
ನರೇಂದ್ರ ಮೋದಿ, ಭಾರತದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಮೂರು ವರ್ಷಗಳು ಕಳೆದಿವೆ. ಈಗ ನಾಲ್ಕನೇ ವರ್ಷದೆಡೆಗೆ ಕಾಲಿಟ್ಟಿದೆ ಮೋದಿ ಸರ್ಕಾರ. ಕಳೆದ ಮೂರು ವರ್ಷದಲ್ಲಿ ಮೋದಿ ಮಾಡಿದ್ದೇನು? ಅಚ್ಛೇದಿನ್ ಬಂತಾ? ಅಂತ ಎಲ್ಲರೂ ಚರ್ಚೆ ಆರಂಭಿಸಿದ್ದಾರೆ. ಈ ಚರ್ಚೆಗಳ ನಡುವಲ್ಲೇ, ಮೋದಿ ಇವತ್ತಿಗೂ ಹೀರೋ ಆಗಿನೇ ಮಿಂಚ್ತಿದ್ದಾರೆ.
ಮೋದಿ ಹವಾ ಕಡಿಮೆ ಆಗಿಲ್ಲ. ಮೋದಿ ಪರ್ವ ಕಡಿಮೆ ಆಗಿಲ್ಲ. ಈಗ ಎಲೆಕ್ಷನ್ ಆದರೂ ನಾವು ಮೋದಿಗೇ ಓಟ್ ಹಾಕ್ತೀವಿ ಅನ್ನುವಂತಿದೆ ಜನರ ಮನಸ್ಥಿತಿ. ಇದಕ್ಕೆ ಕಾರಣ ಸಾಕಷ್ಟಿವೆ. ಮೋದಿ ಕಳೆದ ಮೂರು ವರ್ಷಗಳಲ್ಲಿ ಮಾಡಿದ ಕಾರ್ಯಗಳು ಜನರಿಗೆ ಎಲ್ಲೋ ಒಂದ್ಕಡೆ ಇಷ್ಟ ಆಗಿವೆ. ಮುಂದೇನೂ ಮೋದಿನೇ ಪ್ರಧಾನಿಯಾಗ್ಬೇಕು ಅನ್ನೋ ಮನಸ್ತಿತಿಯಲ್ಲೇ ಇದ್ದಾರೆ ಜನ. ಇದೇ ಕಾರಣಕ್ಕೆ, ಮೂರು ವರ್ಷ ಕಳೆದರೂ ಮೋದಿಯೇ ಪವರ್ಫುಲ್ಲಾಗಿದ್ದಾರೆ.
'ಫೈಲ್ ನಂಬರ್ 70'
ಮೋದಿ ನೋಟ್ ಬ್ಯಾನ್ ಮಾಡಿದ್ದು, ಜಗತ್ತನ್ನ ಸುತ್ತಾಡಿದ್ದು, ಸರ್ಜಿಕಲ್ ದಾಳಿ ನಡೆಸಿ ಪಾಕಿಸ್ತಾನಕ್ಕೆ ಸರಿಯಾದ ಹೊಡೆತ ನೀಡಿದ್ದು ನಿಮ್ಗೆ ಗೊತ್ತಿದೆ. ಆದರೆ ನಿಮಗೆ ಗೊತ್ತಿಲ್ದೇ ಇರೋ ವಿಷಯ ಅಂದರೆ 'ಫೈಲ್ ನಂಬರ್ 70' ಹೌದು, ಮೋದಿ ಪ್ರಧಾನಿಯಾಗಿ ಮೂರು ವರ್ಷಗಳು ಕಳೆದಿವೆ. ನಾಲ್ಕನೇ ವರ್ಷಕ್ಕೆ ಕಾಲಿಟ್ಟ ಮೋದಿ ಸರ್ಕಾರಕ್ಕೆ ಸವಾಲಾಗಿ ಕಂಡಿದ್ದು ಇದೊಂದು ಫೈಲ್.
ಮೋದಿ ಒಟ್ಟು 4 ಬಾರಿ ಗುಜರಾತ್ ಸಿಎಂ ಆಗಿ ಆಳ್ವಿಕೆ ನಡೆಸಿದ್ದಾರೆ. ಮೊದಲ ಬಾರಿಗೆ ಲೋಕಸಭಾ ಚುನಾವಣಾ ಕಣಕ್ಕೆ ಧುಮುಕಿ, ಪ್ರಧಾನಿ ಕೂಡ ಆಗಿದ್ದಾರೆ. ಆದರೆ ಯಾವತ್ತು ಯಾವ ಫೈಲ್ ನೋಡಿನೂ ಶಾಕ್ ಆಗಿರಲಿಲ್ಲ. ಆದರೆ ಪ್ರಧಾನಿಯಾದ ನಂತರ ನೋಡಿದ ಇದೊಂದು ಫೈಲ್ ನಿಜಕ್ಕೂ ಮೋದಿಗೆ ಶಾಕ್ ನೀಡಿತ್ತು. ಯಾಕಂದರೆ ಇದು ಎಲ್ಲಾ ಪ್ರಧಾನಿಗಳನ್ನೂ ಬೆಚ್ಚಿ ಬೀಳಿಸಿದ್ದ ಫೈಲ್.
ದೇಶದ ಮೊದಲ ಪ್ರಧಾನಿ ಜವಹರ್ಲಾಲ್ ನೆಹರೂರಿಂದ ಹಿಡಿದು, ಇಂದಿರಾಗಾಂಧಿವರೆಗೆ. ರಾಜೀವ್ ಗಾಂಧಿಯಿಂದ ಹಿಡಿದು ಮನಮೋಹನ್ಸಿಂಗ್ ವರೆಗೆ. ಯಾರು ಭಾರತದ ಪ್ರಧಾನಿಯಾಗಿದ್ದರೋ. ಅವರೆಲ್ಲರನ್ನೂ ಬೆಂಬಿಡದೇ ಕಾಡಿತ್ತು ಈ ಭಯಾನಕ ಫೈಲ್.
7 ದಶಕಗಳ ಹಿಂದಿನ ಫೈಲ್
70 ವರ್ಷಗಳ ಹಿಂದಿನ ಫೈಲ್ ಇದು. ಸ್ವಾತಂತ್ರ್ಯ ಬಂದು ಇಷ್ಟು ದಿನಗಳಾದರೂ ಈ ಫೈಲ್ ಅನ್ನ ಓಪನ್ ಮಾಡೋದಕ್ಕೆ ಎಲ್ಲರೂ ಭಯ ಪಡ್ತಿದ್ರು. ಗೆದ್ದು ಬಂದ ಪ್ರಧಾನಿಗಳೆಲ್ಲಾ ಮೊದಲಿಗೆ ಈ ಫೈಲ್ ಮೇಲೆ ಕಣ್ಣಾಡಿಸ್ತಿದ್ರು. ಅದಾದ್ಮೇಲೆ ಯಾರೊಬ್ಬರೂ ಈ ಫೈಲ್ ಕಡೆ ತಿರುಗಿನೂ ನೋಡ್ತಿರಲಿಲ್ಲ. ಪರಿಸ್ಥಿತಿ ಹೀಗಿರಬೇಕಾದ್ರೆ, ಈ ಫೈಲ್ ಮೇಲೆ ಕಳೆದ 3 ವರ್ಷಗಳಿಂದಲೂ ಕಣ್ಣು ಬಿದ್ದಿತ್ತು ಪ್ರಧಾನಿ ನರೇಂದ್ರ ಮೋದಿಗೆ.
ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ನಂತರ, ಸಾಕಷ್ಟು ಬದಲಾವಣೆಗಳಿಗೆ ಮುನ್ನುಡಿ ಹಾಕಿದ್ದರು. ಆದರೆ ಇದೊಂದು ಫೈಲ್ನಲ್ಲಿರೋ ವಿಷ್ಯವನ್ನ ಜಾರಿಗೆ ತರಬೇಕು ಅಂತ ಆಲೋಚಿಸ್ತಾ ಇದ್ದರು. ಈ ಬಗ್ಗೆ ಸೂಕ್ಷ್ಮವಾಗಿ ಎಲ್ಲರ ಜೊತೆನೂ ಚರ್ಚೆ ಮಾಡಿದ್ರು. ಕೆಲವರು ಈ ಫೈಲ್ ಸಹವಾಸ ಬೇಡ ಅಂದಿದ್ರು. ಇನ್ನೂ ಕೆಲವರು ಈ ಫೈಲ್ನಲ್ಲಿರೋದನ್ನ ಮಾಡ್ಲೇಬೇಕು ಅಂತ ಮೋದಿಗೆ ಬೆಂಬಲ ಕೊಟ್ಟಿದ್ರು.. ಇಡೀ ದೇಶವೇ ಎದುರಾದ್ರೂ, ಈ ಫೈಲ್ನಲ್ಲಿರೋ ಅಂಶವನ್ನು ಜಾರಿಗೆ ತರಬೇಕು ಅಂತ ತೆರೆಮರೆಯಲ್ಲಿ ಕಸರತ್ತು ನಡೆಸ್ತಿದ್ರು ಮೋದಿ.. ಅದರಂತೆ ಮೋದಿ ಸರ್ಕಾರಕ್ಕೆ 3 ವರ್ಷ ತುಂಬ್ತಿದ್ಹಾಗೆ.. ಈ ಫೈಲ್ನಲ್ಲಿರೋ ಅಂಶವನ್ನ ಜಾರಿಗೆ ತಂದೇ ಬಿಟ್ರು.. ಅಷ್ಟಕ್ಕೂ ಈ ಫೈಲ್ನಲ್ಲಿ ಇರೋದೇನು ಗೊತ್ತಾ?
ಗೋ ಹತ್ಯೆ ನಿಷೇಧ ಕಾಯ್ದೆ
ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಬೇಕು ಅನ್ನೋ ಮಾತುಗಳು ಸಾಕಷ್ಟು ವರ್ಷಗಳಿಂದಲೂ ಕೇಳಿ ಬರ್ತಿತ್ತು. ಎಷ್ಟೋ ಬಾರಿ ಸಂಸತ್ತಿನಲ್ಲಿ ಮಂಡನೆಯಾದ್ರೂ, ಅದಕ್ಕೆ ಅಧಿಕೃತ ಮುದ್ರೆ ಬಿದ್ದಿರಲಿಲ್ಲ. ಒಂದು ವೇಳೆ ಗೋಹತ್ಯೆ ಜಾರಿಗೆ ತಂದ್ರೆ ಸರ್ಕಾರವೇ ಉರುಳಿಬಿಡುತ್ತೆ. ಕೋಮು ಗಲಭೆ ಶುರುವಾಗುತ್ತೆ ಅಂತ ಜನ ನಾಯಕರು ಭಯ ಪಡ್ತಿದ್ರು. ಕೊನೆಗೆ ಈ ಫೈಲ್ ಅನ್ನೇ ಮೂಲೆಗೆ ತಳ್ಳಿದ್ರು. ಆದರೆ ಮೋದಿ ಅಧಿಕಾರಕ್ಕೆ ಬಂದ ನಂತರ, ಈ ಫೈಲ್ ಮತ್ತೆ ಓಪನ್ ಆಗಿತ್ತು. ಪರಿಸ್ಥಿತಿಯನ್ನ ಹಿಡಿತಕ್ಕೆ ತೆಗೆದುಕೊಂಡ ಮೋದಿ, ಮೂರನೇ ವರ್ಷದ ಸಂಭ್ರಮಾಚರಣೆ ಟೈಮಲ್ಲಿ ಏಕಾಏಕಿ ಗೋ ಹತ್ಯೆ ನಿಷೇಧ ಮಾಡಿದ್ದಾರೆ.
ಜೈಲೂಟ ಗ್ಯಾರಂಟಿ
ದೇಶಾದ್ಯಂತ ಗೋ ಹತ್ಯೆ ನಿಷೇಧ ಮಾಡಲಾಗಿದೆ. ಇನ್ಮುಂದೆ ಹಸು, ಕರು, ಎಮ್ಮೆ, ಎತ್ತು, ಒಂಟೆಗಳನ್ನ ಮಾರುವಂತಿಲ್ಲ ಅಂತ ಕೇಂದ್ರ ಸರ್ಕಾರ ಖಡಕ್ ಆದೇಶ ಹೊರಡಿಸಿದೆ. ಒಂದು ವೇಳೆ ಕಾನೂನು ಉಲ್ಲಂಘಿಸಿದ್ರೆ, ಜೈಲೂಟ ಗ್ಯಾರಂಟಿ. ಭಾರತದಲ್ಲಿ ಹೆಚ್ಚಾಗಿರೋದು ಹಿಂದೂಗಳು.. ಹಿಂದೂಗಳು ಗೋವನ್ನ ಪೂಜಿಸ್ತಾರೆ. ಹೀಗೆ ಗೋವನ್ನ ಪೂಜಿಸೋ ಭಾರತದಲ್ಲೇ ಗೋ ಮಾಂಸದ ದಂಧೆ ಎಗ್ಗು ಸಿಗ್ಗಿಲ್ಲದೇ ನಡೀತಿತ್ತು. ಆದ್ರೀಗ ಮೋದಿ ಅದಕ್ಕೆ ಬ್ರೇಕ್ ಹಾಕಿದ್ದಾರೆ.
ಗೋವುಗಳನ್ನ ನಮ್ಮ ನೆಲದಲ್ಲಿ ಪೂಜಿಸ್ತೀವಿ. ಆದ್ರೆ ನಾವು ಪೂಜಿಸುವ ಗೋವುಗಳು ನಮ್ಮ ಕಣ್ಮುಂದೇಯೇ ಪ್ರಾಣ ಬಿಡ್ತಿವೆ. ಇದಕ್ಕೆ ಕಡಿವಾಣ ಹಾಕೋದಕ್ಕೆ ಇದುವರೆಗೂ ಆಗಿರಲಿಲ್ಲ.. ಯಾಕಂದ್ರೆ ಗೋ ಮಾಂಸದಿಂದಲೇ 1 ಲಕ್ಷ ಕೋಟಿಯಷ್ಟು ಆದಾಯ ಗಳಿಸ್ತಿತ್ತು ಭಾರತ. ಇಡೀ ಜಗತ್ತಿಗೆ ಗೋ ಮಾಂಸ ರಫ್ತು ಮಾಡುವ ದೇಶವೇ ಭಾರತ.. ಗೋಮಾಂಸದಿಂದಲೇ ಕೋಟ್ಯಾನು ಕೋಟಿ ವಹಿವಾಟು ನಡೆಯುತ್ತೆ. ಹೀಗಾಗಿ ಗೋ ಹತ್ಯೆ ಮಾಡೋದಕ್ಕೆ ಸಾಕಷ್ಟು ಮಂದಿ ವಿರೋಧಿಸ್ತಿದ್ರು. ಸಂಸತ್ತಿನಲ್ಲಿ ಈ ಕಾಯ್ದೆಯನ್ನ ಪ್ರಸ್ತಾಪಿಸಿದ್ರೂ, ಅಧಿಕೃತ ಮುದ್ರೆ ಮಾತ್ರ ಬೀಳಲೇ ಇಲ್ಲ.
ಮೂಲೆಗುಂಪಾಗಿದ್ದ ಫೈಲಿಗೆ ಜೀವ
ಪ್ರಥಮ ಪ್ರಧಾನಿ ಜವಹರ್ಲಾಲ್ ನೆಹರೂ ಅವರಿ, ಗೋ ಹತ್ಯೆ ವಿಷಯದಲ್ಲಿ ಹಿಂದೇಟು ಹಾಕಿದ್ರು. ಇಂದಿರಾಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಸಿಂಗ್.. ಹೀಗೆ ಎಲ್ರೂ ಗೋಹತ್ಯೆ ನಿಷೇಧ ಕಾಯ್ದೆಯನ್ನ ಬದಿಗಿಟ್ಟರು. 1960ರಲ್ಲಿ 2010ರಲ್ಲಿ ಪ್ರಾಣಿ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂತಾದ್ರೂ, ಗೋ ಹತ್ಯೆ ನಿಲ್ಲಲೇ ಇಲ್ಲ. ಹೀಗೆ 70 ವರ್ಷಗಳಿಂದ ಮೂಲೆಗುಂಪಾಗಿದ್ದ ಈ ಗೋ ಹತ್ಯೆ ನಿಷೇಧದ ಫೈಲ್'ಅನ್ನ ನೋಡಿ, ಅದನ್ನ ಜಾರಿಗೆ ತಂದಿದ್ದು ಪ್ರಧಾನಿ ನರೇಂದ್ರ ಮೋದಿ.
ಯೋಗಿ ಆದಿತ್ಯನಾಥ್ ಯುಪಿ ಸಿಎಂ ಆದ ನಂತರ, ಅಕ್ರಮ ಕಸಾಯಿ ಖಾನೆಗಳನ್ನು ಬಂದ್ ಮಾಡಿಸಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಮೋದಿ ಇಡೀ ದೇಶಾದ್ಯಂತ ಗೋ ಹತ್ಯೆ ನಿಷೇಧ ಮಾಡಿದ್ದಾರೆ. ಇದು ಹಲವರ ಕಣ್ಣು ಕೆಂಪಾಗಿಸಿದೆ. ಮೋದಿ ವಿರುದ್ಧ ಸಿಡಿದೇಳುವಂತೆ ಮಾಡಿದೆ. ಈಗಾಗಲೇ ಹಲವೆಡೆ ವಿರೋಧಿಗಳು ರೊಚ್ಚಿಗೆದ್ದಿದ್ದು, ಮೋದಿ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ. ಆದರೆ ಮೋದಿ ಮಾತ್ರ ಡೋಟ್ ಕೇರ್ ಅಂತಿದ್ದಾರೆ.
ಮೊದಲೆ ಪ್ಲ್ಯಾನ್ ಮಾಡಿದ್ದ ಮೋದಿ
ಪ್ರಧಾನಿಯಾಗೋದಕ್ಕೂ ಮೊದಲೇ ಗೋ ಹತ್ಯೆ ನಿಷೇಧಕ್ಕೆ ಪ್ಲಾನ್ ಮಾಡಿದ್ರು ಮೋದಿ. ಆದರೆ ಪ್ರಧಾನಿಯಾದ ನಂತರ 3 ವರ್ಷ ಸುಮ್ಮನಿದ್ದರು. ಯಾಕಂದರೆ ಸನ್ನಿವೇಷವನ್ನ ಅರ್ಥಮಾಡಿಕೊಳ್ಳುವ ಅಗತ್ಯವಿತ್ತು. ಈಗ ಅದಕ್ಕೆ ಕಾಲು ಕೂಡಿ ಬಂದಿತ್ತು. ಮೂರು ವರ್ಷದ ಆಡಳಿತದ ನಂತರ, ದೃಢ ನಿರ್ಧಾರದಿಂದ, ಗೋ ಹತ್ಯೆಯನ್ನ ನಿಷೇಧ ಮಾಡಿದ್ದಾರೆ ಪ್ರಧಾನಿ ಮೋದಿ. ಮೋದಿ ಇಟ್ಟ ಈ ದಿಟ್ಟ ಹೆಜ್ಜೆ ನಿಜಕ್ಕೂ ಮಹತ್ವಪೂರ್ಣವಾದದ್ದು.
ಗೋ ಹತ್ಯೆ ರಾಜಕೀಯ ದಾಳವಾಗಿದೆ. ಇದೇ ಕಾರಣಕ್ಕೆ ಇಷ್ಟು ವರ್ಷಗಳ ಕಾಲ ಗೋಹತ್ಯೆ ನಿಷೇಧ ಆಗಿರಲಿಲ್ಲ. ಆದರೀಗ ಮೋದಿ ದೃಢ ಸಂಕಲ್ಪ ಮಾಡಿದ್ದಾರೆ. ಗೋಹತ್ಯೆ ನಿಷೇಧಿಸಿದ್ದಾರೆ. ಆದರಿದು ತೀವ್ರ ಸ್ವರೂಪ ಪಡೆದುಕೊಳ್ಳೋ ಸಾಧ್ಯತೆ ಇದೆ. ವಿರೋಧಿಗಳು ಇದನ್ನೇ ಮುಂದಿಟ್ಕೊಂಡು ದೇಶದ ಶಾಂತಿ ಕದಡುವ ಸಾಧ್ಯತೆ ಇದೆ. ಇದು ಮೋದಿಯನ್ನ ಮತ್ತು ಕೇಂದ್ರ ಸರ್ಕಾರವನ್ನ ತಲ್ಲಣಗೊಳಿಲಿದೆ.
ಕೆಲವು ದಿನಗಳ ಹಿಂದಷ್ಟೇ, ಯೋಗಿ ಆದಿತ್ಯನಾಥ್ ಯುಪಿ ಸಿಎಂ ಆಗಿ ಆಧಿಕಾರ ವಹಿಸಿಕೊಂಡಿದ್ರು. ಈ ವೇಳೆ ಅಕ್ರಮ ಕಸಾಯಿ ಖಾನೆಗಳನ್ನ ಬಂದ್ ಮಾಡಿಸಿದ್ರು. ಅದೇ ದೊಡ್ಡ ಪ್ರತಿಭಟನೆಗೆ ಸಾಕ್ಷಿಯಾಗಿತ್ತು. ಆದ್ರೀಗ ಮೋದಿ ಮಾಡಿದ್ದು ಅದಕ್ಕಿಂತಲೂ ದೊಡ್ಡ ಕೆಲಸ. ಇಡೀ ದೇಶಾದ್ಯಂತ ಗೋ ಹತ್ಯೆ ನಿಷೇಧ ಮಾಡಲಾಗಿದ್ದು, ಕಾನೂನು ಮೀರಿದ್ರೆ 7 ರಿಂಧ 10 ವರ್ಷ ಜೈಲೂಟ ಗ್ಯಾರಂಟಿ.
ಗೋವುಗಳನ್ನು ಬೇಕಾಬಿಟ್ಟಿ ಮಾರುವಂತಿಲ್ಲ
ಗೋ ಹತ್ಯೆ ನಿಷೇಧ ಆಗಿರೋದ್ರಿಂದ, ಇನ್ಮುಂದೆ ಗೋವುಗಳನ್ನ ಯಾರೂ ಬೇಕಾಬಿಟ್ಟಿ ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಮಾರಾಟ ಮಾಡ್ಬೇಕು ಅಂದ್ರೆ, ಸೂಕ್ತವಾದ ಪ್ರಮಾಣಪತ್ರಗಳು ಇರಬೇಕು. ಕೃಷಿಕರಿಗೆ ಮಾತ್ರ ಗೋವುಗಳ ಮಾರಾಟ ಮಾಡ್ಬೆಕು. ಒಮ್ಮೆ ಗೋವು ಖರೀದಿಸಿದವರು 6 ತಿಂಗಳ ಒಳಗೆ ಅದನ್ನ ಮಾರುವಂತಿಲ್ಲ. ಒಂದು ವೇಳೆ ಕಾನೂನು ಮೀರಿದ್ರೆ ಕಂಬಿ ಎಣಿಸಬೇಕಾಗುತ್ತೆ. ಆದರೆ ಈ ನಿಯಮ ಜಾರಿಯಾಗ್ಬೇಕಾದ್ರೆ ಇನ್ನೂ 3 ತಿಂಗಳ ಕಾಲಾವಕಾಶವಿದೆ. ಅಷ್ಟ್ರಲ್ಲಿ ವಿರೋಧಗಳು ದೇಶದ ಶಾಂತಿ ಕದಡಿ, ನಿರ್ಣಯವನ್ನೇ ಹಿಂತೆಗೆದುಕೊಳ್ಳುವಂತೆ ಮಾಡೋ ಸಾಧ್ಯತೆಯೂ ಇದೆ. ಆದರೆ ಯಾವುದಕ್ಕೂ ಡೋಟ್ ಕೇರ್ ಅಂತ ಗೋ ಮಾತೆಯ ರಕ್ಷಣಗೆ ಬದ್ಧರಾಗಿ ನಿಂತಿದ್ದಾರೆ ನರೇಂದ್ರ ಮೋದಿ.
ವರದಿ: ಶೇಖರ್ ಪೂಜಾರಿ, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.