
ತಿರುವನಂತಪುರ: ಕೇರಳದ ಶಬರಿಮಲೆಯಲ್ಲಿರುವ ಪ್ರಸಿದ್ಧ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೂ ಪ್ರವೇಶಕ್ಕೆ ಅನುಮತಿ ನೀಡಬೇಕೆಂಬ ದಶಕಗಳ ಬೇಡಿಕೆ ಕೊನೆಗೂ ಈಡೇರುವ ಸಾಧ್ಯತೆ ಗೋಚರಿಸಿದೆ. ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡುವ ಬಗ್ಗೆ ಸ್ವತಃ ದೇಗುಲದ ಆಡಳಿತ ಮಂಡಳಿಯೇ ನಿರ್ಧರಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಇಂಥದ್ದೊಂದು ಆಶಾವಾದ ವ್ಯಕ್ತವಾಗಿದೆ.
ಇತ್ತೀಚೆಗಷ್ಟೇ ಕೇರಳ ಸರ್ಕಾರವು ತನ್ನ ಹಿಂದಿನ ನಿಲುವು ಬದಲಿಸಿ, ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಎಲ್ಲ ವಯೋಮಾನದ ಮಹಿಳೆಯರು ಪ್ರವೇಶಿಸಲು ತನ್ನ ತಕರಾರಿಲ್ಲ ಎಂದು ಹೇಳಿಕೆ ನೀಡಿತ್ತು. ಅದರ ಬೆನ್ನಲ್ಲೇ, ಕೇರಳ ದೇಗುಲಗಳ ಮೇಲುಸ್ತುವಾರಿ ಹೊತ್ತಿರುವ ತಿರುವಾಂಕೂರು ದೇವಸ್ವಂ ಸಮಿತಿ ಕೂಡ ಇದೇ ನಿಲುವನ್ನು ಸುಪ್ರೀಂ ಕೋರ್ಟ್‌ನಲ್ಲಿ ಅನುಮೋದಿಸುವ ನಿರೀಕ್ಷೆಯಿದೆ.
ಹೊಸ ಪ್ರಮಾಣಪತ್ರ ಸಲ್ಲಿಸುವ ಉದ್ದೇಶದಿಂದ, ಮಂಡಳಿಯು ನ್ಯಾಯಾಲಯದಿಂದ ಅನುಮತಿ ಬೇಡಲಿದೆ. ಶನಿವಾರ ನಡೆದ ಮಂಡಳಿಯ ತುರ್ತು ಸಭೆಯಲ್ಲಿ ಈ ನಿರ್ಧಾರವಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ‘ನಾವು ಶನಿವಾರ ಸಂಜೆ ತುರ್ತು ಸಭೆ ನಡೆಸಿದೆವು. ಹೊಸ ಹೆಚ್ಚುವರಿ ಪ್ರಮಾಣಪತ್ರ ಸಲ್ಲಿಸಬೇಕಾಗಿರುವ ಕಾರಣ ಸುಪ್ರೀಂ ಕೋರ್ಟ್ ಅನುಮತಿ ಪಡೆಯಲಿದ್ದೇವೆ.
ಬಳಿಕ ಮಂಗಳವಾರ ಅದನ್ನು ಸಲ್ಲಿಸಲಿದ್ದೇವೆ’ ಎಂದು ಅಧಿಕಾರಿಯೊಬ್ಬರು ಹೇಳಿದರು. ಆದರೆ ಪ್ರಮಾಣ ಪತ್ರದಲ್ಲಿ ಏನಿರಲಿದೆ ಎಂದು ಅವರು ತಿಳಿಸಲಿಲ್ಲ. ಆದಾಗ್ಯೂ ಕೇರಳ ಸರ್ಕಾರದ ನಿಲುವನ್ನೇ ಪುನರುಚ್ಚರಿ ಸುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ. ರಜಸ್ವಲೆಯಾದ ಮಹಿಳೆ ಯರನ್ನು (10ರಿಂದ 50 ವರ್ಷ) ದೇಗುಲಕ್ಕೆ ಭೇಟಿ ನೀಡಲು ಶಬರಿಮಲೆಯಲ್ಲಿ ನಿರ್ಬಂಧಿಸಲಾಗಿದ್ದು, ಈ ಸಂಬಂಧ ಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.