
ಬೆಂಗಳೂರು : ಸಚಿವ ಸ್ಥಾನಗಳಿಗೆ ಆಯ್ತು, ಇದೀಗ ನಿಗಮ- ಮಂಡಳಿಗಳ ಹಂಚಿಕೆ ಬಗ್ಗೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹಗ್ಗಜಗ್ಗಾಟ ನಡೆದಿದೆ. ಇದರಿಂದಾಗಿ ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕ ಪ್ರಕ್ರಿಯೆ ವಿಳಂಬವಾಗತೊಡಗಿದೆ. ಮೊದಲ ಹಂತದ ಸಚಿವ ಸಂಪುಟ ವಿಸ್ತರಣೆ ವೇಳೆ ಪ್ರಮುಖ ಖಾತೆಗಳಿಗಾಗಿ ಕ್ಯಾತೆ ತೆಗೆದಿದ್ದ ಉಭಯ ಪಕ್ಷಗಳು ನಿಗಮ-ಮಂಡಳಿಗಳ ಹಂಚಿಕೆಯಲ್ಲೂ ಇದನ್ನು ಮುಂದುವರೆಸಿವೆ.
ಜೆಡಿಎಸ್ ಕೆಲ ಪ್ರಮುಖ ನಿಗಮ-ಮಂಡಳಿಗಳ ಮೇಲೆ ಕಣ್ಣಿಟ್ಟಿದೆ. ಶತಾಯ ಗತಾಯ ತಾನು ಬೇಡಿಕೆ ಇಟ್ಟಿರುವ 2 - 3 ನಿಗಮ- ಮಂಡಳಿಗಳನ್ನು ತನಗೇ ನೀಡಬೇಕು ಎಂದು ಒತ್ತಾಯಿಸಿದೆ. ಇದು ಗೊಂದಲಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಆಯಾ ಖಾತೆಗಳ ಅಡಿಯಲ್ಲಿ ಬರುವ ನಿಗಮ ಮಂಡಳಿಗಳನ್ನು ಆಯಾ ಪಕ್ಷಗಳಿಗೆ ನಿಗದಿಪಡಿಸಬಹುದು ಎಂಬ ಅಭಿಪ್ರಾಯವನ್ನು ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಕ್ತಪಡಿಸಿದ್ದರು.
ಆದರೆ, ಹಾಗಾದಲ್ಲಿ ತಮ್ಮ ಪಕ್ಷಕ್ಕೆ ಪ್ರಮುಖವಲ್ಲದ ನಿಗಮ ಮಂಡಳಿಗಳೇ ಹೆಚ್ಚು ಸಿಗುತ್ತವೆ. ಆ ಚೌಕಟ್ಟು ಹಾಕಿಕೊಳ್ಳದೆ ಹಂಚಿಕೆ ಆಗಬೇಕು ಎಂಬ ಪಟ್ಟನ್ನು ಜೆಡಿಎಸ್ ನಾಯಕರು ಮುಂದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸಂಪುಟ ವಿಸ್ತರ ಶಾಸಕರ ಬಲಾಬಲದ ಆಧಾರದ ಮೇಲೆ ಎರಡೂ ಪಕ್ಷಗಳ ನಡುವೆ ನಿಗಮ-ಮಂಡಳಿಗಳನ್ನು ಹಂಚಿಕೆ ಮಾಡಿಕೊಳ್ಳಲು ಮೊದಲೇ ನಿರ್ಧರಿಸಲಾಗಿದೆ. ಮೂರನೇ ಎರಡು ಭಾಗದಷ್ಟು ನಿಗಮ ಮಂಡಳಿಗಳು ಕಾಂಗ್ರೆಸ್ ಪಾಲಿಗೆ ಮತ್ತು ಮೂರನೇ ಒಂದು ಭಾಗದಷ್ಟು ನಿಗಮ ಮಂಡಳಿಗಳು ಜೆಡಿಎಸ್‌ಗೆ ಎಂಬುದನ್ನು ಅಖೈರುಗೊಳಿಸಲಾಗಿದೆ.
ಮೊದಲ ಹಂತದಲ್ಲಿ ಪ್ರಮುಖ ನಿಗಮ ಮಂಡಳಿಗಳ ಪೈಕಿ ಕಾಂಗ್ರೆಸ್‌ನಿಂದ 20 ಹಾಗೂ ಜೆಡಿಎಸ್‌ನಿಂದ 10 ಸ್ಥಾನಗಳಿಗೆ ನೇಮಕ ಮಾಡುವ ಬಗ್ಗೆಯೂ ತೀರ್ಮಾನವಾಗಿದೆ. ಆದರೆ, ಯಾವ ಪಕ್ಷಕ್ಕೆ ಯಾವ ನಿಗಮ ಮಂಡಳಿಗಳು ಎಂಬ ವಿಷಯ ಕಗ್ಗಂಟಾಗಿ ಪರಿಣಮಿಸಿದೆ. ಹೀಗಾಗಿ ಬಜೆಟ್ ಅಧಿವೇಶನ ಮುಗಿದ ತಕ್ಷಣ ನಿಗಮ-ಮಂಡಳಿಗಳ ನೇಮಕ ಮಾಡಬೇಕು ಎಂಬ ಕಾಂಗ್ರೆಸ್ ಪ್ರಯತ್ನಕ್ಕೆ ಹಿನ್ನಡೆ ಉಂಟಾಗಿದ್ದು, ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಹೆಚ್ಚಿಸಿದೆ ಎಂದು ತಿಳಿದು ಬಂದಿದೆ. ಪ್ರಸಕ್ತ ಬಜೆಟ್ ಅಧಿವೇಶನ ಮುಗಿದ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮತ್ತೊಮ್ಮೆ ಸಭೆ ಸೇರಿ ನಿಗಮ ಮಂಡಳಿಗಳ ಹಂಚಿಕೆಯಲ್ಲಿ ಉಂಟಾಗಿರುವ ಗೊಂದಲ ನಿವಾರಿಸಿಕೊಳ್ಳುವ ಸಂಭವವಿದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.