ಶಬರಿಮಲೆಯಿಂದ ವಾಪಸಾದ ತೃಪ್ತಿ ದೇಸಾಯಿ : ಮುಂದಿನ ಪ್ಲಾನ್ ಏನು..?

By Web DeskFirst Published Nov 17, 2018, 7:06 AM IST
Highlights

ಶಬರಿಮಲೆಯಲ್ಲಿ ದರ್ಶನದ ನಿಮಿತ್ರ ಶುಕ್ರವಾರ ದೇಗುಲದ ಬಾಗಿಲು ತೆರೆಯಲಾಗಿದ್ದು ದೇಗುಲ ಪ್ರವೇಶಿಸಿಯೇ ತೀರುತ್ತೇನೆ ಎಂದು ಹೊರಟಿದ್ದ ತೃಪ್ತಿ ದೇಸಾಯಿ ಅಲ್ಲಿಂದ ಮರಳಿದ್ದಾರೆ. 

ಶಬರಿಮಲೆ/ಕೊಚ್ಚಿ: ಋುತುಮತಿ ಮಹಿಳೆಯರಿಗೂ ಪ್ರವೇಶ ಕಲ್ಪಿಸುವ ಸಂಬಂಧ ಸಂಘರ್ಷದ ವಾತಾವರಣ ಸೃಷ್ಟಿಯಾಗಿರುವಾಗಲೇ, ಎರಡು ತಿಂಗಳ ಯಾತ್ರೆಗಾಗಿ ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲನ್ನು ಶುಕ್ರವಾರ ಸಂಜೆ 5 ಗಂಟೆಗೆ ತೆರೆಯಲಾಗಿದೆ. ಈ ವೇಳೆ ಹೈಡ್ರಾಮಾ ಕೂಡ ನಡೆದಿದೆ.

ಯಾವುದೇ ವಯೋಮಾನದ ಮಹಿಳೆಯರು ದೇಗುಲ ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್‌ ಸೆ.28ರಂದು ತೀರ್ಪು ನೀಡಿದ ತರುವಾಯ ದೇಗುಲ ಬಾಗಿಲು ತೆರೆಯುತ್ತಿರುವುದು ಇದು ಮೂರನೇ ಬಾರಿ. ಈ ಸಲವಾದರೂ ಅಯ್ಯಪ್ಪ ದರ್ಶನ ಪಡೆಯಲೇಬೇಕು ಎಂದು ಹಟ ತೊಟ್ಟಿದ್ದ ಮಹಿಳೆಯರ ಪ್ರಯತ್ನ ಮೊದಲ ದಿನವೇ ವಿಫಲವಾಗಿದೆ. ಪುಣೆಯಿಂದ ಬಂದಿದ್ದ ಮಹಿಳಾ ಹೋರಾಟಗಾರ್ತಿ ತೃಪ್ತಿ ದೇಸಾಯಿ, ದಿನವಿಡೀ ಹರಸಾಹಸ ಪಟ್ಟರೂ ವಿಮಾನ ನಿಲ್ದಾಣದಿಂದಲೇ ಹೊರಬರಲಾಗದೇ ಹೈಡ್ರಾಮಾ ಬಳಿಕ ಬರಿಗೈಲಿ ವಾಪಸ್‌ ಮಹಾರಾಷ್ಟ್ರಕ್ಕೆ ಹೋಗಿದ್ದಾರೆ. ಹೀಗಾಗಿ ತಕ್ಷಣಕ್ಕೆ ಅವರ ಹೋರಾಟ ಅಂತ್ಯವಾಗಿದೆ. ಆದರೆ 2 ತಿಂಗಳ ಅವಧಿಯ ಯಾತ್ರೆಯ ಅವಧಿಯಲ್ಲಿ ಮತ್ತೊಮ್ಮೆ ಆಗಮಿಸಿ ದೇವರ ದರ್ಶನ ಪಡೆಯುವುದಾಗಿ ಅವರು ಸವಾಲು ಹಾಕಿರುವ ಕಾರಣ, ಸಂಘರ್ಷದ ಕಿಡಿ ಜೀವಂತವಾಗಿಯೇ ಉಳಿದಂತಾಗಿದೆ.

ಜೊತೆಗೆ ಈಗಾಗಲೇ ಹೆಸರು ನೊಂದಾಯಿಸಿರುವ ಇತರೆ 550ಕ್ಕೂ ಹೆಚ್ಚು ಮಹಿಳೆಯರು, ಶನಿವಾರದಿಂದ ದೇವರ ದರ್ಶನಕ್ಕೆ ಆಗಮಿಸಿದಲ್ಲಿ ಅದು ಮತ್ತೊಂದು ಸಂಘರ್ಷಕ್ಕೆ ಎಡೆಮಾಡುವ ಎಲ್ಲಾ ಸಾಧ್ಯತೆಗಳಿವೆ.

ದರ್ಶನ ಆರಂಭ:  41 ದಿನಗಳ ಮಂಡಲ ಪೂಜೆ ನಿಮಿತ್ತ ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲನ್ನು ಶುಕ್ರವಾರ ಸಂಜೆ ಮುಖ್ಯ ಅರ್ಚಕ ಕಂದರಾರು ರಾಜೀವರು ಅವರ ಸಮಕ್ಷಮದಲ್ಲಿ ತೆರೆಯಲಾಯಿತು. ‘ಸ್ವಾಮಿಯೇ ಅಯ್ಯಪ್ಪ’ ಎಂಬ ಉದ್ಘೋಷಗಳೊಂದಿಗೆ ಅಸಂಖ್ಯಾತ ಭಕ್ತರು ಅಯ್ಯಪ್ಪ ದರ್ಶನ ಪಡೆದು ಪುನೀತರಾದರು. ಮಂಡಲಪೂಜೆ ಡಿ.27ರಂದು ಮುಕ್ತಾಯಗೊಳ್ಳಲಿದೆ. ನಂತರ ದೇಗುಲದ ಬಾಗಿಲು ಮುಚ್ಚಲಾಗುತ್ತದೆ. ಡಿ.30ರಂದು ಮತ್ತೆ ದೇಗುಲದ ಬಾಗಿಲು ತೆರೆಯಲಾಗುತ್ತದೆ. ಜ.14ರಂದು ಮಕರವಿಳಕ್ಕು ದರ್ಶನದ ಬಳಿಕ ಜ.20ರಂದು ಬಾಗಿಲು ಬಂದ್‌ ಮಾಡಲಾಗುತ್ತದೆ. ಅಲ್ಲಿಗೆ ವಾರ್ಷಿಕ ಅಯ್ಯಪ್ಪ ಯಾತ್ರಾ ಸೀಸನ್‌ ಮುಗಿಯಲಿದ್ದು, ಅಷ್ಟರಲ್ಲಿ ಲಕ್ಷಾಂತರ ಮಂದಿ ಶಬರಿಮಲೆಗೆ ಆಗಮಿಸುತ್ತಾರೆ.

ಹೈಡ್ರಾಮಾ:  ಯಾವುದೇ ವಯೋಮಾನದ ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶಿಸಬಹುದು ಎಂಬ ಸುಪ್ರೀಂಕೋರ್ಟಿನ ತೀರ್ಪಿನ ಹಿನ್ನೆಲೆಯಲ್ಲಿ ವಾರ್ಷಿಕ ಯಾತ್ರೆ ವೇಳೆ ಅಯ್ಯಪ್ಪ ದರ್ಶನಕ್ಕೆ 550ಕ್ಕೂ ಅಧಿಕ ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ಅಯ್ಯಪ್ಪ ಅಪ್ಪಟ ಬ್ರಹ್ಮಚಾರಿಯಾಗಿರುವುದರಿಂದ ಋುತುಚಕ್ರದಲ್ಲಿರುವ ಮಹಿಳೆಯರಿಗೆ ದೇಗುಲದ ಸಂಪ್ರದಾಯಕ್ಕೆ ವಿರುದ್ಧವಾಗಿ ಅವಕಾಶ ಕಲ್ಪಿಸಕೂಡದು ಎಂದು ಭಕ್ತಾದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಸುಪ್ರೀಂ ತೀರ್ಪಿನ ಬಳಿಕ ಎರಡು ಬಾರಿ ದೇಗುಲದ ಬಾಗಿಲು ತೆರೆದಿತ್ತಾದರೂ, ಅಯ್ಯಪ್ಪ ಭಕ್ತರ ವಿರೋಧದಿಂದಾಗಿ 10ರಿಂದ 50 ವರ್ಷದೊಳಗಿನ ಯಾವುದೇ ಮಹಿಳೆಯರು ದೇಗುಲ ಪ್ರವೇಶಿಸಲು ಆಗಿರಲಿಲ್ಲ. ಆದರೆ ವಾರ್ಷಿಕ ಯಾತ್ರೆ ಸಂದರ್ಭದಲ್ಲಿ ದೇಗುಲ ಪ್ರವೇಶಿಸುತ್ತೇವೆ ಎಂದು ಮಹಿಳೆಯರು ಹೇಳಿದ್ದರು.

ಅದರಂತೆ, ಶನಿಶಿಂಗಣಾಪುರ ಸೇರಿ ವಿವಿಧ ದೇಗುಲಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ತೊಡೆದು ಹಾಕುವಂತಹ ಹೋರಾಟ ನಡೆಸಿ ಯಶಸ್ವಿಯಾಗಿದ್ದ ಪುಣೆಯ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರು ಆರು ಸಂಗಡಿಗರೊಂದಿಗೆ ಶುಕ್ರವಾರ ಮುಂಜಾನೆ 4.40ಕ್ಕೇ ಕೊಚ್ಚಿ ವಿಮಾನ ನಿಲ್ದಾಣ ತಲುಪಿದರು. ಬಂದಿಳಿಯುತ್ತಿದ್ದಂತೆ ಅವರಿಗೆ ಅಸಹಕಾರ ಎದುರಾಯಿತು. ಯಾವುದೇ ಟ್ಯಾಕ್ಸಿ ಚಾಲಕ ಅವರನ್ನು ವಿಮಾನ ನಿಲ್ದಾಣದಿಂದ ಹೊರಗೆ ಕರೆದೊಯ್ಯಲು ಒಪ್ಪಲಿಲ್ಲ. ಹೋಟೆಲ್‌ಗಳಲ್ಲೂ ಅವರಿಗೆ ಕೊಠಡಿ ಸಿಗಲಿಲ್ಲ. ಇದೇ ವೇಳೆ ಅಯ್ಯಪ್ಪ ಭಕ್ತರು ಹಾಗೂ ಬಿಜೆಪಿ ಕಾರ್ಯಕರ್ತರು ವಿಮಾನ ನಿಲ್ದಾಣದಲ್ಲೇ ‘ಸ್ವಾಮಿಯೇ ಅಯ್ಯಪ್ಪ’ ಎಂಬ ಭಜನೆ ಆರಂಭಿಸಿ, ತೃಪ್ತಿ ವಿರುದ್ಧ ಪ್ರತಿಭಟನೆ ನಡೆಸಿದರು.

ಬೆಳಗ್ಗೆಯಿಂದ ಸಂಜೆವರೆಗೆ ಕಾದರೂ ತೃಪ್ತಿ ಅವರಿಗೆ ವಿಮಾನ ನಿಲ್ದಾಣದಿಂದ ಹೊರಬರಲೂ ಆಗಲಿಲ್ಲ. ಪೊಲೀಸರು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. 200 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರಾದರೂ ಫಲ ನೀಡಲಿಲ್ಲ. ಈ ನಡುವೆ ಯಾತ್ರೆ ಉದ್ದೇಶ ಕೈಬಿಟ್ಟು ಪುಣೆಗೆ ಮರಳುವಂತೆ ಪೊಲೀಸರು ತೃಪ್ತಿಗೆ ಸೂಚಿಸಿದರು. ಆದರೆ ತೃಪ್ತಿ ಮಾತ್ರ ತಾವು ಅಯ್ಯಪ್ಪ ದರ್ಶನ ಪಡೆಯದೇ ವಾಪಸ್‌ ಹೋಗುವುದಿಲ್ಲ ಎಂದು ಹಠ ಹಿಡಿದು ಕುಳಿತರು. ಈ ನಡುವೆ ಸತತ 10 ತಾಸುಗಳಿಗೂ ಹೆಚ್ಚಿನ ಕಾಲ ವಿಮಾನ ನಿಲ್ದಾಣದಲ್ಲೇ ಕುಳಿತಿದ್ದ ತೃಪ್ತಿಗೆ ಸಂಜೆ ವೇಳೆಗೆ ಜಾಗ ಖಾಲಿ ಮಾಡುವಂತೆ ಸೂಚಿಸಲು ವಿಮಾನ ನಿಲ್ದಾಣ ಅಧಿಕಾರಿಗಳು ಸಜ್ಜಾದರು. ಮತ್ತೊಂದೆಡೆ ಪೊಲೀಸರು ಕೂಡಾ ತಮ್ಮ ಒತ್ತಡವನ್ನು ಹೆಚ್ಚಿಸಿದರು. ಈ ಹಿನ್ನೆಲೆಯಲ್ಲಿ ಸಂಜೆ ವೇಳೆಗೆ ಮೆತ್ತಗಾದ ತೃಪ್ತಿ ಮತ್ತು ಅವರ ತಂಡ ಪುಣೆಗೆ ಮರಳುವುದಾಗಿ ಘೋಷಿಸಿ, ರಾತ್ರಿ ವಿಮಾನದಲ್ಲಿ ಮುಂಬೈನತ್ತ ಪ್ರಯಾಣ ಬೆಳೆಸಿತು.

ತೃಪ್ತಿಗೆ ವಕೀಲರ ಬೆಂಬಲ: ಈ ನಡುವೆ ದೇಗುಲ ಪ್ರವೇಶಿಸುವ ತೃಪ್ತಿ ನಿರ್ಧಾರವನ್ನು ಬೆಂಬಲಿಸಿ ಕೇರಳ ಹೈಕೋರ್ಟ್‌ನ ಮಹಿಳಾ ವಕೀಲರ ತಂಡವೊಂದು, ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವುದಾಗಿ ಹೇಳಿದೆ.

ಮತ್ತೆ ಬಂದೇ ಬರುತ್ತೇನೆ

ಶಬರಿಮಲೆಯಲ್ಲಿ ಶಾಂತಿ ಕದಡಲು ನಾನು ಬಯಸುವುದಿಲ್ಲ. ಹೀಗಾಗಿ ಕೇರಳದಿಂದ ವಾಪಸ್‌ ಹೋಗುತ್ತಿದ್ದೇನೆ. ನನಗೆ ಪ್ರತಿಭಟನಾಕಾರರಿಂದ ಬೆದರಿಕೆಗಳು ಬಂದವು. ಸರ್ಕಾರವು ಮಹಿಳಾ ಭಕ್ತರಿಗೆ ರಕ್ಷಣೆ ನೀಡಬೇಕು. ಆದರೆ ಮುಂದೊಂದು ದಿನ ನಾನು ಶಬರಿಮಲೆಗೆ ಭೇಟಿ ನೀಡಿಯೇ ನೀಡುತ್ತೇನೆ. ಮುಂದಿನ ಸಲ ಬಂದಾಗ ಭದ್ರತೆ ನೀಡುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ. ಈ ಬಾರಿ ವಾಪಸು ಹೋಗುವಂತೆ ಕೇಳಿಕೊಂಡಿದ್ದಾರೆ.

- ತೃಪ್ತಿ ದೇಸಾಯಿ, ಮಹಿಳಾ ಹೋರಾಟಗಾರ್ತಿ

click me!