
ಬೆಂಗಳೂರು(ಆ.24): ಕಳೆದ ವರ್ಷ ರಾಷ್ಟ್ರ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣವು ಬುಧವಾರ ಮಹತ್ವದ ತಿರುವು ಪಡೆದುಕೊಂಡಿದ್ದು, ಮೃತ ಅಧಿಕಾರಿಗೆ ಸಂಬಂಧಿಸಿದ ಅಪಾರ ಪ್ರಮಾಣದ ದಾಖಲೆಗಳು ಹಾಗೂ ಸಂಪರ್ಕದಲ್ಲಿದ್ದ ಗಣ್ಯರ ಮೊಬೈಲ್‌ಗಳ ಕರೆಗಳ ವಿವರವನ್ನು ನಾಶ ಮಾಡಲಾಗಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಈ ಪ್ರಕರಣದ ಕುರಿತು ಸಿಐಡಿಗೆ ವಿಧಿ ವಿಜ್ಞಾನ ಪ್ರಯೋಗಾಲಯ (ಎ್‌ಎಸ್‌ಎಲ್) ಸಲ್ಲಿಸಿದ್ದ ವರದಿಯಲ್ಲಿ ಸಾಕ್ಷ್ಯ ನಾಶ ಕುರಿತು ಉಲ್ಲೇಖವಾಗಿದೆ ಎಂದು ರಾಷ್ಟ್ರೀಯ ಆಂಗ್ಲ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ತನ್ಮೂಲಕ ವರ್ಷದ ಬಳಿಕ ಮತ್ತೆ ಗಣಪತಿ ಸಾವಿನ ಪ್ರಕರಣವು ವಿವಾದ ಸ್ವರೂಪ ಪಡೆದುಕೊಂಡಿದೆ.
ಗಣಪತಿ ಅವರ ಕಂಪ್ಯೂಟರ್‌ನಲ್ಲಿದ್ದ 650ಕ್ಕೂ ಹೆಚ್ಚು ಕಡತಗಳು ಹಾಗೂ ಮೊಬೈಲ್‌ನಲ್ಲಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಪುತ್ರ ಕಾರ್ತಿಕ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ರೂಪಕ್ ಕುಮಾರ್ ದತ್ತಾ ಪುತ್ರ ಅಭಿಜಯ್, ಶಾಸಕ ಮುನಿರತ್ನ, ಅಂದಿನ ರಾಜ್ಯ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಸೇರಿ ಹಲವರ ಕರೆಗಳನ್ನು ಅಳಿಸಿ ಹಾಕಲಾಗಿದೆ ಎಂದು ದೂರಲಾಗಿದೆ.
ಏನೇನು ನಾಶವಾಗಿದೆ?:
ಗಣಪತಿ ಅವರಿಗೆ ಸೇರಿದ 16 ಜಿಬಿ ಪೆನ್'ಡ್ರೈವ್‌ನಲ್ಲಿ 116 ಫೈಲ್‌ಗಳು, 8 ಜಿಬಿ ಪೆನ್ ಡ್ರೈವ್‌ನಲ್ಲಿ 145 ಪಿಡಿಎಫ್ ಫೈಲ್ ಹಾಗೂ ಕಂಪ್ಯೂಟರ್‌ನಲ್ಲಿದ್ದ 910 ಎಂಎಕ್ಸ್ ಫೈಲ್ ಮತ್ತು 791 ಪಿಡಿಎಫ್ ಫೈಲ್ ನಾಶಪಡಿಸಲಾಗಿದೆ. ಅಲ್ಲದೆ 100 ಇ-ಮೇಲ್‌ಗಳು ಹಾಗೂ 2500ಕ್ಕೂ ಅಧಿಕ ಮೆಸೇಜ್ ಗಳನ್ನು ಸಹ ಅಳಿಸಿ ಹಾಕಲಾಗಿದೆ ಎನ್ನಲಾಗಿದೆ.
ಗಣಪತಿ ಮೊಬೈಲ್‌ಗೆ ಸಾವಿಗೂ ಮುನ್ನ ಹಲವು ಮಂದಿ ಕರೆ ಮಾಡಿದ್ದರು. ಇದರಲ್ಲಿ ಕಾರ್ತಿಕ್, ವಿನಯ್ ಕುಮಾರ್ ಸೊರಕೆ, ಅಭಿಜಯ್, ಮುನಿರತ್ನ, ಎಸಿಪಿ ಜಯರಾಮ್, ರಾಮನಗರದ ಡಿವೈಎಸ್ಪಿ ಎಂ.ಕೆ. ತಮ್ಮಯ್ಯ, ಎಸಿಬಿ ಪೊಲೀಸ್ ರಂಗ ಸ್ವಾಮಿ, ಹಿರಿಯ ಅಧಿಕಾರಿ ಪಿಎ ರಘು ಹಾಗೂ ರಾಜ ಸ್ಥಾನದ ಅಪರಿಚಿತ ವ್ಯಕ್ತಿಯಿಂದ ಕರೆಗಳು ಬಂದಿವೆ. ಈ ಕರೆಗಳ ವಿವರವನ್ನು ನಾಶ ಮಾಡಲಾಗಿದೆ ಎಂದು ಎಫ್ಎಸ್‌ಎಲ್ ವರದಿ ಹೇಳಿದೆ ಎನ್ನಲಾಗಿದೆ.
ಗಣಪತಿ ಅವರಿಂದ ವಶಪಡಿಸಿಕೊಳ್ಳಲಾದ ಸರ್ವಿಸ್ ರಿವಾಲ್ವರ್, ಕ್ಯಾಟ್ರಿಜ್ ಗಳು, ಪೆನ್‌ಡ್ರೈವ್, ಕಂಪ್ಯೂಟರ್ ಹಾಗೂ ಮೊಬೈಲ್ ಗಳನ್ನು ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಕ್ಕೆ ಸಿಐಡಿ ತನಿಖಾ ತಂಡವು ಕಳುಹಿಸಿತ್ತು. ಪರಿಶೀಲನೆ ನಡೆಸಿದ ಎ್‌ಎಸ್‌ಎಲ್ ತಜ್ಞರು, ಮೃತ ಅಧಿಕಾರಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಸಿಡಿಆರ್ (ಕರೆಗಳ ವಿವರ) ನಾಶವಾಗಿದೆ ಎಂದು ವರದಿ ಸಲ್ಲಿಸಿದ್ದರು ಎಂಬುದಾಗಿ ಸುದ್ದಿವಾಹಿನಿ ವರದಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.