ಶಬರಿಮಲೆಗೆ ಪ್ರವೇಶ: ಕುಂದಾನಗರಿಯ ಕುವರಿ ತೃಪ್ತಿ ದೇಸಾಯಿ!

By Web DeskFirst Published Nov 16, 2018, 4:15 PM IST
Highlights

ಕೇರಳದ ಶಬರಿಮಲೆ ಮತ್ರವಕಲ್ಲ, ದೇಶದ ಹಲವಾರು ದೇಗುಲಗಳಿಗೆ ಮಹಿಳೆಯರಿಗೆ ಪ್ರವೇಶ ಸಿಕ್ಕಿರುವ ವಿಚಾರದಲ್ಲಿ ತೃಪ್ತಿ ದೇಸಾಯಿ ಪಾತ್ರ ಬಹಳ ದೊಡ್ಡದು. ’ಭೂಮಾತ ಬ್ರಿಗೇಡ್’ ಸಂಸ್ಥೆಯ ಕಾರ್ಯಕರ್ತೆ ತೃಪ್ತಿ ದೇಸಾಯಿ ಶಬರಿಮಲೆ ಹೊರತುಪಡಿಸಿ ಹಾಜಿ ಅಲಿ ದರ್ಗಾ, ಮಹಾರಾಷ್ಟ್ರದ ಶನಿ ಶಿಗ್ನಾಪುರ, ನಾಸಿಕ್‌ನ ತ್ರಯಂಬಶ್ವರ, ಕಪಾಲೇಶ್ವರ ಹಾಗೂ ಕೋಲ್ಹಾಪುರ್‌ನ ಮಹಾಲಕ್ಷ್ಮೀ ದೇಗುಲದ ಬಾಗಿಲುಗಳು ಮಹಿಳೆಯರಿಗೆ ತೆರೆದುಕೊಳ್ಳಲು ಬಹಳಷ್ಟು ಸಂಘರ್ಷ ನಡೆಸಿದ್ದಾರೆ. ಹೀಗೆ ಹೋರಾಟದ ಮೂಲಕ ಗುರುತಿಸಿಕೊಂಡ ಈ ಕನ್ನಡತಿಯ ಸಂಪೂರ್ಣ ವಿವರ ಇಲ್ಲಿದೆ

ಕೇರಳದ ಇತಿಹಾಸ ಪ್ರಸಿದ್ಧ ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶಿಸುವ ಅವಕಾಶ ನೀಡಿದ ಸುಪ್ರೀಂ ತೀರ್ಪು ವಿವಾದವನ್ನೇ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಇಂದು ಶುಕ್ರವಾರ ಉತ್ಸವದ ಹಿನ್ನೆಲೆಯಲ್ಲಿ ದೇಗುಲದ ಬಾಗಿಲು ತೆರೆದಿದೆ. ಹೀಗಿರುವಾಗ 'ಭೂಮಾತಾ ಬ್ರಿಗೇಡ್'  ಸಂಸ್ಥಾಪಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅಯ್ಯಪ್ಪನ ದರ್ಶನ ಪಡೆಯಲು ಪುಣೆಯಿಂದ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಈ ಮೊದಲೇ ತೃಪ್ತಿ ದೇಸಾಯಿ ತಾನು ದೇಗುಲ ಪ್ರವೇಶಿಸಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತೇನೆಂದು ಘೋಷಿಸಿದ್ದರು. ಇದರಿಂದ ಆಕ್ರೋಶಿತರಾದ ಅಯ್ಯಪ್ಪ ಭಕ್ತರು ವಿಮಾನ ನಿಲ್ದಾಣದ ಹೊರ ಭಾಗದಲ್ಲಿ ಭಾರೀ ಸಂಖ್ಯೆಯಲ್ಲಿ ನೆರೆದಿದ್ದು, ತೃಪ್ತಿಯವರನ್ನು ತಡೆದಿದ್ದಾರೆ. ಅಲ್ಲದೇ ಏನೇ ಆದರೂ ತೃಪ್ತಿಯವರನ್ನು ದೇಗುಲ ಪ್ರವೇಶಿಸಲು ಬಿಡುವುದಿಲ್ಲ, ಒಂದು ವೇಳೆ ಎಲ್ಲವನ್ನೂ ಮೀರಿ ಅವರು ಶಬರಿಮಲೆಗೆ ಹೋದರೆ ಭಕ್ತರ ಹೆಣಗಳನ್ನು ದಾಟಿ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ

'ಮಲೆ'ಗೆ ಹೊರಟ ತೃಪ್ತಿ ದೇಸಾಯಿ ಕನ್ನಡತಿ!

ಕೇರಳದ ಶಬರಿಮಲೆ ಮಾತ್ರವಲ್ಲ, ದೇಶದ ಹಲವಾರು ದೇಗುಲಗಳಿಗೆ ಮಹಿಳೆಯರಿಗೆ ಪ್ರವೇಶ ಸಿಕ್ಕಿರುವ ವಿಚಾರದಲ್ಲಿ ತೃಪ್ತಿ ದೇಸಾಯಿ ಪಾತ್ರ ಬಹಳ ದೊಡ್ಡದು. 'ಭೂಮಾತ ಬ್ರಿಗೇಡ್' ಸಂಸ್ಥೆಯ ಕಾರ್ಯಕರ್ತೆ ತೃಪ್ತಿ ದೇಸಾಯಿ ಶಬರಿಮಲೆ ಹೊರತುಪಡಿಸಿ ಹಾಜಿ ಅಲಿ ದರ್ಗಾ, ಮಹಾರಾಷ್ಟ್ರದ ಶನಿ ಶಿಗ್ನಾಪುರ, ನಾಸಿಕ್‌ನ ತ್ರಯಂಬಕೇಶ್ವರ, ಕಪಾಲೇಶ್ವರ ಹಾಗೂ ಕೋಲ್ಹಾಪುರ್‌ನ ಮಹಾಲಕ್ಷ್ಮೀ ದೇಗುಲದ ಬಾಗಿಲುಗಳು ಮಹಿಳೆಯರಿಗೆ ತೆರೆದುಕೊಳ್ಳಲು ಬಹಳಷ್ಟು ಸಂಘರ್ಷ ನಡೆಸಿದ್ದಾರೆ.

ಕರ್ನಾಟಕದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನಲ್ಲಿ ಜನಿಸಿದ ಈ ಕನ್ನಡತಿ ತೃಪ್ತಿ ದೇಸಾಯಿ ಪುಣೆಯ ವಿದ್ಯಾ ವಿಕಾಸ್ ವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾರೆ. ಬಳಿಕ ತಮ್ಮ ಎಂಟು ವರ್ಷದ ಪ್ರಾಯದಲ್ಲಿ ಕುಟುಂಬದೊಂದಿಗೆ ಪುಣೆಗೆ ಶಿಫ್ಟ್ ಅದರು. ಮುಂಬೈನ ಎಸ್‌ಎನ್‌ಡಿಟಿ ಮಹಿಳಾ ವಿಶ್ವ ವಿದ್ಯಾನಿಲಯದಲ್ಲಿ ಪದವಿ ವ್ಯಸಂಗಕ್ಕೆ ಸೇರಿದರಾದರೂ, ಕೌಟುಂಬಿಕ ಕಾರಣಗಳಿಂದ ಒಂದೇ ವರ್ಷದಲ್ಲಿ ಕಾಲೇಜು ಬಿಡಬೇಕಾದ ಅನಿವಾರ್ಯತೆ ಬಂದೊದಗಿತು. ಇದಾದ ಬಳಿಕ 'ಕ್ರಾಂತಿವೀರ್ ಜೋಪಡೀ ವಿಕಾಸ್ ಸಂಘ್'ನ ಅಧ್ಯಕ್ಷೆಯಾದರು. ಈ ವೇಳೆ ಅವರು ಕೊಳಗೇರಿ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಚುನಾವಣೆಯಲ್ಲೂ ಸ್ಪರ್ಧಿಸಿದ್ದಾರೆ ತೃಪ್ತಿ

ತೃಪ್ತಿ ದೇಸಾಯಿ ಹೆಚ್ಚು ಜನರಿಗೆ ಚಿರ ಪರಿಚಿತವಾಗಿರಲಿಲ್ಲ. ಆದರೆ 2007ರಲ್ಲಿ 'ಅಜಿತ್ ಕೋ-ಆಪರೇಟಿವ್ ಬ್ಯಾಂಕ್'ನ ಸಂಸ್ಥಾಪಕ ಅಜಿತ್ ಪವಾರ್ ವಿರುದ್ಧ 50 ಕೋಟಿಯ ವಂಚನೆ ಆರೋಪ ಮಾಡಿದಾಗ ದೇಶದಾದ್ಯಂತ ಸದ್ದು ಮಾಡಿದ್ದರು. ಇದಾದ ಬಳಿಕ 2012ರಲ್ಲಿ ನಾಗರಿಕ ಚುನಾವಣೆಯಲ್ಲಿ ಬಾಲಾಜಿ ನಗರ ವಾರ್ಡ್‌ನಿಂದ ಕಾಂಗ್ರೆಸ್ ಪಕ್ಷದ ಪರವಾಗಿ ಕಣಕ್ಕಿಳಿದಿದ್ದರು.

2010ರಲ್ಲಿ ತೃಪ್ತಿ 'ಭೂಮಾತಾ ಬ್ರಿಗೇಡ್' ಆರಂಭಿಸಿದರು. ಇದಾದ ಬಳಿಕ ಅವರು ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರಿಗಿರುವ ನಿಷೇಧದ ವಿರುದ್ಧ ಹೋರಾಡುವವರಾಗಿ ಗುರುತಿಸಿಕೊಂಡಿದ್ದಾರೆ. ಅವರ ಸಂಸ್ಥೆಯ ಪ್ರಧಾನ ಕಚೇರಿ ಮುಂಬೈನಲ್ಲಿದ್ದು, ಅಹಮದಾಬಾದ್, ನಾಸಿಕ್ ಹಾಗೂ ಶೋಲಾಪುರ್‌ನಲ್ಲಿ ಶಾಖೆಗಳನ್ನು ಹೊಂದಿದೆ. 5000ಕ್ಕೂ ಹೆಚ್ಚು ಮಹಿಳೆಯರು ಈ ಸಂಸ್ಥೆಯ ಸದಸ್ಯರಾಗಿದ್ದಾರೆ. 2011ರಲ್ಲಿ ಅವರು ಅಣ್ಣಾ ಹಜಾರೆಯವರ IAC ಅಂದರೆ ಭ್ರಷ್ಟಾಚಾರ ವಿರೋಧಿ ಭಾರತ ಹೋರಾಟದಲ್ಲೂ ಭಾಗವಹಿಸಿದ್ದರು.

ಶಬರಿಮಲೆ: ತೃಪ್ತಿ ದೇಸಾಯಿ v/s ಹಿಂದೂ ಸಂಘಟನೆಗಳು; ವಾದಕ್ಕೆ ವಾದ; ಹಠಕ್ಕೆ ಹಠ

ಅಧ್ಯಾತ್ಮಿಕತೆಯೂ ಇವರಲ್ಲಿದೆ

ಇವರೊಬ್ಬ ಹೋರಾಟಗಾರ್ತಿ ಮಾತ್ರವಲ್ಲ ಬದಲಾಗಿ ಓರ್ವ ಆಧ್ಯಾತ್ಮಿಕ ಸ್ತ್ರೀ ಕೂಡಾ ಹೌದು. ಈ ವಿಚಾರವನ್ನು ಅವರ ಗಂಡ ಪ್ರಶಾಂತ್ ಮಾಧ್ಯಮಗಳೆದುರು ಬಿಚ್ಚಿಟ್ಟಿದ್ದಾರೆ. ತೃಪ್ತಿ ಹಾಗೂ ಅವರ ಇಡೀ ಕುಟುಂಬ ಗಗನಗಿರಿ ಮಹಾರಾಜರ ಶಿಷ್ಯರಾಗಿದ್ದಾರೆ ಹಾಗೂ ಎಲ್ಲಾ ಧಾರ್ಮಿಕ ಆಚರಣೆಗಳನ್ನು ಪಾಲಿಸುತ್ತಾರೆ. ತೃಪ್ತಿ ಗಂಡ ಪ್ರಶಾಂತ್ ಸಂವಹನ ಕಂಪೆನಿ ಏರ್‌ಟೆಲ್‌ನ ಫ್ರಾಂಚೈಸಿ ಹಾಗೂ ಲ್ಯಾಂಡ್ ಲೀಡರ್ ಆಗಿದ್ದಾರೆ.

ತೃಪ್ತಿ ವಿರುದ್ಧ ಕೇಳಿ ಬಂದಿತ್ತು ಆರೋಪ

ಮಹಾರಾಷ್ಟ್ರದ ಶನಿ ಶಿಗ್ನಾಪುರ್ ದೇಗುಲ ಪ್ರವೆಶಕ್ಕೆ ಸಂಬಂಧಿಸಿದಂತೆ ತೃಪ್ತಿ ದೇಸಾಯಿ ನೇತೃತ್ವದ ಆಂದೋಲನ ದೇಶದಾದ್ಯಂತ ಸದ್ದು ಮಾಡಿದ್ದ ಸಂದರ್ಭದಲ್ಲಿ, ಮಹಿಳೆಯರನ್ನು ಕರೆದೊಯ್ಯಲು ಬೇಕಾದ ಹಣ ಎಲ್ಲಿಂದ ಬಂತು ಎಂದು ಅವರಲ್ಲಿ ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿದ್ದ ಅವರು ಕೋಲ್ಹಾಪುರ್‌ನ ಛತ್ರಪತಿ ಗ್ರೂಪ್‌ನಂತಹ ಹಲವಾರು ಸಂಸ್ಥೆಗಳು ತನಗೆ ಸಹಾಯ ಮಾಡುತ್ತವೆ ಎಂದಿದ್ದರು.

ಸಪ್ಟೆಂಬರ್ 2016ರಲ್ಲಿ ಪಾಪ್ಯುಲರ್ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ಭಾಗವಹಿಸಲು ತೃಪ್ತಿಯವರಿಗೆ ಆಮಂತ್ರಣ ನೀಡಲಾಗಿತ್ತು. ಆದರೆ ಈ ಕುರಿತಾಗಿ ಪ್ರತಿಕ್ರಿಯಿಸಿದ್ದ ತೃಪ್ತಿ ದೇಸಾಯಿ 'ನಾನು ಬಿಗ್ ಬಾಸ್‌ ಮನೆಯಲ್ಲಿರಲು ತಯಾರಿದ್ದೇನೆ. ಆದರೆ ಪ್ರತಿಯಾಗಿ ಅವರು ಬಿಗ್ ಬಾಸ್‌ ಶೋಗೆ ಓರ್ವ ಮಹಿಳೆಯ ಧ್ವನಿಯನ್ನು ನೀಡಬೇಕು. ಹೀಗಾದರಷ್ಟೇ ನಾನು ಒಳ ಹೋಗುತ್ತೇನೆ' ಎಂದಿದ್ದರು. ಆದರೆ ಈ ಶೋ ಆರಂಭವಾದಂದಿನಿಂದ ಪುರುಷ ಧ್ವನಿಯಲ್ಲೇ ನಡೆಯುತ್ತಿದೆ ಎಂಬುವುದು ಗಮನಾರ್ಹ. ತೃಪ್ತಿಗೆ ಯೋಗೀರಾಜ್ ದೇಸಾಯಿ ಹೆಸರಿನ ಒಬ್ಬ ಮಗನೂ ಇದ್ದಾನೆ.  

click me!
Last Updated Nov 16, 2018, 5:03 PM IST
click me!