ಶಿರೂರು ಶ್ರೀ 3 ಕೆ.ಜಿ ಚಿನ್ನ ಎಲ್ಲಿ ಹೋಯ್ತು..?

By Web DeskFirst Published Jul 25, 2018, 8:09 AM IST
Highlights

ಶಿರೂರು ಸ್ವಾಮೀಜಿ ಅವರ ಬಳಿಕ ಇದ್ದ ಸುಮಾರು  3 ಕೆಜಿಯಷ್ಟು ಚಿನ್ನಾ ಭರಣ ನಾಪತ್ತೆಯಾಗಿದೆ. ಅವರ ನಿಧನ ನಂತರ ಆಭರಣಗಳು ನಾಪತ್ತೆಯಾಗಿದ್ದು, ಇದು ಸಾಕಷ್ಟು ಅನುಮಾನಗಳೀಗೆ ಎಡೆ ಮಾಡಿಕೊಟ್ಟಿದೆ. 

ಉಡುಪಿ :  ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರಿಗೆ ಕೊನೇ ದಿನಗಳಲ್ಲಿ ಮೈತುಂಬಾ ಕೆಜಿಗಟ್ಟಲೆ ಚಿನ್ನಾಭರಣಗಳನ್ನು ಧರಿಸುವ ಖಯಾಲಿ ಆರಂಭವಾಗಿತ್ತು. ಆದರೆ ಅವರ ನಿಧನ ನಂತರ ಈ ಚಿನ್ನಾಭರಣಗಳು ನಾಪತ್ತೆಯಾಗಿವೆ ಎಂಬ ಅಂಶ ಅನೇಕ ಸಂಶಯ ಹುಟ್ಟು ಹಾಕಿವೆ. ಉಡುಪಿಯ ಇತರ ಮಠಗಳ ಸ್ವಾಮೀಜಿಗಳಿಗೆ ಚಿನ್ನಾಭರಣಗಳ ಆಸೆ ಇಲ್ಲ. ಶಿರೂರು ಸ್ವಾಮೀಜಿ ಅವರೂ ಆರಂಭದಿಂದಲೂ  ಚಿನ್ನಾಭರಣಗಳನ್ನು ಧರಿಸುತ್ತಿರಲಿ ಲ್ಲ. ಉಳಿದ ಸ್ವಾಮೀಜಿಗಳು ಬೆಳ್ಳಿ ಯಲ್ಲಿ ಪೋಣಿಸಿದ ತುಳಸಿ ಮಾಲೆ ಧರಿಸುತ್ತಿದ್ದರೆ, ಶಿರೂರು ಸ್ವಾಮೀಜಿ ಚಿನ್ನದಲ್ಲಿ ಪೋಣಿಸಿದ ತುಳಸಿ ಮಾಲೆ ಧರಿಸುತ್ತಿದ್ದರು. 

ಆದರೆ ಯಾವಾಗ ಅವರ ಜೀವನದಲ್ಲಿ ತೀರಾ ಮಾಡರ್ನ್ ಮಹಿಳೆಯೊಬ್ಬಳ ಪ್ರವೇಶ ವಾಯಿತೋ, ಅಲ್ಲಿಂದ ಸ್ವಾಮೀಜಿ ಅವರಿಗೆ ಈ ಚಿನ್ನಾಭರಣ ವ್ಯಾಮೋಹ ಹೆಚ್ಚಿತು.  ಮಠದಲ್ಲಿ ನಡೆಯುವ ಪೂಜೆ, ಉತ್ಸವಗಳ ಸಂದರ್ಭದಲ್ಲಿ ಅವುಗಳನ್ನು ಧರಿಸಿ ಓಡಾಡುವುದು ಅವರಿಗೆ ಬಹಳ ಖುಷಿ ಕೊಡುತ್ತಿತ್ತು ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲ ಭಕ್ತರೊಬ್ಬರು.

ಕೆಲ ತಿಂಗಳ ಹಿಂದೆ ಸ್ವತಃ ಸ್ವಾಮೀಜಿ ಅವರೇ ತನ್ನ ಬಳಿ 3 ಕೆ.ಜಿ.ಯಷ್ಟು ಚಿನ್ನಾಭರಣಗಳಿವೆ ಎಂದು ಸುದ್ದಿಗಾರರಿಗೆ ಹೇಳಿದ್ದರು. 3 ಕೆ.ಜಿ. ಚಿನ್ನಾಭರಣಗಳ ಬೆಲೆ ಇಂದಿನ ಮಾರುಕಟ್ಟೆಯಲ್ಲಿ ಸರಿಸುಮಾರು 75  ಲಕ್ಷ ರುಪಾಯಿಗಳಿಗೂ ಅಧಿಕವಾಗುತ್ತದೆ. ಚಿನ್ನಾಭರಣಗಳ ತಜ್ಞರೊಬ್ಬರ ಪ್ರಕಾರ, ಸ್ವಾಮೀಜಿ ಅವರ ಕುತ್ತಿಗೆ ಮತ್ತು ಕೈಗಳಲ್ಲಿ ಸರಾಸರಿ ಅರ್ಧ ಕೆ.ಜಿ.ಯಿಂದ 1 ಕೆ.ಜಿ.ಯಷ್ಟು ಚಿನ್ನಾಭರಣಗಳನ್ನು ಧರಿಸುತ್ತಿದ್ದರು. ಅಂದರೆ ಪ್ರತಿದಿನ ಅವರು 10 ರಿಂದ 20  ಲಕ್ಷ ರುಪಾಯಿಗಳಷ್ಟು ಬೆಲೆಯ ಚಿನ್ನಾಭರಣಗಳನ್ನು ಧರಿಸುತ್ತಿದ್ದರು. ಈ ಚಿನ್ನಾಭರಣಗಳು ಸಾಮಾನ್ಯ ಆಭರಣಗಳಲ್ಲ, ಅವು ಪುರಾತನ (ಆ್ಯಂಟಿಕ್) ಆಭರಣಗಳು, ಆದ್ದರಿಂದ ಅವುಗಳಿಗೆ ಮಾರುಕಟ್ಟೆ ಬೆಲೆಗಿಂತಲೂ ಹೆಚ್ಚು, ಕೋಟ್ಯಂತರ ರು. ಬೆಲೆ ಇದೆ ಎನ್ನಲಾಗುತ್ತಿದೆ. 

ಸ್ವಾಮೀಜಿಯವರು ಮಣಿಪಾಲದ ಆಸ್ಪತ್ರೆಗೆ ಸೇರುವಾಗ ಮೈಮೇಲೆ ಚಿನ್ನಾಭರಣಗಳಿರಲಿಲ್ಲ, ಎಲ್ಲವನ್ನೂ ಮೂಲಮಠದಲ್ಲಿ ತೆಗೆದು ಇಟ್ಟು ಹೋಗಿದ್ದರು. ಆದರೆ ಅವುಗಳು ಈಗ ಏನಾಗಿದೆ, ಯಾರ ಕೈಯಲ್ಲಿದೆ ಎಂಬುದು ನಿಗೂಢವಾಗಿದೆ. ಜೊತೆಗೆ ಸಂಶಯಕ್ಕೂ ಕಾರಣವಾಗಿದೆ.  ಪೊಲೀಸರು, ತಾವು ಮಠವನ್ನು ಸುಪರ್ದಿಗೆ ತೆಗೆದುಕೊಂಡಿದ್ದು, ಮಠದ ಯಾವುದೇ ವಸ್ತು ಕಳ್ಳತನವಾಗದಂತೆ ರಕ್ಷಿಸುತ್ತಿದ್ದೇವೆ ಎನ್ನುತ್ತಾರೆ. ಶಾಸ್ತ್ರದ ಪ್ರಕಾರ ಪ್ರಸ್ತುತ ಮಠದ ಉಸ್ತುವಾರಿಯ ಹಕ್ಕನ್ನು ಹೊಂದಿರುವ ಸೋದೆ ಮಠದ ಅಧಿಕಾರಿ ವರ್ಗಕ್ಕೂ ಶಿರೂರು ಶ್ರೀಗಳ ಚಿನ್ನಾಭರಣಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. 

click me!