
ಬೆಂಗಳೂರು[ಮೇ.03]: ಮಂಡ್ಯ ಅಭಿವೃದ್ಧಿ ಪ್ರಾಧಿಕಾರ (ಮೂಡಾ)ದ ನಿವೇಶನ ಹಂಚಿಕೆಯಲ್ಲಿ 300 ಕೋಟಿ ರು. ಭ್ರಷ್ಟಾಚಾರ ಹಾಗೂ ಬಿಬಿಎಂಪಿಯ 2 ಸಾವಿರ ಕೋಟಿ ರು. ಆದಾಯ ಸೋರಿಕೆ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದ ನಂತರ 27 ಬಾರಿ ವರ್ಗಾವಣೆಗೆ ಗುರಿಯಾಗಿರುವ ಹಾಗೂ 2014ರಿಂದ ಸಂಬಳ, ಭತ್ಯೆ ಹಾಗೂ ಬಡ್ತಿಯಿಂದ ವಂಚಿತರಾಗಿರುವ ಸಕಾಲ ಆಡಳಿತಾಧಿಕಾರಿ ಕೆ. ಮಥಾಯಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮೊರೆ ಹೋಗಿದ್ದಾರೆ. ಆದರೂ, ಅವರಿಗೆ ಮುಕ್ತಿ ದೊರಕುವ ಲಕ್ಷಣಗಳಿಲ್ಲ.
ಕೆ.ಮಥಾಯಿ 2014ರಲ್ಲಿ ಮೂಡಾ ಆಯುಕ್ತರಾಗಿದ್ದಾಗ ಮಂಡ್ಯದ ವಿವೇಕಾನಂದ ಲೇಔಟ್ ನಿರ್ಮಾಣ ಮತ್ತು ನಿವೇಶನ ಹಂಚಿಕೆಯಲ್ಲಿ 300 ಕೋಟಿ ರು. ಭ್ರಷ್ಟಾಚಾರ ನಡೆದಿದೆ ಎಂದು ರಾಜ್ಯ ಸರ್ಕಾರಕ್ಕೆ 360 ಪುಟಗಳ ವರದಿ ಸಲ್ಲಿಕೆ ಮಾಡಿದ್ದರು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಸಿಬಿಐ ತನಿಖೆ ಕೈಗೊಂಡು ಹಾಲಿ ಸಚಿವ ಸಿ.ಎಸ್.ಪುಟ್ಟರಾಜು ಸೇರಿದಂತೆ ಹಲವು ರಾಜಕಾರಣಿಗಳು ಮತ್ತು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ.
ಮಥಾಯಿ ಅವರು ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ನಂತರ ಸತತವಾಗಿ ವರ್ಗಾವಣೆ ‘ಶಿಕ್ಷೆ’ಗೆ ಸಿಲುಕಿದರು. ಜತೆಗೆ, ಸಂಬಳ, ಭತ್ಯೆ ಹಾಗೂ ಬಡ್ತಿಯಿಂದಲೂ ವಂಚಿತರಾಗಿದ್ದರು. ಕೆಲ ಹಿರಿಯ ಐಎಎಸ್ ಅಧಿಕಾರಿಗಳಿಂದಾಗಿ ತಾವು ಇಂತಹ ಸ್ಥಿತಿ ಎದುರಿಸುತ್ತಿರುವ ಬಗ್ಗೆ ಮಥಾಯಿ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದು, ನೆರವಿಗಾಗಿ ಕೋರಿದ್ದಾರೆ. ಆದರೆ, ಈ ಬಗ್ಗೆ ಮುಖ್ಯಮಂತ್ರಿಯಿಂದಾಗಲಿ ಅಥವಾ ಅವರ ಕಚೇರಿಯಿಂದಾಗಲಿ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ.
ಏನಿದು ಹಗರಣ?:
ಮಂಡ್ಯದಲ್ಲಿ ಕೆರೆಯೊಂದನ್ನು ಒತ್ತುವರಿ ಮಾಡಿ ವಿವೇಕಾನಂದ ಲೇಔಟ್ ನಿರ್ಮಾಣ ಮಾಡಿದ ಮೂಡಾ, ಈ ಪ್ರದೇಶದಲ್ಲಿ ಸರ್ಕಾರಿ ಬೆಲೆ ಪ್ರತಿ ಚದರಡಿಗೆ 2 ಸಾವಿರ ರು. ಇದ್ದರೂ ಕೇವಲ 60 ರು.ಗೆ ನಿವೇಶನ ಮಾರಾಟ ಮಾಡಿತ್ತು. ಅಲ್ಲದೇ ನಗರಸಭೆ ನಿವೇಶನ ಹಂಚಿಕೆ ಮಾಡುವಾಗ ಅನುಸರಿಸಬೇಕಾದ ಯಾವುದೇ ನಿಯಮ ಪಾಲನೆ ಮಾಡದೇ ಬೇಕಾದವರಿಗೆ ನಿವೇಶನ ಹಂಚಿಕೆ ಮಾಡಿತ್ತು. 2014ರಲ್ಲಿ ಮೂಡಾ ಆಯುಕ್ತರಾಗಿದ್ದ ಕೆ.ಮಥಾಯಿ ಅವರು ಈ ಪ್ರಕರಣದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಅಲ್ಲದೇ, ಹಗರಣಕ್ಕೆ ಕಾರಣವಾದ ಮೂಡಾದ ಹಿಂದಿನ ಎಲ್ಲ 14 ಆಯುಕ್ತರ ವಿರುದ್ಧ ಆರೋಪ ಮಾಡಿದ್ದರು. ವರದಿ ಸಲ್ಲಿಸಿದ ನಾಲ್ಕು ತಿಂಗಳಲ್ಲಿ ಮಥಾಯಿ ಅವರನ್ನು ಆರು ಬಾರಿ ವರ್ಗಾವಣೆ ಮಾಡಲಾಗಿತ್ತು. (ನಂತರ ಸತತವಾಗಿ ಅವರ ವರ್ಗಾವಣೆ ಮುಂದುವರೆದಿದ್ದು, ಇದುವರೆಗೂ 27 ಬಾರಿ ವರ್ಗಾವಣೆ ಮಾಡಲಾಗಿದೆ.)
ಬಳಿಕ ಬಿಬಿಎಂಪಿಯ ಜಾಹೀರಾತು ವಿಭಾಗದ ಸಹಾಯಕ ಆಯುಕ್ತರಾಗಿದ್ದ ಅವಧಿಯಲ್ಲಿ ಸುಮಾರು 2 ಸಾವಿರ ಕೋಟಿ ರು. ಆದಾಯ ಸೋರಿಕೆ ಪತ್ತೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡು ಸಿಬಿಐ ತನಿಖೆಗೆ ವಹಿಸಿತ್ತು. ನಂತರ ಬಿಬಿಎಂಪಿಯಿಂದ ಸಕಾಲ ಇಲಾಖೆಗೆ ವರ್ಗಾವಣೆ ಮಾಡಿತ್ತು. ಆಗ ಸಕಾಲದಲ್ಲೂ ಅವ್ಯವಸ್ಥೆ ಆರಂಭವಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದರು.
ಮಥಾಯಿ ಅವರು, ಕಳೆದ ಐದು ವರ್ಷದಿಂದ ಹಿರಿಯ ಅಧಿಕಾರಿಗಳಿಂದ ಉಂಟಾದ ಕಿರುಕುಳದ ಬಗ್ಗೆ ಮುಖ್ಯ ಕಾರ್ಯದರ್ಶಿಗಳಿಗೆ, ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಪರಿಹಾರ ದೊರೆತಿಲ್ಲ. ಹಾಗಾಗಿ, ಮುಖ್ಯಮಂತ್ರಿಗಳ ಭೇಟಿಗೆ ಮನವಿ ಮಾಡಿ ಏ.23ರಂದು ಪತ್ರ ಬರೆದಿದ್ದಾರೆ. ಆದರೆ, ಮುಖ್ಯಮಂತ್ರಿ ಕಚೇರಿಯಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ ಎಂದು ಗೊತ್ತಾಗಿದೆ.
ಕಳೆದ ಹತ್ತು ವರ್ಷದಲ್ಲಿ ಒಟ್ಟು 27 ವರ್ಗಾವಣೆ ಆಗಿರುವುದಕ್ಕೆ ಬೇಸರವಿಲ್ಲ. ಆದರೆ, ನಾಲ್ಕು ವರ್ಷದಿಂದ ಇಲಾಖಾ ವಿಚಾರಣೆ ನಡೆಸದೆ ವೇತನ, ಭತ್ಯೆ ಹಾಗೂ ಬಡ್ತಿ ತಡೆ ಹಿಡಿದು ಕಿರುಕುಳ ನೀಡಲಾಗುತ್ತಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಎಲ್ಲರಿಗೂ ದೂರು ನೀಡಿದ್ದೇನೆ. ಆದರೂ ಪ್ರಯೋಜವಾಗಿಲ್ಲ. ಹಾಗಾಗಿ ಮುಖ್ಯಮಂತ್ರಿ ಅವರಿಗೆ ನ್ಯಾಯ ಕೊಡಿಸುವಂತೆ ಪತ್ರ ಬರೆದಿದ್ದೇನೆ. ಕುಮಾರಸ್ವಾಮಿ ಅವರು ಸೂಕ್ತ ತನಿಖೆ ನಡೆಸಿ ಪರಿಹಾರ ಕೊಡಿಸಲಿದ್ದಾರೆ ಎಂಬ ವಿಶ್ವಾಸವಿದೆ.
- ಕೆ.ಮಥಾಯಿ, ಆಡಳಿತಾಧಿಕಾರಿ, ಸಕಾಲ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.