ರಾಜ್ಯದ ದೋಸ್ತಿ ಸರ್ಕಾರವನ್ನು ಬಿಜೆಪಿಯೇ ಕಾಪಾಡಬೇಕು: ಪೇಜಾವರ ಸಲಹೆ

Published : Jul 05, 2019, 07:29 PM ISTUpdated : Jul 05, 2019, 07:36 PM IST
ರಾಜ್ಯದ ದೋಸ್ತಿ ಸರ್ಕಾರವನ್ನು ಬಿಜೆಪಿಯೇ ಕಾಪಾಡಬೇಕು: ಪೇಜಾವರ ಸಲಹೆ

ಸಾರಾಂಶ

ಉಡುಪಿ ಪೇಜಾವರ ಸ್ವಾಮೀಜಿ ರಾಜ್ಯದ ದೋಸ್ತಿ ಸರಕಾರ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದ ಬಗ್ಗೆ ಮಾತನಾಡಿದ್ದಾರೆ. ರಾಜ್ಯದ ದೋಸ್ತಿ ಸರಕಾರವನ್ನು ಬಿಜೆಪಿಯೇ ಕಾಪಾಡಬೇಕು ಎಂಬ ಸಲಹೆಯನ್ನು ನೀಡಿದ್ದಾರೆ.

ಉಡುಪಿ[ಜು. 05]  ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಈಗ ಅಧಿಕಾರದಲ್ಲಿರುವ ಸಮ್ಮಿಶ್ರ ಸರ್ಕಾರ ಪತನವಾಗದಂತೆ ಬಿಜೆಪಿಯು ಸರ್ಕಾರಕ್ಕೆ ಪೂರ್ಣ ಬೆಂಬಲ ನೀಡಬೇಕು. ಸರ್ವಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ನಡೆಯಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಮ್ಮಿಶ್ರ ಸರ್ಕಾರವನ್ನು ಬೀಳಿಸುವ ಅಥವಾ ಆಪರೇಶನ್ ಕಮಲ ಮಾಡುವ ಪ್ರಯತ್ನವನ್ನು ಬಿಜೆಪಿ ಮಾಡಬಾರದು. ಸರ್ಕಾರಕ್ಕೆ ಪೂರ್ಣ ಬೆಂಬಲ ನೀಡಿ ಕಾಪಾಡಬೇಕು ಎಂದರು.

ರಾಜ್ಯದಲ್ಲಿ ಸರ್ಕಾರ ಬಿದ್ದರೆ, ರಾಷ್ಟ್ರಪತಿ ಆಳ್ವಿಕೆ ಬಂದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗುವುದಿಲ್ಲ, ಚುನಾವಣೆ ನಡೆದರೆ ಅನವಶ್ಯಕ ಖರ್ಚು, ಅದನ್ನು ಜನರ ಮೇಲೆ ಹೇರಿದಂತಾಗುತ್ತದೆ. ರಾಜ್ಯದಲ್ಲಿ ಬರಗಾಲ, ಮಳೆಗಾಲದ ಸಮಸ್ಯೆಗಳಿವೆ. ಈ ಹಂತದಲ್ಲಿ ಸರ್ಕಾರ ಬೀಳಬಾರದು ಎಂದರು.

ಎರಡನೇ ಮಹಾಯುದ್ಧ ಕಾಲದಲ್ಲಿ ಬ್ರಿಟನ್‌ನಲ್ಲಿ ಎಲ್ಲ ಪಕ್ಷಗಳು ಸೇರಿ ಸರ್ಕಾರ ನಡೆಸಿದ್ದವು ಎಂದು ಉದಾಹರಿಸಿದ ಅವರು, ರಾಜ್ಯದ ಇಂದಿನ ಪರಿಸ್ಥಿತಿಯಲ್ಲಿ ಸರ್ವಪಕ್ಷ ಸರ್ಕಾರ ಅಗತ್ಯ, ಆದರೆ ಕೇಂದ್ರದಲ್ಲಿ ಅದರ ಅಗತ್ಯವಿಲ್ಲ, ಕೇಂದ್ರದಲ್ಲಿ ಬಿಜೆಪಿಗೆ ಬಹುಮತ ಇದೆ ಎಂದು ಸ್ಪಷ್ಟಪಡಿಸಿದರು.

ಪ್ರತ್ಯೇಕ ಧರ್ಮ ಸರಿಯಲ್ಲ: ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ಮತ್ತು ಅದರಿಂದ ಮೀಸಲಾತಿ ಸಿಗುತ್ತದೆ ಎಂಬ ಲೌಕಿಕ ಕಾರಣಗಳಿಗಾಗಿ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕು ಎಂಬುದು ಸರಿಯಲ್ಲ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ವೀರಶೈವ ಲಿಂಗಾಯತ ಧರ್ಮವು ಹಿಂದು ಧರ್ಮದಿಂದ ಪ್ರತ್ಯೇಕವಲ್ಲ ಎಂಬ ಅಭಿಪ್ರಾಯವನ್ನು ಪುನರುಚ್ಚರಿಸಿದರು. ಇದನ್ನು ವಿರೋಧಿಸುತ್ತಿರುವ ಸಾಣೇಹಳ್ಳಿ ಸ್ವಾಮೀಜಿ ಮತ್ತು ಇತರ ಹೋರಾಟಗಾರರೊಂದಿಗೆ ತಾನು ಸೌಹಾರ್ದ ಚರ್ಚೆಗೆ ಸಿದ್ಧ ಎಂದು ಪೇಜಾವರ ಶ್ರೀಗಳು ಆಹ್ವಾನ ನೀಡಿದರು.

ಜು. 28ರೊಳಗೆ ಬೆಂಗಳೂರಿನಲ್ಲಿರುವ ಪೇಜಾವರ ಮಠದ ಪೂರ್ಣಪ್ರಜ್ಞಾ ವಿದ್ಯಾಪೀಠದಲ್ಲಿ ಅಥವಾ ಬೇರೆ ಕಡೆಯಲ್ಲಾದರೂ ಸರಿ ಅಥವಾ ಜು.28ರ ನಂತರವಾದರೆ ತಾವು ಮೈಸೂರಿನಲ್ಲಿ ಚಾತುರ್ಮಾಸ ವ್ರತ ಕೈಗೊಳ್ಳುತ್ತಿರುವುದರಿಂದ ಅಲ್ಲಿಯಾದರೂ ಚರ್ಚೆ ನಡೆಸಲು ಸರಿ ಎಂದವರು ಹೇಳಿದರು.

ಸಾಣೆಹಳ್ಳಿ ಸ್ವಾಮೀಜಿ ಮತ್ತು ಹೋರಾಟಗಾರರಾದ ಸಚಿವ ಪಾಟೀಲ್, ವಿನಯ ಕುಲಕರ್ಣಿ, ಜಾಮದಾರ್, ಹರ್ಲಾಪುರ ಮತ್ತು ಇತರರು ಯಾರೂ ಬಂದರೂ ತಾವು ಚರ್ಚೆಗೆ ಸಿದ್ಧ, ಆದರೆ ಚರ್ಚೆ ಶಾಂತ ವಾತಾವರಣದಲ್ಲಿ ನಡೆಯಬೇಕು ಎಂದರು. 

ಖರ್ಗೆ, ಸಿದ್ದು ಹಿಂದಿಕ್ಕಿ ದೆಹಲಿ ಸಾಮ್ರಾಜ್ಯಕ್ಕೆ ಡಿಕೆಶಿ ಲಗ್ಗೆ?

ವೀರಶೈವ- ಲಿಂಗಾಯತ ಧರ್ಮದ ಬಗ್ಗೆ ಮಾತನಾಡುವುದಕ್ಕೆ ಪೇಜಾವರ ಶ್ರೀಗಳಿಗೇನು ಅಧಿಕಾರವಿದೆ? ಅವರು ಮಾಧ್ವರು ಅವರಿಗೇಕೆ ಉಸಾಬರಿ? ಎಂದೆಲ್ಲ ಮಾತುಗಳು ಕೇಳಿ ಬರುತ್ತಿವೆ. ಅಣ್ಣತಮ್ಮಂದಿರು ಜಗಳ ಮಾಡಬಾರದು ಎಂದು ಹೇಳುವುದರಲ್ಲಿ ಏನು ತಪ್ಪಿದೆ ಎಂದು ಶ್ರೀಗಳು ಪ್ರಶ್ನಿಸಿದರು. 

ಲಿಂಗಾಯತರು ಪ್ರತ್ಯೇಕವಾದರೆ ಬಲಹೀನರಾಗುತ್ತಾರೆ, ಹಿಂದು ಧರ್ಮವೂ ಬಲಹೀನವಾಗುತ್ತದೆ. ಎರಡೂ ಜೊತೆಗಿದ್ದರೇ ಹಿಂದು ಧರ್ಮ ಬಹಳ ಬಲಯುತವಾಗುತ್ತದೆ ಎಂದವರು ಪ್ರತಿಪಾದಿಸಿದರು. 

ಜೈನರು ಸಿಖ್ಖರೂ ಹಿಂದುಗಳೇ: ಜೈನರು, ಸಿಖ್ಖರು ಕೂಡ ಹಿಂದುಗಳೇ ಆಗಿದ್ದಾರೆ. ಬ್ರಿಟಿಷರಿಂದಾಗಿ ಹಿಂದು ಮತ್ತು ಜೈನರು ನಡುವೆ ತಾರತಮ್ಯ ಉಂಟಾಗಿತ್ತು, ಆದರೆ ಈಗ ಜೈನರು ವಿಶ್ವ ಹಿಂದೂ ಪರಿಷತ್ತನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅದೇ ರೀತಿ ಸಿಖ್ಖರು ಕೂಡ ಹಿಂದು ದೇವರನ್ನು ಪೂಜಿಸುತ್ತಿದ್ದಾರೆ ಎಂದು ಪೇಜಾವರ ಶ್ರೀಗಳು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಾಜಿ ಸಚಿವ ರಾಜುಗೌಡ ಕಾರು ಅಪಘಾತ ಕೇಸ್‌ಗೆ ಟ್ವಿಸ್ಟ್, ಟಿಪ್ಪರ್ ಎರಡು ಬಾರಿ ಡಿಕ್ಕಿ ಹಿಂದೆ ಅನುಮಾನ
ಸ್ಟೇಜ್ ಮೇಲೇನೇ ಸಿಟ್ಟಿಗೆದ್ದ ರಚಿತಾ ರಾಮ್ 'ಫ*..' ಅಂದೇಬಿಟ್ರು!.. ಅಂಥಾ ಸಿಟ್ಟು 'ಲೇಡಿ ಬಾಸ್‌'ಗೆ ಯಾಕ್ ಬಂತು?