
ಬೆಂಗಳೂರು (ನ.10): ಭಾರೀ ವಿರೋಧದ ನಡುವೆಯೇ ರಾಜ್ಯದಲ್ಲಿ ಟಿಪ್ಪು ಜಯಂತಿಯ ಆಚರಣೆ ನಡೆದು ಹೋಗಿದೆ. ಒಂದೆಡೆ ಜಯಂತಿ ಆಚರಣೆಗೆ ಭಾರೀ ವಿರೋಧ ವ್ಯಕ್ತವಾಗಿದ್ದರೂ ರಾಜ್ಯ ಸರ್ಕಾರ ಪೊಲೀಸ್ ಅಸ್ತ್ರ ಇಟ್ಟುಕೊಂಡು ಜಯಂತಿಯನ್ನ ಮಾಡಿ ಮುಗಿಸಿದೆ. ಆದರೆ, ಇದನ್ನ ವಿರೋಧಿಸಿದ್ದ ಕೆಲವರು ಮಾತ್ರ ಜಯಂತಿಯಲ್ಲಿ ಹಾಜರಾಗಿದ್ದರು.
ಟಿಪ್ಪು ಸುಲ್ತಾನನ ಜಯಂತಿ ಆಚರಣೆ ಮಾಡಿಯೇ ಸಿದ್ಧ ಎಂದಿದ್ದ ರಾಜ್ಯ ಸರ್ಕಾರ ಅಂತೂ ಇಂತೂ ಪೊಲೀಸ್ ಶಕ್ತಿ ಬಳಸಿಕೊಂಡು ಜಯಂತಿ ಮಾಡಿ ಮುಗಿಸಿದೆ. ಮತ್ತೊಂದೆಡೆ ಟಿಪ್ಪು ಜಯಂತಿಯನ್ನ ತೀವ್ರವಾಗಿ ವಿರೋಧಿಸಿದ್ದ ಬಿಜೆಪಿಯ ಕೆಲ ನಾಯಕರೇ ಆಚರಣೆ ಬೆಂಬಲ ನೀಡಿದ್ದು ಅಚ್ಚರಿಗೆ ಕಾರಣವಾಗಿದೆ. ಪ್ರಮುಖವಾಗಿ ಜಯಂತಿ ಆಚರಣೆಗೆ ಭಾರೀ ವಿರೋಧವಿದ್ದ ಕೊಡಗಿನಲ್ಲಿ ಬಿಗಿ ಪೊಲೀಸ್ ಸರ್ಪಗಾವಲಿನ ನಡೆವೆಯೂ ಹಲವೆಡೆ ಗಲಾಟೆ ನಡೆದಿದೆ. ಬೆಳಗ್ಗೆಯೇ ಸರ್ಕಾರಿ ಬಸ್ಸಿಗೆ ಕಲ್ಲೆಸೆದು ಆಕ್ರೋಶ ವ್ಯಕ್ತವಾಯ್ತು. ಅಲ್ಲದೇ, ಬಿಜೆಪಿ ಶಾಸಕರಾದ ಅಪ್ಪಚ್ಚು ರಂಜನ್, ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಸೇರಿ ಹಲವರು ಜಯಂತಿಗೆ ವಿರೋಧ ವ್ಯಕ್ತಪಡಿಸಿದರು.
ಇನ್ನು, ಸೋಮವಾರಪೇಟೆಯಲ್ಲಿ ಪೊಲೀಸರ ವಿರೋಧದ ನಡುವೆಯೂ ಪ್ರತಿಭಟನೆ ನಡೆಸಲು ಯತ್ನಿಸಿದಾಗ, ಟಿಪ್ಪು ವಿರೋಧಿ ಹೋರಾಟ ಸಮಿತಿಯ ಕೊಡಗು ಅಧ್ಯಕ್ಷ ಅಭಿಮನ್ಯು ಕುಮಾರ್ ಅವರ ಕೈಗೆ ಪೆಟ್ಟಾದ ಘಟನೆಯೂ ನಡೆಯಿತು. ಕೊಡಗಿನಲ್ಲಿ ಜಯಂತಿಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ, ಟಿಪ್ಪು ಜಯಂತಿಯನ್ನ ಜಿಲ್ಲಾಡಳಿತ ಆತುರಾತುರವಾಗಿ ಮಾಡಿ ಮುಗಿಸಿದೆ. ಮಡಿಕೇರಿಯ ಕೋಟೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ಕೇವಲ ಅರ್ಧ ಗಂಟೆಯಲ್ಲೇ ಮುಗಿಯಿತು. ಧಾರವಾಡದಲ್ಲಿ ಟಿಪ್ಪು ಜಯಂತಿ ಖಂಡಿಸಿ ಬಿಜೆಪಿಯಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿ ಶಾಸಕ ಅವರಿಂದ ಬೆಲ್ಲದ ನೇತೃತ್ವದಲ್ಲಿ ಯತ್ನ ನಡೆಯಿತು. ಇದನ್ನ ತಡೆದ ಪೊಲೀಸರ ವಿರುದ್ಧವೂ ಆಕ್ರೋಶ ವ್ಯಕ್ತವಾಯಿತು.
ಶಿವಮೊಗ್ಗದಲ್ಲಿ ಟಿಪ್ಪುವನ್ನ ಹೊಗಳುವ ಭರದಲ್ಲಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿರುವ ಘಟನೆ ನಡೆದಿದೆ. ಟಿಪ್ಪು ಆಳ್ವಿಕೆಗೂ ಮುನ್ನ ದಲಿತರ ಹೆಣ್ಣು ಮಕ್ಕಳು ರವಿಕೆ ಹಾಕುತ್ತಿರಲಿಲ್ಲ. ಅದನ್ನ ಹಾಕುವಂತೆ ಮಾಡಿದ್ದು ಟಿಪ್ಪು ಎನ್ನುವ ಮೂಲಕ ವಿವಾದಕ್ಕೆ ಈಡಾಗಿದ್ದಾರೆ.
ಒಟ್ಟಿನಲ್ಲಿ, ರಾಜ್ಯ ಸರ್ಕಾರ ಟಿಪ್ಪು ಜಯಂತಿ ಮಾಡಿಯೇ ಸಿದ್ಧ ಎಂದು ಹಠಕ್ಕೆ ಬಿದಿದ್ದ ರಾಜ್ಯ ಸರ್ಕಾರ ಅವಸರದಲ್ಲಿಯೇ ಆಚರಣೆ ಮಾಡಿ ಮುಗಿಸಿದೆ. ಮತ್ತೊಂದೆಡೆ ನಾವು ಯಾವುದೇ ಕಾರಣಕ್ಕೂ ಆಚರಣೆ ಮಾಡಲ್ಲ ಎಂದಿದ್ದ ಬಿಜೆಪಿಯ ಕೆಲವರು ಬೆಂಬಲ ನೀಡಿದ್ದು ಪಕ್ಷದೊಳಗಿನ ದ್ವಂದ್ವ ನಿಲುವನ್ನ ಹೊರಹಾಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.