಲು ಹಾಗೂ ವಿವಿಗಳ ನೇಮಕಾತಿಯನ್ನು ರಾಜ್ಯ ಸರ್ಕಾರವೇ ರಚಿಸುವ ಸಾಮಾನ್ಯ ನೇಮಕಾತಿ ಮಂಡಳಿಯಿಂದ ನಡೆಸಲು ಅವಕಾಶ ಇರುವ ಹೊಸ ಕಾಯ್ದೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ 2017ರ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಧೇಯಕವನ್ನು ವಿಧಾನಸಭೆಯಲ್ಲಿ ಬುಧವಾರ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಮಂಡಿಸಿದರು.

ಈ ವಿಧೇಯಕ ಅಂಗೀಕಾರಗೊಂಡರೆ ಇನ್ನು ಮುಂದೆ ರಾಜ್ಯದ ಎಲ್ಲ ವಿವಿಗಳ ಸಿಬ್ಬಂದಿ ನೇಮಕಾತಿ, ಸಿವಿಲ್‌ ಕಾಮಗಾರಿ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಅಧಿಕಾರ ರಾಜ್ಯ ಸರ್ಕಾರದ ಕೈ ಸೇರಲಿದೆ. ಕುಲಪತಿಗಳ ನೇಮಕಾತಿ ಹಾಗೂ ವಿವಿಗಳ ವ್ಯಾಪ್ತಿಯ ಕೆಲ ಪ್ರಾಧಿಕಾರಗಳ ನೇಮಕಾತಿಯಲ್ಲೂ ಗುರುತರ ಬದಲಾವಣೆ ಮಾಡಲಾಗಿದೆ. ಇದೇ ವೇಳೆ ಮೂರು ಹೊಸ ವಿವಿಗಳನ್ನು ಸೃಜಿಸಲಾಗಿದ್ದು, ಮಂಡ್ಯದಲ್ಲಿರುವ ಸರ್ಕಾರಿ ಕಾಲೇಜನ್ನು ಮಂಡ್ಯ ಏಕಾತ್ಮಕ ಸ್ವರೂಪದ ವಿವಿಯನ್ನಾಗಿ ಸ್ಥಾಪಿಸಿ, ಮೈಸೂರು ವಿವಿಯಿಂದ ಬೇರ್ಪಡಿಸಿದ ಮಂಡ್ಯ ಜಿಲ್ಲೆಯ ವ್ಯಾಪ್ತಿಯ ಕಾಲೇಜುಗಳನ್ನು ಸೇರ್ಪಡೆ ಮಾಡಲಾಗಿದೆ. ಬೆಂಗಳೂರಿನ ಮಹಾರಾಣಿ ಕಾಲೇಜುಗಳ ಸಮೂಹವನ್ನು ಬೆಂಗಳೂರು ವಿವಿಯಿಂದ ಬೇರ್ಪಡಿಸಿ, ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯವನ್ನಾಗಿ ಸ್ಥಾಪಿಸಲಾಗಿದೆ. ಗುಲ್ಬರ್ಗಾ ವಿವಿಗೆ ಒಳಪಟ್ಟಿದ್ದ ರಾಯಚೂರು ಕಂದಾಯ ಜಿಲ್ಲೆಯನ್ನು ಒಳಗೊಂಡು ರಾಯಚೂರು ವಿವಿ ಎಂಬುದಾಗಿ ಪರಿಪೂರ್ಣ ವಿವಿಯನ್ನು ಕೂಡ ರಚಿಸಲಾಗಿದೆ.

2000ರಲ್ಲಿ ಜಾರಿಗೊಳಿಸಲಾದ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮವು ರಾಜ್ಯದ ಎಲ್ಲ ವಿವಿಗಳ ಕಾರ್ಯನಿರ್ವಹಣೆಗೆ ಮೂಲ ಕಾಯ್ದೆಯಾಗಿದ್ದು, ಅದು 1976ರ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮದ ಮೇಲೆ ರಚನೆಗೊಂಡಿತ್ತು. ಆದರೆ ಇದಕ್ಕೆ ಸಂಬಂಧಿಸಿದ ಒಟ್ಟು ಏಳು ವಿವಿಗಳ ಅಧಿನಿಯಮಗಳು ಈವರೆಗೆ ಜಾರಿಯಲ್ಲಿವೆ. ಇವುಗಳ ಪ್ರತಿಯೊಂದು ಕಾರ್ಯನಿರ್ವಹಣೆ ವಿಭಿನ್ನವಾಗಿವೆ. ಹೀಗಾಗಿ ವಿವಿಗಳ ಮೇಲ್ವಿಚಾರಣೆಯಲ್ಲಿ ಏಕರೂಪತೆ ತರುವುದು ಈ ವಿಧೇಯಕದ ಉದ್ದೇಶವಾಗಿದೆ. ಈ ಮೂಲಕ ಹೊಸದಾಗಿ ರಚನೆಯಾದ ಮೂರು ವಿವಿಗಳೂ ಸೇರಿದಂತೆ ರಾಜ್ಯದ ಎಲ್ಲ 22 ವಿವಿಗಳ ಆಡಳಿತ ಮತ್ತು ಪ್ರಕಾರ್ಯಗಳು ಒಂದೇ ಸಾಮಾನ್ಯ ನಿಯಮದಡಿ ಬರಲಿವೆ.

ಯಾವ ವಿವಿಗಳಿಗೆ ಅನ್ವಯ?: ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿರುವ ಬೆಂಗಳೂರು ವಿವಿ, ಸೆಂಟ್ರಲ್‌ ಕಾಲೇಜು ಕ್ಯಾಂಪಸ್‌ನಲ್ಲಿರುವ ಬೆಂಗಳೂರು ಕೇಂದ್ರೀಯ ವಿವಿ, ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆಯಲ್ಲಿ ಸ್ಥಾಪನೆಯಾಗಲಿರುವ ಬೆಂಗಳೂರು ಉತ್ತರ ವಿವಿ, ಮೈಸೂರಿನ ಮೈಸೂರು ವಿವಿ, ಧಾರವಾಡದ ಕರ್ನಾಟಕ ವಿವಿ, ಕಲಬುರಗಿಯ ಗುಲ್ಬರ್ಗಾ ವಿವಿ, ಮಂಗಳೂರಿನ ಮಂಗಳೂರು ವಿವಿ, ಶಿವಮೊಗ್ಗದ ಕುವೆಂಪು ವಿವಿ, ತುಮಕೂರು ವಿವಿ, ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ, ಬೆಳಗಾವಿಯ ರಾಣಿ ಚೆನ್ನಮ್ಮ ವಿವಿ, ದಾವಣಗೆರೆ ವಿವಿ, ಹಂಪಿಯ ಕನ್ನಡ ವಿವಿ, ಬೆಳಗಾವಿಯ ವಿಟಿಯು, ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿ, ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ, ಮೈಸೂರಿನ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ವಿವಿ, ಬೆಂಗಳೂರಿನ ಸಂಸ್ಕೃತ ವಿವಿ, ಶಿಗ್ಗಾವಿಯ ಜಾನಪದ ವಿವಿ, ಮಂಡ್ಯದ ಮಂಡ್ಯ ಏಕಾತ್ಮಕ ಸ್ವರೂಪದ ವಿವಿ, ಬೆಂಗಳೂರಿನ ಮಹಾರಾಣಿ ಕ್ಲಸ್ಟರ್‌ ವಿವಿ ಹಾಗೂ ರಾಯಚೂರು ವಿವಿಗಳಿಗೆ ಇನ್ನು ಮುಂದೆ ಏಕರೂಪದ ಕಾನೂನು ಅನ್ವಯವಾಗಲಿದೆ.

ವಿವಿಯಲ್ಲಿನ ಬದಲಾವಣೆ ಏನು?: ಈ ಹಿಂದಿನಂತೆ ಎಲ್ಲ ವಿವಿಗಳಿಗೆ ರಾಜ್ಯಪಾಲರೇ ಕುಲಾಧಿಪತಿಗಳಾಗಿರುತ್ತಾರೆ. ಕುಲಾಧಿಪತಿಗಳು ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿ ವಿವಿಗಳ ಯಾವುದೇ ಪ್ರಾಧಿಕಾರಗಳ ಸಭೆ ನಡೆಸಬಹುದು. ಉನ್ನತ ಶಿಕ್ಷಣ ಸಚಿವರು ಸಹ ಕುಲಾಧಿಪತಿ ಆಗಿರುತ್ತಾರೆ. ಆದರೆ ಕುಲಪತಿಗಳ ನೇಮಕದ ವಿಚಾರದಲ್ಲಿ ಕೆಲ ಕಟ್ಟುನಿಟ್ಟಿನ ನಿಬಂಧನೆ ಹೇರಲಾಗಿದೆ. ಕುಲಪತಿಯು ಕನಿಷ್ಠ 25 ವರ್ಷಗಳ ಬೋಧನೆ ಅನುಭವ ಹೊಂದಿರುವ ಪ್ರಸಿದ್ಧ ಶಿಕ್ಷಣ ತಜ್ಞನಾಗಿರಬೇಕು. ಕನಿಷ್ಠ 10 ವರ್ಷ ಪ್ರಸಿದ್ಧ ಸಂಶೋಧನೆ ಮತ್ತು ವಿದ್ಯಾವಿಷಯಕ ಅಥವಾ ಆಡಳಿತಾತ್ಮಕ ಸಂಸ್ಥೆಯಲ್ಲಿ ಪ್ರಾಧ್ಯಾಪಕ ಅಥವಾ ತತ್ಸಮಾನ ಹುದ್ದೆಯಲ್ಲಿ ಕೆಲಸ ಮಾಡಿರಬೇಕು.

ಹಾಲಿ ಕುಲಪತಿ ನಿವೃತ್ತಿಗೆ ಮೂರು ತಿಂಗಳ ಮುಂಚಿತವಾಗಿ ರಾಜ್ಯ ಸರ್ಕಾರವು ಶೋಧನಾ ಮತ್ತು ಆಯ್ಕೆ ಸಮಿತಿ ರಚಿಸಬೇಕು. ಈ ಸಮಿತಿಯಲ್ಲಿ ಕುಲಪತಿ ಅಥವಾ ರಾಷ್ಟ್ರೀಯ ಪ್ರಾಮುಖ್ಯತಾ ಸಂಸ್ಥೆಯ ನಿರ್ದೇಶಕರ ದರ್ಜೆಗಿಂತ ಕಡಿಮೆ ಇರದ ವ್ಯಕ್ತಿ, ಐವರು ಪ್ರಸಿದ್ಧ ಶಿಕ್ಷಣ ತಜ್ಞರು ಇರಬೇಕು. ಈ ಪೈಕಿ ಒಬ್ಬರನ್ನು ಕುಲಾಧಿಪತಿ, ಇಬ್ಬರನ್ನು ಯುಜಿಸಿ, ಇಬ್ಬರನ್ನು ರಾಜ್ಯ ಸರ್ಕಾರ ಮತ್ತು ಒಬ್ಬರನ್ನು ವಿವಿಯ ಕಾರ್ಯನಿರ್ವಾಹಕ ಪರಿಷತ್ತಿನಿಂದ ನೇಮಕ ಮಾಡಬೇಕಾಗುತ್ತದೆ. ಶೋಧನಾ ಸಮಿತಿಯ ಸದಸ್ಯರು ಯಾವುದೇ ಕಾಲೇಜು ಅಥವಾ ಸಂಸ್ಥೆಯೊಂದಿಗೆ ವ್ಯವಹಾರ ಹೊಂದಿರುವ ವ್ಯಕ್ತಿ ಆಗಿರಬಾರದು. ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಈ ಶೋಧನಾ ಸಮಿತಿಯ ಸಂಚಾಲಕರಾಗಿರುತ್ತಾರೆ. ಕುಲಪತಿಗಳ ಅವಧಿ ನಾಲ್ಕು ವರ್ಷ ಆಗಲಿದ್ದು, ಇಲ್ಲವೇ 67ನೇ ವಯಸ್ಸಿಗೆ ನಿವೃತ್ತಿ ಹೊಂದುವರು. ಕುಲಪತಿಗಳ ಹುದ್ದೆ ಖಾಲಿ ಇರುವ ಸಂದರ್ಭದಲ್ಲಿ ಮತ್ತೊಂದು ವಿವಿಯ ಕುಲಪತಿಯನ್ನು ತಾತ್ಕಾಲಿಕವಾಗಿ ಪ್ರಭಾರದಲ್ಲಿ ನಿಯೋಜಿಸಬಹುದು. ಕುಲಸಚಿವ ಹುದ್ದೆಗೆ ಐಎಎಸ್‌ ಅಥವಾ ಕೆಎಎಸ್‌ ಅಧಿಕಾರಿಯನ್ನು ನೇಮಕ ಮಾಡಬಹುದು.

ಬೋಧಕ ಮತ್ತು ಬೋಧಕೇತರ ನೌಕರರ ನೇಮಕಾತಿ: ರಾಜ್ಯದ ಎಲ್ಲ ವಿವಿಗಳಲ್ಲಿನ ಸಹಾಯಕ ಪ್ರಾಧ್ಯಾಪಕರು ಅಥವಾ ಸಹಾಯಕ ಗ್ರಂಥಪಾಲರು ಅಥವಾ ಸಹಾಯಕ ದೈಹಿಕ ಶೀಕ್ಷಣ ಬೋಧಕರಾಗಿ ನೇರ ನೇಮಕ ಮಾಡಿಕೊಳ್ಳಲು ಸಾಮಾನ್ಯ ನೇಮಕಾತಿ ಮಂಡಳಿ ರಚನೆಯಾಗಲಿದೆ. ಈ ಮಂಡಳಿಯಲ್ಲಿ ಮೂವರು ವಿಶ್ರಾಂತ ಕುಲಪತಿಗಳು, ಅವರಲ್ಲಿ ಒಬ್ಬರು ರಾಜ್ಯ ಸರ್ಕಾರದಿಂದ ನೇಮಕಗೊಂಡವರು, ಒಬ್ಬರು ವಿವಿಯಿಂದ ಶಿಫಾರಸು ಮಾಡಿದ ಶಿಕ್ಷಣ ತಜ್ಞರು ಸದಸ್ಯರಾಗಿದ್ದು, ಐಎಎಸ್‌ ಅಥವಾ ಕೆಎಎಸ್‌ ಅಧಿಕಾರಿ ಕಾರ್ಯದರ್ಶಿಯಾಗಿರುತ್ತಾರೆ. ಇನ್ನು ಬೋಧಕೇತರ, ಲಿಪಿಕ ಮತ್ತು ಇತರೆ ಸಿಬ್ಬಂದಿಯ ನೇಮಕವನ್ನೂ ಸಾಮಾನ್ಯ ನೇಮಕಾತಿ ಮಂಡಳಿ ಮಾಡಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Extreme fast-food consumer: ಸಿಕ್ಕಾಪಟ್ಟೆ ಫಾಸ್ಟ್‌ಫುಡ್‌ ತಿನ್ನುತ್ತಿದ್ದ 16ರ ಬಾಲಕಿ ಅನಾರೋಗ್ಯಕ್ಕೆ ಸಾವು
ಭಾರತದ ಪ್ರಜಾಪ್ರಭುತ್ವಕ್ಕೆ ಅಟಲ್ ಬಿಹಾರಿ ವಾಜಪೇಯಿ ಕೊಡುಗೆಗಳು: ಒಂದು ಸ್ಮರಣಾರ್ಥ ಲೇಖನ