ಯುಗಾದಿ ನಾಡಿಗೆ ಕಾಲಿರಿಸಿದೆ. ಎಲ್ಲೆಡೆ ಸಂಭ್ರಮದಿಂದ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಹೂವು ಹಣ್ಣುಗಳ ಮಾರುಕಟ್ಟೆ ದರವೇನು..?
ಬೆಂಗಳೂರು : ಬೆಲೆ ಏರಿಕೆ, ಚುನಾವಣಾ ಬಿಸಿಯ ಮಧ್ಯ ಬಂದಿರುವ ಹಿಂದೂಗಳ ಹೊಸ ವರ್ಷವಾದ ‘ವಿಕಾರಿ’ ಸಂವತ್ಸರದ ಚಾಂದ್ರಮಾನ ಯುಗಾದಿ ಹಬ್ಬ ಆಚರಣೆಗೆ ರಾಜಧಾನಿಯ ಜನತೆ ಸಡಗರ, ಸಂಭ್ರಮದಿಂದ ಆಚರಿಸಲು ಸಜ್ಜಾಗಿದ್ದಾರೆ.
ಯುಗಾದಿ ಹಬ್ಬದೊಂದಿಗೆ ಆರಂಭವಾಗುವ ಹೊಸ ವರ್ಷವನ್ನು ಸ್ವಾಗತಿಸಲು ಮನೆಗಳನ್ನು ಸುಣ್ಣ-ಬಣ್ಣದೊಂದಿಗೆ ಸ್ವಚ್ಛಗೊಳಿಸಲಾಗಿದೆ. ಹೊಸ ಧಿರಿಸು ಖರೀದಿ ಜೊತೆಗೆ ಹಬ್ಬಕ್ಕೆ ಬೇಕಾದ ಹೂವು, ಹಣ್ಣು ಇತ್ಯಾದಿಗಳ ಖರೀದಿ ನಗರದ ಮಾರುಕಟ್ಟೆಗಳಲ್ಲಿ ಅಬ್ಬರದಿಂದ ನಡೆದಿದೆ.
undefined
ನಗರದ ಕೆ.ಆರ್.ಮಾರುಕಟ್ಟೆ, ಬಸವನಗುಡಿ, ಮಲ್ಲೇಶ್ವರ, ಆರ್‌ಎಂಸಿ, ಗಾಂಧಿ ಬಜಾರ್, ಯಶವಂತಪುರ, ಜಯನಗರ ಸೇರಿದಂತೆ ನಗರದ ಎಲ್ಲಾ ಮಾರುಕಟ್ಟೆಗಳಲ್ಲಿ ಹೂವು-ಹಣ್ಣುಗಳ ವಹಿವಾಟು ಜೋರಾಗಿ ನಡೆಯಿತು. ಸೇವಂತಿ, ಗುಲಾಬಿ, ಮಲ್ಲಿಗೆ, ಕನಕಾಂಬರ ಹೂವುಗಳು ಹಾಗೂ ಮಾವಿನಸೊಪ್ಪು, ಬೇವು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹಬ್ಬದ ಪ್ರಯುಕ್ತ ಸಾಮಾಗ್ರಿಗಳ ಬೆಲೆ ದುಬಾರಿಯಾಗಿದ್ದು, ಗ್ರಾಹಕರ ಜೇಬಿಗೆ ಭಾರಿ ಹೊಡೆತ ಬಿದ್ದಿದೆ.
ಎಲ್ಲೆಡೆ ಹಬ್ಬದ ವಾತಾವರಣ ಸಂಭ್ರಮ ಕಳೆಕಟ್ಟಿದ್ದು, ಹಬ್ಬದ ಸಾಮಾಗ್ರಿಗಳು, ಹೊಸಬಟ್ಟೆ, ಹಣ್ಣು-ತರಕಾರಿಗಳ ಖರೀದಿಯಲ್ಲಿ ನಿರತರಾಗಿದ್ದರು. ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಮಾರುಕಟ್ಟೆಗಳು ಜನಸಂದಣಿಯಿಂದ ಕೂಡಿದ್ದವು. ಹಬ್ಬದ ಖರೀದಿಗಾಗಿ ಮಾರುಕಟ್ಟೆಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ವಾಹನ ಸಂಚಾರ ದಟ್ಟವಾಗಿತ್ತು. ಅಂಗಡಿ ಮುಂಗಟ್ಟುಗಳು ಜನರಿಂದ ತುಂಬಿದ್ದವು.
ಹಬ್ಬದ ಆಚರಣೆಗೆ ಅಗತ್ಯವಾದ ಈರುಳ್ಳಿ, ಬೆಳ್ಳುಳ್ಳಿ, ಕರಿಬೇವು, ಕೊತ್ತಂಬರಿ, ನಿಂಬೆಹಣ್ಣು, ತೆಂಗಿನಕಾಯಿ, ಟೊಮೆಟೋ, ಆಲೂಗಡ್ಡೆ ಸೇರಿದಂತೆ ವಿವಿಧ ತರಕಾರಿಗಳು ಅಗ್ಗದ ದರದಲ್ಲಿ ದೊರೆಯುತ್ತಿವೆ. ಕೆಲ ಹಣ್ಣು-ತರಕಾರಿಗಳ ಬೆಲೆ ಹಬ್ಬದ ಹಿನ್ನೆಲೆ ತುಸು ಏರಿಕೆಯಾಗಿದೆ. ಸೊಪ್ಪಿನ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಕೊತ್ತಂಬರಿ ಸೊಪ್ಪು ಒಂದು ಕಟ್ಟು 20ರಿಂದ 25, ಪಾಲಕ್, ಸಬ್ಬಕ್ಕಿ 20ಕ್ಕೆ 4 ಕಟ್ಟು, ಮೆಂತ್ಯೆ ದೊಡ್ಡ ಕಟ್ಟು 10ಕ್ಕೆ ಮಾರಾಟವಾಗುತ್ತಿದೆ. ಕೆ.ಆರ್.ಮಾರುಕಟ್ಟೆಯಲ್ಲಿ ಕಿತ್ತಳೆ ಕೆ.ಜಿ.ಗೆ 220ಕ್ಕೆ ಮಾರಾಟವಾಗುತ್ತಿದೆ. ವಿವಿಧ ತಳಿಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬಂದಿದ್ದು, ಜನರ ಬಾಯಲ್ಲಿಯೂ ನೀರೂರಿಸುತ್ತಿವೆ.
ಬೇವು ವ್ಯಾಪಾರ:
ಯುಗಾದಿಯಲ್ಲಿ ಬೇವು ಹಾಗೂ ಮಾವಿನ ಸೊಪ್ಪಿಗೆ ಬೇಡಿಕೆ ಹೆಚ್ಚಿರುವುದರಿಂದ ಆಂಧ್ರದಿಂದ ಬಂದ ವ್ಯಾಪಾರಿಗಳು ನಗರದಲ್ಲಿ ಬೀಡುಬಿಟ್ಟಿದ್ದಾರೆ. ಗಾಂಧಿಬಜಾರ್, ಬಸವನಗುಡಿ, ಕೆ.ಆರ್.ಮಾರುಕಟ್ಟೆಸೇರಿದಂತೆ ವಿವಿಧೆಡೆ ರಸ್ತೆ ಬದಿಗಳಲ್ಲಿ ಬೇವು, ಮಾವಿನ ಸೊಪ್ಪಿನ ಮಾರಾಟದಲ್ಲಿ ತೊಡಗಿದ್ದಾರೆ.
ಹೊಸ ವರ್ಷವನ್ನು ಹೊತ್ತುತರುವ ಯುಗಾದಿ ಆಚರಣೆಗೆ ವಿವಿಧ ದೇವಾಲಯಗಳು ಸಜ್ಜಾಗಿದ್ದು, ತಳಿರು ತೋರಣಗಳಿಂದ ಕಂಗೊಳಿಸುತ್ತಿವೆ. ದೇವರ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಬೇವು ಬೆಲ್ಲ ಬೀರಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಸರ್ಪಭೂಷಣ ಶಿವಯೋಗಿಗಳ ಮಠ, ಶ್ರೀರಾಮ ಭಕ್ತ ಸಭಾ ಹಾಗೂ ಅಧ್ಯಾತ್ಮ ಪ್ರಕಾಶ ಕಾರ್ಯಾಲಯ ಸೇರಿದಂತೆ ನಗರದಲ್ಲಿರುವ ವಿವಿಧ ಧಾರ್ಮಿಕ ಸಂಘ-ಸಂಸ್ಥೆಗಳು ಪಂಚಾಂಗ ಶ್ರವಣ ಕಾರ್ಯಕ್ರಮ ಆಯೋಜಿಸಿವೆ.
ಹೊಸ ತೊಡಕುಗೆ ಸಿದ್ದತೆ:
ಹಬ್ಬದ ಮಾರನೇ ದಿನ ಮಾಂಸ ಊಟದ ಹಬ್ಬ ಸಾಮಾನ್ಯ. ಅದಕ್ಕಾಗಿ ಇಂದಿನಿಂದಲೇ ಸಿದ್ಧತೆ ನಡೆದಿದೆ. ಕೋಳಿ, ಕುರಿ, ಮೇಕೆಗಳ ವ್ಯಾಪಾರ ವಹಿವಾಟು ಜೋರಾಗಿದೆ.
ಗಗನಕ್ಕೇರಿದ ದಿನಸಿ ಬೆಲೆ:
ಯುಗಾದಿ ಹಬ್ಬದಲ್ಲಿ ಹೋಳಿಗೆ ಸವಿಯುವುದು ಸಾಮಾನ್ಯ. ಆದರೆ, ದಿನಸಿ ಪದಾರ್ಥಗಳ ಬೆಲೆ ಏರಿಕೆ ಜನತೆಯನ್ನು ಹೈರಾಣಾಗಿಸಿದೆ. ತೊಗರಿಬೇಳೆ ಕೆ.ಜಿ 80ರಿಂದ 100, ಕಡಲೆಬೇಳೆ 80, ಬೆಲ್ಲ ಕೆ.ಜಿ. 45ರಿಂದ 50, ಮೈದಾ ಹಿಟ್ಟು ಕೆ.ಜಿ. 35-40, ಕೊಬ್ಬರಿ 260ಕ್ಕೆ ಮಾರಾಟವಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪದಾರ್ಥಗಳ ಬೆಲೆ ಹೆಚ್ಚಾಗಿದೆ. ಆದರೆ, ವ್ಯಾಪಾರದ ಭರಾಟೆಗೆ ಪೆಟ್ಟುಬಿದ್ದಿಲ್ಲ.
ಹೂವಿನ ದರ ಏರಿಕೆ:
ಕಳೆದ ಒಂದು ತಿಂಗಳಿನಿಂದ ಬಿಸಿಲಿನ ಬೇಗೆ ಹೆಚ್ಚಾಗಿರುವುದರಿಂದ ನಗರಕ್ಕೆ ಪೂರೈಕೆಯಾಗುತ್ತಿರುವ ಸೇವಂತಿಗೆ, ಗುಲಾಬಿ ಹೂವುಗಳ ಪ್ರಮಾಣದಲ್ಲಿ ವ್ಯತ್ಯಾಸವಾಗಿದ್ದು, ದರ ಹೆಚ್ಚಾಗಿದೆ. ಮಾರುಕಟ್ಟೆಗೆ ಮಲ್ಲಿಗೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ. ಮಲ್ಲಿಗೆ, ಮಲ್ಲೆ, ಕಾಕಡ ಹೂವುಗಳ ಬೆಲೆ ಒಂದು ಕೆ.ಜಿಗೆ 400ರಿಂದ 500, ಸೇವಂತಿ ಕೆ.ಜಿ. 300ರಿಂದ 500, ಮಾರಿಗೋಲ್ಡ್ ಸೇವಂತಿ ಕೆ.ಜಿ. 300- 400ಕ್ಕೆ ಏರಿಕೆಯಾಗಿದೆ. ಬಟನ್ ರೋಸ್ 100 ಗ್ರಾಂ. 40, ಕನಕಾಂಬರ, ಸೇವಂತಿ, ಮಾರಿಗೋಲ್ಡ್ ಒಂದು ಮಾರು 150ರಿಂದ 200, ಸುಗಂಧರಾಜ ಹಾರ 150-300 ಖರೀದಿಯಾಯಿತು.
ಕೆ.ಆರ್.ಮಾರುಕಟ್ಟೆದರ (ಕೆ.ಜಿ.ಗಳಲ್ಲಿ)
ಹಣ್ಣುಗಳು...
ಪಚ್ಚ ಬಾಳೆಹಣ್ಣು 30-35
ಏಲಕ್ಕಿ ಬಾಳೆಹಣ್ಣು 40-50
ಸೇಬು 180-200
ದಾಳಿಂಬೆ 140
ಕಲ್ಲಂಗಡಿ 15-18
ಕಲ್ಲಂಗಡಿ (ಕಿರಣ್) 20
ಮಾವು ರಸಪುರಿ 140
ಮಾವು ಸಿಂದೂರಿ 100
ಮಾವು ಬಾದಮಿ 180
ಅನಾನಸ್ 40
ಖರ್ಬೂಜಾ 40 (.100ಕ್ಕೆ 3 ಕೆ.ಜಿ)
ಸಪೋಟ 40-46
ಕಿತ್ತಳೆ 220
ಮಾವಿನಸೊಪ್ಪು 1 ಕಟ್ಟು 10
ಬೇವಿನಸೊಪ್ಪು 1 ಕಟ್ಟು 10
ಕೆ.ಆರ್.ಮಾರುಕಟ್ಟೆದರ (ಕೆ.ಜಿ.ಗಳಲ್ಲಿ)
ತರಕಾರಿ ಬೆಲೆ
ಹುರುಳಿಕಾಯಿ 100
ಬೆಂಡೆಕಾಯಿ 50
ಆಲೂಗಡ್ಡೆ 20
ಕ್ಯಾರೇಟ್ 30
ಬದನೇಕಾಯಿ 30
ನವಿಲುಕೋಸು 40
ಈರುಳ್ಳಿ 16
ಸೊಪ್ಪುಗಳು 3 ಕಟ್ಟುಗಳಿಗೆ 20
ತೆಂಗಿನಕಾಯಿ 15