ಇನ್ಸ್‌ಪೆಕ್ಟರ್‌ಗೆ ಕಪಾಳಮೋಕ್ಷ: ಇಬ್ಬರು ಟೆಕ್ಕಿಗಳ ಬಂಧನ

By Suvarna Web DeskFirst Published Apr 10, 2017, 5:38 AM IST
Highlights

ಶನಿವಾರ ರಾತ್ರಿ ಇನ್‌ಸ್ಪೆಕ್ಟರ್‌ ಮಹಮದ್‌ ಹಾಗೂ ಸಿಬ್ಬಂದಿ ದೊಡ್ಡನೆಕ್ಕುಂದಿ ಮುಖ್ಯರಸ್ತೆಯಲ್ಲಿ ಪಾನಮತ್ತ ಚಾಲಕರ ತಪಾಸಣೆ ನಡೆಸುತ್ತಿದ್ದರು. ಆಲ್ಕೋಮೀಟರ್‌ನಿಂದ ತಪಾಸಣೆ ಮಾಡಿದಾಗ ಆರೋಪಿ ಮದ್ಯ ಸೇವಿಸಿರುವುದು ತಿಳಿದಿದೆ. ಬೈಕ್‌ ಜಪ್ತಿ ಮಾಡಿದ ಮಹಮದ್‌ ವಾಹನದ ದಾಖಲೆ ನೀಡಿ ತೆಗೆದುಕೊಂಡು ಹೋಗುವಂತೆ ಹೇಳಿದ್ದಾರೆ. ಕುಪಿತಗೊಂಡ ಪ್ರಿಯಾಂಶು ಇನ್‌ಸ್ಪೆಕ್ಟರ್‌ ಕೆನ್ನೆಗೆ ಹೊಡೆದಿದ್ದಾನೆ

ಬೆಂಗಳೂರು: ವಾಹನ ತಪಾಸಣೆ ವೇಳೆ ಎಚ್‌ಎಎಲ್‌ ಸಂಚಾರ ಠಾಣೆಯ ಇನ್ಸ್‌ಪೆಕ್ಟರ್‌ ಎಂ.ಎ. ಮಹಮದ್‌ ಅವರ ಕೆನ್ನೆಗೆ ಹೊಡೆದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಇಬ್ಬರು ಟೆಕ್ಕಿಗಳನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ಪ್ರಿಯಾಂಶು ಕುಮಾರ್‌(29) ಹಾಗೂ ಅಲೋಕ್‌(30) ಬಂಧಿತರು. ದೊಡ್ಡನೆಕ್ಕುಂದಿಯಲ್ಲಿ ನೆಲೆಸಿದ್ದ ಆರೋಪಿಗಳು, ಸಿ.ವಿ.ರಾಮನ್‌ನಗರದ ಸಾಫ್ಟ್‌ವೇರ್‌ ಕಂಪನಿಯ ಉದ್ಯೋಗಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ರಾತ್ರಿ ಮಹಮದ್‌ ಹಾಗೂ ಸಿಬ್ಬಂದಿ ದೊಡ್ಡನೆಕ್ಕುಂದಿ ಮುಖ್ಯರಸ್ತೆಯಲ್ಲಿ ಪಾನಮತ್ತ ಚಾಲಕರ ತಪಾಸಣೆ ನಡೆಸುತ್ತಿದ್ದರು. ಸಮೀಪದ ಜಂಕ್ಷನ್‌ನಲ್ಲಿ ಯಾರೋ ಅಪರಿಚಿತರು ಮಾರಕಾಸ್ತ್ರ ಹಿಡಿದು ಓಡಾಡುತ್ತಿರುವ ಬಗ್ಗೆ ತಡರಾತ್ರಿ 2.45ಕ್ಕೆ ಕಂಟ್ರೋಲ್‌ ರೂಮ್‌ಗೆ ಮಾಹಿತಿ ಬಂದಿದೆ. ಕಂಟ್ರೋಲ್‌ ರೂಮ್‌ನಿಂದ ಪೊಲೀಸರಿಗೆ ಮಾಹಿತಿ ರವಾನೆಯಾಗಿದೆ.

ಕೂಡಲೇ ಮಹದೇವಪುರ ಠಾಣೆ ಇನ್ಸ್‌ಪೆಕ್ಟರ್‌ ಸ್ಥಳಕ್ಕೆ ತೆರಳಿದ್ದಾರೆ. ಸಮೀಪದಲ್ಲೇ ನಿರ್ವಹಿಸುತ್ತಿದ್ದ ಮಹಮದ್‌ ಕೂಡ ಹೋಗಿದ್ದಾರೆ. ಆದರೆ, ಅಲ್ಲಿ ಕಿಡಿಗೇಡಿಗಳು ಇರಲಿಲ್ಲ. ಇನ್ನೇನು ಅಲ್ಲಿಂದ ತೆರಳಬೇಕು ಎನ್ನುವಷ್ಟರಲ್ಲಿ ಮಹಮದ್‌ ಅವರ ಬಳಿಗೆ ಓಡಿ ಬಂದ ವ್ಯಕ್ತಿಯೊಬ್ಬ ಯಾರೋ ಇಬ್ಬರು ಯುವಕರು ನನ್ನಿಂದ ದ್ವಿಚಕ್ರ ವಾಹನ ಕಿತ್ತುಕೊಂಡು ಪರಾರಿಯಾದರು ಎಂದು ಹೇಳಿದ್ದಾನೆ. ಬೈಕ್‌ ನೋಂದಣಿ ಸಂಖ್ಯೆ ಪಡೆದ ಇನ್ಸ್‌ಪೆಕ್ಟರ್‌, ವಾಕಿಟಾಕಿ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದ ಎಲ್ಲಾ ಸಿಬ್ಬಂದಿಗೂ ವಿಷಯ ತಿಳಿಸಿ ತಾವೂ ತಪಾಸಣೆಗೆ ಇಳಿದಿದ್ದಾರೆ. ಇದೇ ಮಾರ್ಗವಾಗಿ ಅಲೋಕ್‌ ಬೈಕ್‌ ಓಡಿಸಿಕೊಂಡು ಬಂದಿದ್ದು, ತಡೆದಾಗ ಪರಾರಿಯಾಗಲು ಯತ್ನಿಸಿದ ಆತನನ್ನು ಸಿಬ್ಬಂದಿ ಬೆನ್ನಟ್ಟಿಹಿಡಿದು ಬೈಕ್‌ನ ದಾಖಲೆ ಕೇಳಿದ್ದಾರೆ.

ಯಾವಾಗಲೂ ಬೈಕ್‌ನಲ್ಲಿ ದಾಖಲೆ ಇಟ್ಟುಕೊಂಡೇ ಓಡಾಡಬೇಕೆ? ಎಂದು ಅಲೋಕ್‌ ಕೂಗಾಡಿದ್ದಾನೆ. ಆಲ್ಕೋಮೀಟರ್‌ನಿಂದ ತಪಾಸಣೆ ಮಾಡಿದಾಗ ಆರೋಪಿ ಮದ್ಯ ಸೇವಿಸಿರುವುದು ತಿಳಿದಿದೆ. ಬೈಕ್‌ ಜಪ್ತಿ ಮಾಡಿದ ಮಹಮದ್‌ ವಾಹನದ ದಾಖಲೆ ನೀಡಿ ತೆಗೆದುಕೊಂಡು ಹೋಗುವಂತೆ ಹೇಳಿದ್ದಾರೆ.

ಆಗ ಕೆರಳಿದ ಅಲೋಕ್‌, ಸ್ನೇಹಿತ ಪ್ರಿಯಾಂಶುಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಪ್ರಿಯಾಂಶು ಪೊಲೀಸರ ಜತೆ ಗಲಾಟೆ ನಡೆಸಿ ‘ನಾನು ಬಿಹಾರದ ಗೆಜೆಟೆಡ್‌ ಅಧಿಕಾರಿ ಮಗ. ಅಲೋಕನ ತಂದೆ ಕೂಡ ಅಲ್ಲಿ ಪೊಲೀಸ್‌ ಅಧಿಕಾರಿ. ನಮ್ಮ ವಿರುದ್ಧವೇ ಪ್ರಕರಣ ದಾಖಲಿಸುತ್ತೀರಾ?' ಎಂದಿದ್ದಾರೆ. ಆಗ ಇನ್‌ಸ್ಪೆಕ್ಟರ್‌ ಮೊಹಮದ್‌, ಯಾರೇ ಆದರೂ ದಾಖಲೆ ತೋರಿಸಿದೆ ಬೈಕ್‌ ಬಿಡುವುದಿಲ್ಲ ಸೂಚಿಸಿದ್ದಾರೆ. ಕುಪಿತಗೊಂಡ ಪ್ರಿಯಾಂಶು ಇನ್‌ಸ್ಪೆಕ್ಟರ್‌ ಕೆನ್ನೆಗೆ ಹೊಡೆದಿದ್ದಾನೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

click me!