
ಚಿಕ್ಕಬಳ್ಳಾಪುರ: ಬೆಳೆಯುವ ಮಕ್ಕಳಲ್ಲಿ ಅಪೌಷ್ಠಿಕತೆ ಹೋಗಲಾಡಿಸಲು ಸರ್ಕಾರ ನಾನಾ ಯೋಜನೆಗಳನ್ನು ಜಾರಿಗೆ ತಂದಿದೆ. ಸಿದ್ದರಾಮಯ್ಯ ಸರ್ಕಾರ ಅಂತೂ ಭಾಗ್ಯಗಳ ಮೇಲೆ ಭಾಗ್ಯಗಳನ್ನು ನೀಡುತ್ತಿದೆ.. ಆದರೆ ಇವುಗಳನ್ನು ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
ಕೊಳೆತು ನಾರುತ್ತಿರುವ ಕೋಳಿ ಮೊಟ್ಟೆ, ಮುಗ್ಗಿ ದುರ್ವಾಸನೆ ಮೂಡುತ್ತಿರುವ ಅಕ್ಕಿ, ಹುಳ ಬಿದ್ದು ದುರ್ನಾತ ಬೀರುತ್ತಿರುವ ನೀರಿನ ಸಂಪು, ಒಳಗೆ ಕಾಲಿಟ್ಟರೆ ಮೂಗು ಮುಚ್ಚಿಕೊಳ್ಳಬೇಕಾದ ಸ್ಥಿತಿ. ಇಂತಹ ವಾತಾವರಣದಲ್ಲಿ ಮಕ್ಕಳು ಕಲಿಯಬೇಕಾದ ದುಸ್ಥಿತಿ ಇಲ್ಲಿನ ಅಂಗನವಾಡಿಯಲ್ಲಿರುವ ಮಕ್ಕಳದ್ದು. ಅಷ್ಟಕ್ಕೂ ಇದೆಲ್ಲಾ ಕಂಡುಬರೋದು ಚಿಕ್ಕಬಳ್ಳಾಪುರ ತಾಲೂಕಿನ ಅಂಗಟ್ಟ ಗ್ರಾಮದಲ್ಲಿ .
ಗ್ರಾಮೀಣ ಬಡವರ ಮಕ್ಕಳಿಗೂ ಉತ್ತಮ ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕು ಹಾಗೂ ಅಪೌಷ್ಟಿಕತೆ ಹೋಗಲಾಡಿಸುವ ಸಲುವಾಗಿ ಸರ್ಕಾರ ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರದ ಜೊತೆ ವಾರಕ್ಕೆ 2 ದಿನ ಮೊಟ್ಟೆ ನೀಡುವ ಯೋಜನೆಯನ್ನ ಜಾರಿಗೆ ತಂದಿದೆ.
ಆದರೆ ಈ ಅಂಗನವಾಡಿಗೆ ಸಿಕ್ಕಿರೋದು ಕೊಳೆತಿರುವ ಮೊಟ್ಟೆ ಭಾಗ್ಯ, ಈ ಮೊಟ್ಟೆಗಳನ್ನು ತಿಂದ ಹಲವು ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಬಗ್ಗೆ ಗ್ರಾಮಸ್ಥರು ಪರಿಶೀಲಿಸಿದಾಗ ಕೊಳೆತ ಮೊಟ್ಟೆ ನೀಡುತ್ತಿರುವುದು ಬೆಳಕಿಗೆ ಬಂದಿದೆ.
ದೂರು ಬಂದ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆ ಶಾಂತಮ್ಮರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಡವಾಗಿ ಮೊಟ್ಟೆ ವಿತರಣೆ ಮಾಡಿದ್ದರಿಂದ ಈ ಅವಘಡ ಸಂಭವಿಸಿದೆ. ಗುತ್ತಿಗೆದಾರ ಹಾಗೂ ಅಂಗನವಾಡಿ ಕಾರ್ಯಕರ್ತೆ ಶಾಂತಮ್ಮ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.
ಬರೀ ಕೊಳೆತಮೊಟ್ಟೆ ಒಂದೇ ಅಲ್ಲ, ಈ ಅಂಗನವಾಡಿ ಕೇಂದ್ರ ಇನ್ನೂ ಹಲವು ಸಮಸ್ಯೆಗಳ ಆಗರವಾಗಿದೆ. ಬಡ ಮಕ್ಕಳ ಬಾಳಲ್ಲಿ ಈ ರೀತಿ ಚೆಲ್ಲಾಟ ಆಡುವುದನ್ನುಬಿಟ್ಟು ಸಮಸ್ಯೆಯನ್ನ ಸರಿಪಡಿಸುವತ್ತ ಅಧಿಕಾರಿಗಳು ಗಮನಹರಿಸಬೇಕು.
ವರದಿ: ರವಿಕುಮಾರ್ ವಿ, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.