ಆ ಇಬ್ಬರು ಮಹಿಳೆಯರ ಕಲಹವೇ ಶಿರೂರು ಶ್ರೀಗೆ ಮುಳುವಾಯ್ತಾ..?

Published : Jul 23, 2018, 08:46 AM IST
ಆ ಇಬ್ಬರು ಮಹಿಳೆಯರ ಕಲಹವೇ ಶಿರೂರು ಶ್ರೀಗೆ ಮುಳುವಾಯ್ತಾ..?

ಸಾರಾಂಶ

ಶಿರೂರು ಶ್ರೀಗಳ ಸಾವಿಗೆ ದಿನಕ್ಕೊಂದು ತಿರುವು ಸಿಗುತ್ತಿದ್ದು, ಇದೀಗ ಅವರ ಸಾವಿಗೆ ಕಾರಣವಾಗಿರುವುದು ಇಬ್ಬರು ಮಹಿಳೆಯರ ನಡುವಿನ ಜಗಳವೇ ಕಾರಣ ಎನ್ನುವುದು ಮಠದ ಸಿಬ್ಬಂದಿಯೇ ಬಿಚ್ಚಿಟ್ಟಿರುವ ಸ್ಫೋಟಕ ಮಾಹಿತಿಯಾಗಿದೆ.  

ಉಡುಪಿ :  ಮೊದಲೇ ಶಿರೂರು ಶ್ರೀಗಳ ಲಿವರ್ ಕೈಕೊಟ್ಟಿತ್ತು, ಅದರ ಬೆನ್ನಲ್ಲೇ ಅವರ ಬದುಕಿನಲ್ಲಿ ಪ್ರವೇಶಿಸಿದ ಎರಡನೇ ಮಹಿಳೆ ಪ್ರತಿದಿನ ತಂದುಕೊಡುತ್ತಿದ್ದ ಸ್ವಾಮೀಜಿಗಳಾದವರಿಗೆ ವರ್ಜ್ಯವಾಗಿದ್ದ ಆಹಾರ ಅವರ ಆರೋಗ್ಯವನ್ನು ಮತ್ತಷ್ಟು ಕೆಡಿಸಿತು! ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಹೆಸರು ಹೇಳಲಿಚ್ಛಿಸದ ಮಠದ ಕೆಲ ಸಿಬ್ಬಂದಿ ಬಿಚ್ಚಿಟ್ಟ ಮಾಹಿತಿ ಇದು. 

ತಮಗೆ ಆಪ್ತರಾಗಿದ್ದ ಎರಡು ಮಹಿಳೆಯರ ನಡುವಿನ ಪರಸ್ಪರ ಕಿತ್ತಾಟದಿಂದಾಗಿ ‘ಆಹಾರದ ವಿಷವರ್ತುಲ’ಕ್ಕೆ ಬಿದ್ದ ಸ್ವಾಮೀಜಿ ಕೊನೇ ದಿನಗಳಲ್ಲಿ ಅಕ್ಷರಶಃ ನಲುಗಿ ಹೋಗಿದ್ದರು ಎನ್ನುತ್ತಾರೆ ಶಿರೂರು ಮಠದ ಹೆಸರೇಳಲಿಚ್ಛಿಸದ ಕೆಲ ಸಿಬ್ಬಂದಿ. ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಅಸಹಜ ಸಾವಿನ ಹಿಂದೆ ಅವರೊಂದಿಗೆ ಸಂಬಂಧವಿದ್ದ ಇಬ್ಬರ ಮಹಿಳೆಯರ ನಡುವಿನ ಕಲಹ ಕಾರಣವಾಗಿರುವ ಬಗ್ಗೆ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ತೀವ್ರ ಅನು ಮಾನ ವ್ಯಕ್ತಪಡಿಸಿದ್ದರು. ಆದರೆ ಈ ಮಹಿಳೆಯರಿಬ್ಬರ ಜಗಳ ಶಿರೂರು ಶ್ರೀಗಳ ಸಾವಿಗೆ ಹೇಗೆ ಕಾರಣ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಅದರ ಬೆನ್ನಲ್ಲೇ ಸ್ವಾಮೀಜಿ ಬದುಕಿನಲ್ಲಾಗಿದ್ದ ಈ ಬೆಳವಣಿಗೆ ಈಗ ಬೆಳಕಿಗೆ ಬಂದಿದೆ. 

ಕಳೆದ ವರ್ಷ ರಾಮನವಮಿಗೆ ಕೆಲವೇ ದಿನ ಮೊದಲು ಸ್ವಾಮೀಜಿಯ ಬದುಕಿನಲ್ಲಿದ್ದ ಆ ಇಬ್ಬರು ಮಹಿಳೆಯರು ಊಟ ಮಾಡಿಸುವ ವಿಷ ಯದಲ್ಲಿ ಜಗಳವಾಡಿದ್ದರು. ಸ್ವಾಮೀಜಿ ಸಮ್ಮುಖದ ಲ್ಲಿಯೇ, ಮಠದ ದೇವರ ಎದುರಿನಲ್ಲೇ ಆಣೆ- ಪ್ರಮಾಣಗಳನ್ನು ಮಾಡಿದ್ದರು. ಆಗ ಇಬ್ಬರ ಕೈಯಲ್ಲೂ ಸಿಕ್ಕಿಹಾಕಿಕೊಂಡಿದ್ದ ಶಿರೂರು ಶ್ರೀಗಳು ಅಸಹಾಯಕರಾಗಿ ಮೂಕರಾಗಿ ನೋಡುತ್ತಿದ್ದರು. 

ಮುಂದೆ ಆಹಾರದ ವಿಷ ವರ್ತುಲದಲ್ಲಿ ಸಿಕ್ಕಿಹಾಕಿಕೊಂಡ ಸ್ವಾಮೀಜಿ ಸುಮಾರು ಒಂದೂವರೆ ವರ್ಷಗಳಲ್ಲಿ ತೀವ್ರವಾಗಿ ಆರೋಗ್ಯ ಕೆಡಿಸಿಕೊಂಡರು. ಮಠದಲ್ಲಿ 9 ವರ್ಷಗಳ ಕಾಲ ಮ್ಯಾನೇಜರ್ ಆಗಿದ್ದ ಸುನಿಲ್ ಕುಮಾರ್ ಅವರು ‘ಕನ್ನಡಪ್ರಭ’ಕ್ಕೆ ಹೇಳಿದ ರೀತಿಯಲ್ಲಿ, ಎರಡನೇ ಮಹಿಳೆಯ ಮೋಹಕ್ಕೆ, ಆಕೆಯ ಹಠ ಸ್ವಾಮೀಜಿ ಪ್ರಾಣಕ್ಕೆ ಎರವಾಯಿತು.

ಆಕೆ ಗೌರವ ಉಳಿಸಿದ್ದರು: ಸುಮಾರು 25 ವರ್ಷಗಳಿಂದ ಸ್ವಾಮೀಜಿಗೆ ಮಹಿಳೆಯೊಬ್ಬರ ಸಂಬಂಧ, ಮಗು ಇರುವುದು ಈಗ ಗುಟ್ಟೇನಲ್ಲ. ಆದರೆ ಆಕೆ ಯಾರು, ನೋಡುವುದಕ್ಕೆ ಹೇಗಿದ್ದಾರೆ ಎಂದು ಉಡುಪಿಯ ಮಠದ ನಾಲ್ಕೈದು ಸಿಬ್ಬಂದಿಯನ್ನು ಬಿಟ್ಟರೆ ಬೇರಿನ್ಯಾರಿಗೂ ಗೊತ್ತಿರಲಿಲ್ಲ. ವಿಷಯವನ್ನು ಸ್ವಾಮೀಜಿ ಗುಟ್ಟಾಗಿ ಇಟ್ಟಿರದಿದ್ದರೂ, ಆಕೆ ಮಾತ್ರ ತನ್ನ ಇರುವನ್ನು ಇಷ್ಟು ವರ್ಷಗಳಿಂದಲೂ ತೀರಾ ಗುಟ್ಟಾಗಿ ಟ್ಟುಕೊಂಡಿದ್ದರು. ಮಠದ ಗೌರವ ಕಾಪಾಡಿಕೊಂಡಿದ್ದರು. ಮಠದ ಮೇಲಂತಸ್ತಿನ ಕೋಣೆ ಬಿಟ್ಟು ಈಚೆಗೆ ಬರುತ್ತಿರಲಿಲ್ಲ. ಸ್ವಾಮೀಜಿ ಅವರ ಸಾತ್ವಿಕ ಆಹಾರದ ಎಲ್ಲ ಉಸ್ತುವಾರಿಗಳನ್ನು ಆಕೆಯೇ ನೋಡಿಕೊಳ್ಳುತ್ತಿದ್ದರು.

ಆದರೆ ಒಂದೂವರೆ ವರ್ಷದ ಹಿಂದೆ ಇನ್ನೊಬ್ಬ ಮಹಿಳೆ ಮಠ ಪ್ರವೇಶಿಸಿದ್ದರು. ಒಂದು ಬಾರಿ ಆಕೆ ಮತ್ತು ಸ್ವಾಮೀಜಿ ಮೊದಲಾಕೆಯ ಕೈಯಲ್ಲಿ ಸಿಕ್ಕಿಬಿದ್ದು ದೊಡ್ಡ ರಾದ್ಧಾಂತವೇ ಆಗಿತ್ತು. ಆದರೆ ನಂತರ ಆ ಮಹಿಳೆ ಯಾವ ರೀತಿಯಲ್ಲಿ ಮಠದಲ್ಲಿ ಅಧಿಕಾರ ಚಲಾಯಿಸಿದರೆಂದರೆ ಸ್ವತಃ ಸ್ವಾಮೀಜಿ ಆಕೆಯಿಂದ ಬಚ್ಚಿಟ್ಟುಕೊಳ್ಳುವುದಕ್ಕೆ ಹೆಣಗಾಡಬೇಕಾಯಿತು. 

ಇಬ್ಬರ ಜಗಳದಲ್ಲಿ ಜಾಗ ಬದಲಾವಣೆ: ಸ್ವಾಮೀಜಿ ಉಡುಪಿ ಮಠಕ್ಕಿಂತ ಹೆಚ್ಚಾಗಿ 10 ಕಿ.ಮೀ. ದೂರದ ಸಂತೆಕಟ್ಟೆ ಎಂಬಲ್ಲಿರುವ ಶಾಖಾ ಮಠದಲ್ಲಿರತೊಡಗಿದರು. ಆಕೆ ಅಲ್ಲಿಗೂ ಬರುತ್ತಿದ್ದಳು, ಆದರೆ ಅಲ್ಲಿ ಅಗತ್ಯ ಸೌಕರ್ಯಗಳಿಲ್ಲದ ಕಾರಣ ನಾಲ್ಕೆ ದು ದಿನಗಳಲ್ಲಿ ಅಲ್ಲಿಂದ 25 ಕಿ.ಮೀ. ದೂರದ ಶಿರೂರು ಮೂಲ ಮಠಕ್ಕೆ ತಮ್ಮ ವಾಸ ಬದಲಾಯಿಸಿದರು. 

ಕಳೆದ ಒಂದೂವರೆ ವರ್ಷದಿಂದ ಸ್ವಾಮೀಜಿ ಅಲ್ಲಿದ್ದರು. ಆಕೆಯೂ ನಿತ್ಯ ಎಂಬಂತೆ ಬರುತ್ತಿದ್ದರು. ಬುತ್ತಿ ಹೊರಗೆಸೆದರು: ಮೂಲಮಠದಲ್ಲಿ ನಡೆಯುತ್ತಿದ್ದ ವಿದ್ಯಮಾನಗಳು ಮೊದಲಾಕೆಗೆ ತಿಳಿದು, ಆಕೆ ರಾಮನವಮಿ ಒಂದೆರಡು ವಾರ ಮೊದಲು ಮಠಕ್ಕೆ ಬಂದರು, ಈ ಸಂದರ್ಭದಲ್ಲಿ ಆಕೆ ಸ್ವಾಮೀಜಿ ಅವರಿಗೆ ಬುತ್ತಿಯಲ್ಲಿ ಪಾಯಸ ತಂದಿದ್ದರು. ಆದರೆ ಎರಡನೆಯಾಕೆ ಅದನ್ನು ಬುತ್ತಿ ಸಮೇತ ಹೊರಗೆಸೆದಿದ್ದರು. ಈ ಸಂದರ್ಭ ದಲ್ಲಿ ಇಬ್ಬರ ನಡುವೆ ಜಗಳ ನಡೆಯಿತು. ಆಗ ಮೊದಲಾಕೆ, ದಯನೀಯವಾಗಿ ಕಣ್ಣೀರುಗರೆಯುತ್ತಾ, ‘ನಾನು ನಿಮಗೆ ಏನು ಕಡಿಮೆ ಮಾಡಿದ್ದೆ ಎಂದು ಬೇರೆಯವಳ ಸಹವಾಸಕ್ಕೆ ಬಿದ್ದಿದ್ದೀರಿ, ನಿಮಗೊಬ್ಬ ಮಗನಿದ್ದಾನೆ ಎಂಬುದನ್ನೂ ಮರೆತುಬಿಟ್ಟು, ಈಕೆಯೊಂದಿಗೆ ಇಲ್ಲಿದ್ದೀರಲ್ಲಾ’ ಎಂದೆಲ್ಲಾ ಪ್ರಶ್ನಿಸಿದ್ದರು.

ಆದರೆ ಸ್ವಾಮೀಜಿ ಮಾತ್ರ ಅಸಹಾಯಕರಾಗಿ ಮೌನ ವಹಿಸಿದ್ದರು. ಇದಾದ ಮರುದಿನವೇ ಎರಡನೆಯಾಕೆ ಮಠದಲ್ಲಿ ಅಡುಗೆ ನಿಲ್ಲಿಸಿದರು, ತಾನೇ ಕಾರಿನಲ್ಲಿ ಹೊರಗಿನಿಂದ ಆಹಾರ ತರಿಸುತ್ತಿದ್ದರು. ಆದರೆ ಅದು ಸ್ವಾಮೀ ಜಿಯಾಗಿರುವವರು ಸ್ವೀಕರಿಸುವ ಸಾತ್ವಿಕ ಆಹಾರವಾಗಿರಲಿಲ್ಲ.ಅಸಾತ್ವಿಕವಾದ ಪಾನೀಯ ಮತ್ತು ತಾಮಸ ಖಾದ್ಯಗಳನ್ನು ಸೇವಿಸುತ್ತಿದ್ದರು ಎನ್ನುತ್ತಾರೆ ಮಠದ ಸಿಬ್ಬಂದಿ. 

ಎರಡನೆಯಾಕೆ ತರುತ್ತಿದ್ದ ಆಹಾರವೇ ಶ್ರೀಗಳಿಗೆ ಮುಳುವಾಯಿತು, ಮೊದಲೇ ಆರೋಗ್ಯ ಕೆಡಿಸಿಕೊಂಡಿದ್ದ ಸ್ವಾಮೀಜಿ ಅವರಿಗೆ ಈ ಆಹಾರ ಒಗ್ಗುತ್ತಿರಲಿಲ್ಲ. ಎರಡು ವರ್ಷಗಳ ಹಿಂದೆ ತೀರಾ ಹೊಟ್ಟೆನೋವಿನಿಂದ ಉಡುಪಿಯ ಹೈಟೆಕ್ ಆಸ್ಪತ್ರೆಗೆ ದಾಖಲಾಗಿದ್ದ ಸ್ವಾಮೀಜಿ ಅವರಿಗೆ ಅಲ್ಲಿನ ತಜ್ಞ ವೈದ್ಯರು ಲಿವರ್ ಬದಲಾಯಿಸಬೇಕು, ಇಲ್ಲದಿದ್ದಲ್ಲಿ ಬದುಕುವುದಿಲ್ಲ ಎಂದೂ ಎಚ್ಚರಿಸಿದ್ದರು. ಆದರೆ ಅದನ್ನು ಮಾಡಿಸಿಕೊಳ್ಳದ ಶ್ರೀಗಳು ಪದೇ ಪದೇ ಅನಾರೋಗ್ಯಕ್ಕೆ ಈಡಾಗುತ್ತಿದ್ದರು ಎನ್ನುತ್ತಾರೆ ಸಿಬ್ಬಂದಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಿನಲ್ಲಿ ಊಬರ್‌ ಕ್ರಾಂತಿಯ ಹೆಜ್ಜೆ, B2B ಲಾಜಿಸ್ಟಿಕ್ಸ್, ಮೆಟ್ರೋ ಟಿಕೆಟ್‌ ಕೂಡ ಲಭ್ಯ!
ದೆವ್ವಗಳ ಬಗ್ಗೆ ಪಿಎಚ್‌ಡಿ ಮಾಡಲಿದ್ದಾರೆ ಬಾಗೇಶ್ವರ ಬಾಬಾ ಧೀರೇಂದ್ರ ಶಾಸ್ತ್ರಿ! ಘೋಸ್ಟ್ ಬಗ್ಗೆ ತಿಳಿಯಲು ನಿಮಗೆ ಆಸಕ್ತಿ ಇದೆಯೇ?