
ನವದೆಹಲಿ: ಲಂಚ ಪಡೆಯುವವರ ಜೊತೆಗೆ, ಲಂಚ ನೀಡುವ ವರಿಗೂ 7 ವರ್ಷಗಳವರೆಗೆ ಶಿಕ್ಷೆ ವಿಧಿಸುವ ಕಾನೂನು ತಿದ್ದುಪಡಿ ಮಸೂದೆಗೆ ಸಂಸತ್ ತನ್ನ ಅನುಮೋದನೆ ನೀಡಿದೆ. ಹೀಗಾಗಿ ಇನ್ನು ಮುಂದೆ ಲಂಚ ಪಡೆಯುವವರ ಜೊತೆಗೆ ಲಂಚ ನೀಡುವವರು ಕೂಡಾ ಎಚ್ಚೆತ್ತು ಕೊಳ್ಳುವುದು ಅನಿವಾರ್ಯವಾಗಲಿದೆ.
ಜುಲೈ 19 ರಂದು ಲೋಕಸಭೆಯಲ್ಲಿ ಅನುಮೋದನೆ ಪಡೆದುಕೊಂಡಿದ್ದ ಭ್ರಷ್ಟಾಚಾರ ತಡೆ ತಿದ್ದುಪಡಿ ಮಸೂದೆಗೆ, ಮಂಗಳವಾರ ಲೋಕಸಭೆ ಕೂಡಾ ಅನುಮೋದನೆ ನೀಡಿದೆ. ಹೀಗಾಗಿ ಇನ್ನು ರಾಷ್ಟ್ರಪತಿಗಳ ಸಹಿ ಬಿದ್ದ ಕೂಡಲೇ ಮಸೂದೆ ಕಾಯ್ದೆಯ ಸ್ವರೂಪ ಪಡೆದುಕೊಳ್ಳಲಿದೆ. ಇದುವರೆಗಿನ ಕಾನೂನಿನ ಅನ್ವಯ ಕೇವಲ ಲಂಚ ನೀಡುವುದು ಮಾತ್ರ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾ ಗುತ್ತಿತ್ತು. ಇದೀಗ ತಿದ್ದುಪಡಿಗೊಂಡ ಕಾನೂನಿನ ಪ್ರಕಾರ ಲಂಚ ಕೊಡುವುದು ಕೂಡಾ, ಸ್ವೀಕಾರದಷ್ಟೇ ಕ್ರಿಮಿನಲ್ ಅಪರಾಧ ಎನ್ನಿಸಿಕೊಳ್ಳಲಿದೆ.
ಹಲವು ಹೊಸ ಅಂಶ: ಹೊಸ ಕಾನೂನಿನ ಅನ್ವಯ ಯಾವುದೇ ಭ್ರಷ್ಟಾಚಾರ ಪ್ರಕರಣಗಳನ್ನು 2 ವರ್ಷದೊಳಗೆ ಇತ್ಯರ್ಥಪಡಿಸ ಬೇಕೆಂಬ ನಿಯಮ ರೂಪಿಸಲಾಗಿದೆ. ಜೊತೆಗೆ ಹೊಸ ಕಾನೂನಿನ ಅನ್ವಯ ಇನ್ನು ಮುಂದೆ ಯಾವುದೇ ಸರ್ಕಾರಿ ಅಧಿಕಾರಿಗಳ ವಿಚಾರಣೆ ಮುನ್ನ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಮಾಡಲಾಗಿದೆ.
ಈ ಹಿಂದೆ ಈ ನಿಯಮ ಜಂಟಿ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿತ್ತು. ಜೊತೆಗೆ ಲಂಚ ಸ್ವೀಕರಿಸಿದರೆ ಇದುವರೆಗೆ ವಿಧಿಸಬಹುದಾಗಿದ್ದ ಕನಿಷ್ಠ ಶಿಕ್ಷೆಯ ಅವಧಿಯನ್ನು 3ರಿಂದ 7 ವರ್ಷಗಳಿಗೆ ಹೆಚ್ಚಿಸಲಾಗಿದೆ. ಅಲ್ಲದೆ ಕರ್ತವ್ಯದ ಸಮಯದಲ್ಲಿ ಕೈಗೊಂಡ ಯಾವುದೇ ಉತ್ತಮ ನಿರ್ಧಾರಗಳ ಬಗ್ಗೆ, ಅಂಥ ಅಧಿಕಾರಿಯನ್ನು ನಿವೃತ್ತಿ ಬಳಿಕ ವಿಚಾರಣೆಗೆ ಗುರಿಪಡಿಸುವ ಮುನ್ನ ಪೂರ್ವಾನುಮತಿ ಕಡ್ಡಾಯ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.