
ದುಬೈ(ಡಿ.07): ಜೀವನದಲ್ಲೊಂದು ವಜ್ರದುಂಗುರ ಕೊಂಡರೆ ಸಾಕು ಅಂತಾ ಜೀವಮಾನವೀಡಿ ದುಡಿಯುವ ನಾವೆಲ್ಲಿ?, ಸಹಸ್ರಾರು ವಜ್ರ ಖಚಿತ ಐಷಾರಾಮಿ ವಿಮಾನವನ್ನೇ ನಿರ್ಮಿಸುವ ಎಮಿರೇಟ್ಸ್ ಏರ್‌ಲೈನ್ಸ್ ಎಲ್ಲಿ?.
ದುಬೈ ಮೂಲದ ಐಷಾರಾಮಿ ವಿಮಾನಯಾನ ಸಂಸ್ಥೆ ಎಮಿರೇಟ್ಸ್ ಏರ್‌ಲೈನ್ಸ್ ಸಂಪೂರ್ಣ ವಜ್ರ ಖಚಿತ ವಿಮಾನವೊಂದನ್ನು ನಿರ್ಮಿಸಿದೆ. ಸಹಸ್ರಾರು ವಜ್ರಗಳಿಂದ ಸಿಂಗರಿಸಿದ ಈ ವಿಮಾನದ ಕಣ ಕಣವೂ ವಜ್ರದಿಂದ ಕೂಡಿದೆ.
ವಜ್ರ ಖಚಿತ ವಿಮಾನದ ಫೋಟೋವನ್ನು ಎಮಿರೇಟ್ಸ್ ವಿಮಾನಯಾನ ಸಂಸ್ಥೆ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದೇ ತಡ, ಇಡೀ ಸಾಮಾಜಿಕ ಜಾಲತಾಣ ಲೋಕವೇ ಶೇಕ್ ಆಗಿ ಹೋಗಿದೆ.
ಹೌದು, ಸಂಪೂರ್ಣ ವಜ್ರ ಖಚಿತ ವಿಮಾನದ ಫೋಟೋ ಶೇರ್ ಮಾಡಿರುವ ಎಮಿರೇಟ್ಸ್ ಏರ್‌ಲೈನ್ಸ್, ಇಂದು ಅಕ್ಷರಶಃ ಸಾಮಾಜಿಕ ಜಾಲತಾಣ ಲೋಕವನ್ನು ಅಚ್ಚರಿಗೆ ದೂಡಿತ್ತು.
ಈ ವಿಮಾನದ ಫೋಟೋ ಕಂಡು ಕೆಲವರು ರಿಟ್ವೀಟ್ ಮಾಡಿ ಇದು ನಿಜ ಏನ್ರಪ್ಪಾ ಅಂತಾ ಸಂಸ್ಥೆಯನ್ನು ಕೇಳಿದ್ದಾರೆ. ಇದಕ್ಕೆ ಸಂಸ್ಥೆ ಕೊಟ್ಟ ಉತ್ತರಕ್ಕೆ ಕೆಲವರು ನಿಟ್ಟುಸಿರು ಬಿಟ್ಟರೆ, ಇನ್ನೂ ಕೆಲವರು ಅಷ್ಟೇನಾ ಅಂತಾ ಉದ್ಘಾರ ತೆಗೆದಿದ್ದಾರೆ.
ಅಸಲಿಗೆ ಇದು ಎಮಿರೇಟ್ಸ್ ಸಂಸ್ಥೆಯ ನಿಜವಾದ ವಿಮಾನವಲ್ಲ. ಬದಲಿಗೆ ಸಾರಾ ಶಕೀಲ ಎಂಬ ಕ್ರಿಸ್ಟಲ್ ಕಲಾವಿದೆ ಬಿಡಿಸಿರುವ ಚಿತ್ರ ಇದಾಗಿದೆ. ಸಾರಾ ಇಂತದ್ದೊಂದು ಫೋಟೋ ಬಿಡಿಸಿ ತಮ್ಮ ಇನ್ಸಟಾಗ್ರಾಂ ಪೇಜ್‌ನಲ್ಲಿ ಶೇರ್ ಮಾಡಿದ್ದರು.
ಸಾರಾ ಫೋಟೋವನ್ನು ಬಹುವಾಗಿ ಮೆಚ್ಚಿಕೊಂಡ ಎಮಿರೇಟ್ಸ್ ವಿಮಾನಯಾನ ಸಂಸ್ಥೆ, ಈ ಫೋಟೋವನ್ನು ಆಕೆಯ ಅನುಮತಿ ಪಡೆದು ತನ್ನ ಅಧಿಕೃತ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿ ಡೈಮಂಡ್ ವಿಮಾನ ಎಂದು ಹೆಸರಿಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.