ಕೊಕ್ಕಡದ ಎಂಡೋಸಂತ್ರಸ್ತರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಎಚ್ಚರಿಕೆ

Published : May 27, 2017, 10:36 PM ISTUpdated : Apr 11, 2018, 01:10 PM IST
ಕೊಕ್ಕಡದ ಎಂಡೋಸಂತ್ರಸ್ತರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಎಚ್ಚರಿಕೆ

ಸಾರಾಂಶ

‘ಮನೆಯಲ್ಲಿ ಮಕ್ಕಳು ನರಳಾಡುತ್ತಿದ್ದರೆ ಕರುಳು ಕಿತ್ತು ಬರುತ್ತಿದೆ... ದುಡಿಯೋ ಜೀವಗಳೆಲ್ಲಾ ದುಡಿಯಲಾರದ ಸ್ಥಿತಿಯಲ್ಲಿದೆ... ನರಳಾಟದ ಮಕ್ಕಳನ್ನು ಬಿಟ್ಟು ಎಲ್ಲಿಯೂ ಹೋಗುವಂತಿಲ್ಲ, ದುಡಿದು ಸಂಪಾದಿಸುವಂತಿಲ್ಲ. ಈ ಪರಿಯ ಗೋಳಾಟದ ನರಳಾಟದ ಬದುಕು ನೀಡಿದ ಸರ್ಕಾರ ಎಂಡೋಪೀಡಿತರ ಹಕ್ಕಿನ ಸವಲತ್ತನ್ನು ನೀಡದೇ ಹೋದರೆ ಕೊಕ್ಕಡದಲ್ಲೇ ನಮ್ಮೆಲ್ಲರ ಪ್ರಾಣ ಪಕ್ಷಿ ಕಳಚಲಿದೆ’ ಎಂದು ಎಂಡೋ ಸಂತ್ರಸ್ತ ಮಹಿಳೆ ಕಮಲಾ ಕನ್ಯಾಡಿ ಗುಡುಗಿದ್ದಾರೆ.

ಉಪ್ಪಿನಂಗಡಿ (ಮೇ.27): ‘ಮನೆಯಲ್ಲಿ ಮಕ್ಕಳು ನರಳಾಡುತ್ತಿದ್ದರೆ ಕರುಳು ಕಿತ್ತು ಬರುತ್ತಿದೆ... ದುಡಿಯೋ ಜೀವಗಳೆಲ್ಲಾ ದುಡಿಯಲಾರದ ಸ್ಥಿತಿಯಲ್ಲಿದೆ... ನರಳಾಟದ ಮಕ್ಕಳನ್ನು ಬಿಟ್ಟು ಎಲ್ಲಿಯೂ ಹೋಗುವಂತಿಲ್ಲ, ದುಡಿದು ಸಂಪಾದಿಸುವಂತಿಲ್ಲ. ಈ ಪರಿಯ ಗೋಳಾಟದ ನರಳಾಟದ ಬದುಕು ನೀಡಿದ ಸರ್ಕಾರ ಎಂಡೋಪೀಡಿತರ ಹಕ್ಕಿನ ಸವಲತ್ತನ್ನು ನೀಡದೇ ಹೋದರೆ ಕೊಕ್ಕಡದಲ್ಲೇ ನಮ್ಮೆಲ್ಲರ ಪ್ರಾಣ ಪಕ್ಷಿ ಕಳಚಲಿದೆ’ ಎಂದು ಎಂಡೋ ಸಂತ್ರಸ್ತ ಮಹಿಳೆ ಕಮಲಾ ಕನ್ಯಾಡಿ ಗುಡುಗಿದ್ದಾರೆ.
ಎಂಡೋ ವಿರೋಧಿ ಹೋರಾಟ ಸಮಿತಿ ಕೊಕ್ಕಡದ ಆಶ್ರಯದಲ್ಲಿ ಶನಿವಾರ ಕೊಕ್ಕಡದ ಆಟೋ ರಿಕ್ಷಾ ನಿಲ್ದಾಣದ ಬಳಿ ಆಯೋಜಿಸಿದ ಬೃಹತ್ ಪ್ರತಿಭಟನಾ ಸಭೆ ಹಾಗೂ ಅಮರಣಾಂತ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಂಡೋಪೀಡಿತರ ಬದುಕಿನ ಸೂಕ್ಷ್ಮತೆಗಳನ್ನು ಎಳೆ ಎಳೆಯಾಗಿ ವಿವರಿಸಿದ ಅವರು, ‘ನಮ್ಮ ಸಮಸ್ಯೆಯನ್ನು ರಾಜಕೀಯ ಕಣ್ಣಿನಿಂದ ದಯವಿಟ್ಟು ನೋಡದಿರಿ. ಪಕ್ಕದ ಕೇರಳದಲ್ಲಿ ಎಂಡೋಪೀಡಿತರಿಗೆ ನ್ಯಾಯೋಚಿತ ಸೌಲಭ್ಯ ಒದಗಿಸಲು ಸಾಧ್ಯವಿರುವಾಗ ನಮಗ್ಯಾಕೆ ಒದಗಿಸಲು ಅಸಾಧ್ಯ. ಬರಿಯ ಆಶ್ವಾಸನೆಗಳಿಂದ ನಮ್ಮ ನರಳಾಟ ತಪ್ಪದು. ನಮ್ಮ ಹಕ್ಕಿನ ಸವಲತ್ತು ನೀಡದೇ ಹೋದರೆ ಅಮರಣಾಂತ ಉಪವಾಸದೊಂದಿಗೆ ಬದುಕು ಇಲ್ಲಿಯೇ ಕೊನೆಗೊಳ್ಳಲಿ’ ಎಂದು ಹೇಳಿದರು.
ಅಮರಣಾಂತ ಹೋರಾಟ: ಎಂಡೋ ವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ಮಾತನಾಡಿ, ಸಮಸ್ಯೆ ಕುರಿತು ನಾನಾ ಪರಿಯಲ್ಲಿ ಮನವಿ ಸಲ್ಲಿಸಿಯಾಗಿದೆ. ಕರ್ನಾಟಕ ಮಾದರಿಯ ಸೌಲಭ್ಯ ಪ್ರಕಟವಾಗುತ್ತದೆ ಎಂಬ ಭರವಸೆ ದೊರೆಯಿತೇ ವಿನಃ ಬದುಕು ಬೆಳಗಿಸುವ ಯಾವುದೇ ಯೋಜನೆ ಸರ್ಕಾರದಿಂದ ಪ್ರಕಟವಾಗಿಲ್ಲ. ಅದಕ್ಕಾಗಿ ನಿರ್ಣಾಯಕ ಹೋರಾಟ ಅಮರಣಾಂತ ಹೋರಾಟದತ್ತ ನಮ್ಮ ಚಿತ್ತ ಹರಿದಿದೆ. ನಮಗೆ ಯಾರದ್ದೇ ಭಿಕ್ಷೆ ಬೇಡ. ನಮ್ಮ ಹಕ್ಕು ಕಸಿದವರಿಂದ ಹಕ್ಕು ಕೇಳುತ್ತೇವೆ ಎಂದರು.
ಸತ್ಯಾಗ್ರಹದ ಮುಂದಾಳು ಹರೀಶ್ ಪೂಂಜಾ ಮಾತನಾಡಿ, ಎಂಡೋಪೀಡಿತರ ಬವಣೆ ಬಗೆಹರಿಸಲು ಪ್ರಯತ್ನಿಸಬೇಕಾಗಿದ್ದ ರಾಜ್ಯ ಸರ್ಕಾರ ಕಣ್ಣು, ಕಿವಿ, ಬಾಯಿ ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.
ಅಧಿವೇಶನದಲ್ಲಿ ಪ್ರಸ್ತಾಪ- ಕೋಟ: ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದ ಆರೋಗ್ಯ ಸಚಿವರು ಸಜ್ಜನರು. ಅವರು ಎಂಡೋಪೀಡಿತರ ಸಮಸ್ಯೆಯನ್ನು ಅರಿತಿದ್ದರೆ ಖಂಡಿತವಾಗಿಯೂ ಸ್ಪಂದಿಸುತ್ತಿದ್ದರು. ಅವರಿಗೆ ನಾನೀಗಲೇ ಫೋನಾಯಿಸಿ ಒಮ್ಮೆ ಕೊಕ್ಕಡಕ್ಕೆ ಭೇಟಿ ನೀಡಿ ಎಂದು ವಿನಂತಿಸುತ್ತೇನೆ. ಅಧಿವೇಶನದಲ್ಲೂ ಈ ಬಗ್ಗೆ ಅಗತ್ಯ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು. 
ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಅಂಗಾರ, ಮಾಜಿ ಶಾಸಕ ಪ್ರಭಾಕರ ಬಂಗೇರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಭಾಸ್ಕರ ಧರ್ಮಸ್ಥಳ, ಶರಣ್ ಪಂಪುವೆಲ್, ಹಲವು ಸಂಘಟನೆಗಳ ಮುಂದಾಳುಗಳಾದ ರಂಜನ್ ಗೌಡ, ನಯನಾ ರೈ, ರೆ.ಫಾ. ಸ್ಟಿಫ್ಹನ್ ಜಯರಾಜ್, ಕುಶಾಲಪ್ಪ ಗೌಡ ಪೂವಾಜೆ ಮತ್ತಿತರರು ಪಾಲ್ಗೊಂಡು ಬೆಂಬಲ ಸೂಚಿಸಿದರು.
ಮಾತುಕತೆಗೆ ನಕಾರ: ಸ್ಥಳಕ್ಕೆ ಉಪ ವಿಭಾಗೀಯ ಕಮಿಷನರ್ ರಘುನಂದ ಮೂರ್ತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ತಹಸೀಲ್ದಾರ್ ತಿಪ್ಪೇಸ್ವಾಮಿ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತನಾಡಲು ಬಯಸಿದರು. ಆದರೆ, ನಮ್ಮ ನೋವಿಗೆ ಸ್ಪಂದಿಸಬೇಕಾದ ಸರ್ಕಾರದ ಮಂತ್ರಿಗಳು ಸ್ಥಳಕ್ಕಾಗಮಿಸದೆ ಬೇರಾರೂ ಅಧಿಕಾರಿಗಳಲ್ಲಿ ಮಾತನಾಡಿ ಪ್ರಯೋಜನವಿಲ್ಲ. ಮಂತ್ರಿಗಳು ಬಂದು ಸ್ಪಂದಿಸಿದರೆ ಪ್ರತಿಭಟನೆ ಸ್ಥಗಿತಗೊಳಿಸುವುದಾಗಿ ಖಡಾಖಂಡಿತವಾಗಿ ಪ್ರತಿಭಟನಾಕಾರರು ತಿಳಿಸಿದ ಪರಿಣಾಮ ಅಧಿಕಾರಿಗಳು ಹಿಂತಿರುಗಿದರು. 
ಹೃದಯಂಗಮ ದೃಶ್ಯ: ಪ್ರತಿಭಟನಾ ವೇದಿಕೆಯಲ್ಲಿ ಎಂಡೋ ಸಂತ್ರಸ್ತರನ್ನು ತಂದು ಕುಳ್ಳಿರಿಸಿ ಮಲಗಿಸಲಾಗಿದ್ದು, ಎಂಡೋ ಸಂಸ್ತ್ರಸ್ತರ ನರಳಾಟ- ಕಿರುಚಾಟ,ಆಶಾ ಕಂಗಳ ಭಾವ - ಮುದುಡಿದ, ಮುರುಟಿದ ಅಂಗಾಗಳು ಕರುಳು ಹಿಂಡುವಂತಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಕ್ಲು ಶಿವ ಕೊಲೆ ಪ್ರಕರಣ: ನಾಪತ್ತೆ ಆಗಿರುವ ಬೈರತಿ ಬಸವರಾಜು ವಿರುದ್ಧ ಲುಕ್ ಔಟ್ ನೋಟಿಸ್
ಜರ್ಮನಿಯಲ್ಲೂ ‘ಮತಚೋರಿ’ ಆರೋಪ: ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ