
ಕೇರಳದ ಶಬರಿಮಲೆ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಮತ್ತೆ ವಿವಾದ ಭುಗಿಲೆದ್ದಿದೆ. ಮಂಡಳ ವಿಳಕ್ಕು ಮಹೋತ್ಸವ ಹಿನ್ನೆಲೆಯಲ್ಲಿ ಇಂದು ಸಂಜೆಯಿಂದ ದೇಗುಲದ ಬಾಗಿಲು ತೆರೆಯಲಿದೆ. ಹೀಗಾಗಿ ಭೂಮಾತಾ ಬ್ರಿಗೇಡ್ ಸಂಸ್ಥಾಪಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಆರು ಮಹಿಳೆಯರ ತಂಡದೊಂದಿಗೆ ಅಯ್ಯಪ್ಪನ ದರ್ಶನ ಪಡೆಯಲು ಕೇರಳದ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಇಂದು ಬೆಳಗ್ಗೆ ತಲುಪಿದ್ದಾರೆ. ಆದರೆ ಅಯ್ಯಪ್ಪ ಭಕ್ತರು ತೀವ್ರ ವಿರೋಧ ಪ್ರತಿಭಟನೆ ನಡೆಸುತ್ತಿದ್ದು, ಸದ್ಯ ಕೇರಳ ಸರ್ಕಾರವೇ ದೇಸಾಯಿ ಹಾಗೂ ತಂಡದವರಿಗೆ ಮಹರಾಷ್ಟ್ರಕ್ಕೆ ಹಿಂತಿರುವಂತೆ ಸೂಚಿಸಿದೆ.
ಈ ಮೊದಲೇ ತೃಪ್ತಿ ದೇಸಾಯಿ ತಾನು ಶಬರಿಮಲೆ ದೇಗುಲ ಪ್ರವೇಶಿಸಿ, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುವುದಾಗಿ ಘೋಷಿಸಿದ್ದು ಇದೇ ಕಾರಣದಿಂದ ಇಂದು ಬೆಳಗ್ಗೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ವಿಮಾನ ನಿಲ್ದಾಣಕ್ಕೆ ಅವರು ಬಂದು ಬರೋಬ್ಬರಿ 8 ಗಂಟೆ ಕಳೆದಿದ್ದರೂ ಹೊರ ಹೋಗಲು ಸಾಧ್ಯವಾಗಿಲ್ಲ. ನಿಲ್ದಾಣದ ಹೊರಭಾಗದಲ್ಲಿ ಒಂದೆಡೆ ಭಾರೀ ಸಂಖ್ಯೆಯಲ್ಲಿ ನೆರೆದಿರುವ ಅಯ್ಯಪ್ಪ ಭಕ್ತರು ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ಟ್ಯಾಕ್ಸಿ ಚಾಲಕರೂ ಇವರನ್ನು ಕರೆದೊಯ್ಯಲು ನಿರಾಕರಿಸುತ್ತಿದ್ದಾರೆ. ಅತ್ತ ಹೊಟೇಲ್ ಮಾಲಿಕರೂ ಆಕೆಗೆ ರೂಂ ನೀಡಲು ಒಪ್ಪುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಅವರು ನಿಲ್ದಾಣದಲ್ಲೇ ಉಳಿದುಕೊಳ್ಳಬೇಕಾದ ಅನಿವರ್ಯತೆ ಬಂದೊದಗಿದೆ.
ಇದನ್ನೂ ಓದಿ: ಶಬರಿಮಲೆ: ತೃಪ್ತಿ ದೇಸಾಯಿಗೆ ಏರ್‌ರ್ಪೋರ್ಟ್‌ನಲ್ಲೇ ತಡೆ
ಮಹಾರಾಷ್ಟ್ರಕ್ಕೆ ಮರಳಿ:
ತೃಪ್ತಿ ದೇಸಾಯಿಗೆ ಈ ಮೊದಲೇ ಕೇರಳಕ್ಕೆ ಆಗಮಿಸಿದರೆ ಕೆಟ್ಟ ಪರಿಣಾಮ ಎದುರಿಸಲು ಸಿದ್ಧರಾಗಿ ಎಂಬ ಬೆದರಿಕೆ ಬಂದಿವೆ. ಈ ಹಿನ್ನೆಲೆಯಲ್ಲಿ ತಾನು ಹಿಂತಿರುಗುವವರೆಗೂ ತನಗೆ ಭದ್ರತೆ ನೀಡಬೇಕೆಂದು ತೃಪ್ತಿ ದೇಸಾಯಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರಿಗೆ ಪತ್ರವೊಂದರ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಆದರೀಗ ರಾಜ್ಯದಲ್ಲಿ ಶಾಂತಿ ಕದಡುವ ಆತಂಕದಿಂದ ಕೇರಳ ಸರ್ಕಾರವೂ ತೃಪ್ತಿ ದೇಸಾಯಿಯವರಿಗೆ ಮಹಾರಾಷ್ಟ್ರಕ್ಕೆ ಹಿಂತಿರುಗುವಂತೆ ಸೂಚಿಸಿದೆ.
ಈಗಾಗಲೇ ಶಬರಿಮಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಇಂದು ಸಂಜೆ ಐದು ಗಂಟೆಗೆ ಅಯ್ಯಪ್ಪನ ದೇಗುಲದ ಬಾಗಿಲು ತೆರೆಯಲಿದೆ. ಇವೆಲ್ಲದರ ನಡುವೆ ವಿಮಾನ ನಿಲ್ದಾಣದಲ್ಲಿರುವ ತೃಪ್ತಿ ದೇಸಾಯಿ ಅಯ್ಯಪ್ಪನ ದರ್ಶನ ಪಡೆಯದೆ ಮರಳುವುದಿಲ್ಲ ಎಂದಿದ್ದಾರೆ. ಆದರೆ ಇತ್ತ ಅಯ್ಯಪ್ಪ ಭಕ್ತರೂ ದೇಗುಲದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ತೃಪ್ತಿ ದೇಸಾಯಿಯನ್ನು ವಿಮಾನ ನಿಲ್ದಾಣದಿಂದ ಹೊರ ಬರಲು ಬಿಡುವುದಿಲ್ಲ. 41 ದಿನಗಳವರೆಗೆ ಏರ್‌ಪೋರ್ಟ್‌ನಲ್ಲೇ ತಡೆಯುತ್ತೇವೆಂದಿದ್ದಾರೆ. ಹೀಗಿರುವಾಗ ಮಹಿಳೆಯರು ದೇಗುಲ ಪ್ರವೇಶಿಸಲು ಯಶಸ್ವಿಯಾಗುತ್ತಾರೋ ಅಥವಾ ಹಿಂದಿನಿಂದ ಬಂದ ಪದ್ಧತಿ ಮುಂದುವರೆಯುತ್ತದೋ ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ