ಪ್ರವಾಸಕ್ಕೆ ಬಂದಿದ್ದ ಯುವಕ ಎಚ್ಚರಿಕೆಯ ಮಾತು ಕೇಳದೆ ಪ್ರಾಣ ಕಳೆದುಕೊಂಡಿದ್ದಾರೆ. ಮಲ್ಪೆಯಲ್ಲಿ ಅವಘಡ ನಡೆದಿದೆ.
ಉಡುಪಿ[ಮಾ. 19] ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಹಳೆವಿದ್ಯಾರ್ಥಿಯೊಬ್ಬ ಮಲ್ಪೆ ಸಮೀಪದ ತೊಟ್ಟಂ ಬೀಚಿನಲ್ಲಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಇತರ 3 ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ. ಮೃತ ವಿದ್ಯಾರ್ಥಿ ಕೀರ್ತನ್ ಸಿಂಹ (22), ಈತ ಮೂಲತಃ ತುಮಕೂರು ಜಿಲ್ಲೆಯ ತಿಪಟೂರಿನ ನರಸಿಂಹ ಎಂಬವರ ಮಗ ಎಂದು ಹೇಳಲಾಗಿದೆ.
ಸುಮಾರು 30 ವಿದ್ಯಾರ್ಥಿಗಳು ಬಸ್ಸೊಂದರಲ್ಲಿ ಮಂಗಳವಾರ ಬೆಳಿಗ್ಗೆ ಉಡುಪಿಗೆ ಆಗಮಿಸಿದ್ದರು. ಬೆಳಿಗ್ಗೆ ಕೃಷ್ಣ ಮಠಕ್ಕೆ ಭೇಟಿ ನೀಡಿ, ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಲ್ಪೆ ಸಮುದ್ರ ತೀರಕ್ಕೆ ಆಗಮಿಸಿದ್ದರು.
undefined
ಅಲ್ಲಿ ಎಲ್ಲಾ ವಿದ್ಯಾರ್ಥಿಗಳು ನೀರಿಗಿಳಿದು ಆಟವಾಡುತ್ತಿದ್ದರು. ಸಮುದ್ರದಲ್ಲಿ ಭಾರೀ ಅಲೆಗಳಿದ್ದುದರಿಂದ ಬೀಚಿನ ಕಾವಲು ಜೀವ ರಕ್ಷಕರು ನೀರಿನಲ್ಲಿ ತುಂಬಾ ಆಳಕ್ಕೆ ಇಳಿಯದಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದರು. ಆದರೂ ವಿದ್ಯಾರ್ಥಿಗಳು ಅವರ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ನಂತರ 4 ಮಂದಿ ವಿದ್ಯಾರ್ಥಿಗಳು ಸಮುದ್ರ ದಂಡೆಯ ಮೇಲೆ ನಡೆದುಕೊಂಡು ಪಕ್ಕದ ತೊಟ್ಟಂ ಬೀಚಿಗೆ ಹೋಗಿ ಅಲ್ಲಿಯೂ ನೀರಾಟವಾಡತೊಡಗಿದರು. ಸ್ವಲ್ಪ ಹೊತ್ತಿನಲ್ಲಿಯೇ ಭಾರಿ ಅಲೆಗೆ ಸಿಲುಕಿದ ವಿದ್ಯಾರ್ಥಿಗಳು ನೀರಲ್ಲಿ ಕೊಚ್ಚಿಕೊಂಡು ಹೋದರು. ಅದನ್ನು ಗಮನಿಸಿದ ರಕ್ಷಕರು ಧಾವಿಸಿ ಎಲ್ಲರನ್ನೂ ಮೇಲಕ್ಕೆ ತಂದರು ಮತ್ತು ತೀವ್ರ ಅಸ್ವಸ್ಥರಾಗಿ ಮಾತನಾಡದ ಸ್ಥಿತಿಯಲ್ಲಿದ್ದ ಅವರನ್ನು ಉಡುಪಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಅದರೇ ಕೀರ್ತನ್ ಮಾತ್ರ ಅಷ್ಟರಲ್ಲಿ ಮೃತಪಟ್ಟಿದ್ದ. ಇತರರು ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ.
ಕೀರ್ತನ್ ಕಳೆ ಸೆಮಿಸ್ಟರ್ ನಲ್ಲಿಯೇ ಇಂಜಿನಿಯರಿಂಗ್ ಮುಗಿಸಿದ್ದು, ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ. ಆತ ತನ್ನ ಕೆಲವು ಸಹಪಾಠಿಗಳು ಮತ್ತು ಜ್ಯೂನಿಯರ್ ವಿದ್ಯಾರ್ಥಿಗಳೊಂದಿಗೆ ಪ್ರವಾಸಕ್ಕೆ ಬಂದಿದ್ದ. ಆತನ ಹೆತ್ತವರಿಗೆ ಮಾಹಿತಿ ನೀಡಲಾಗಿದೆ ಎಂದು ಮಲ್ಪೆ ಪೊಲೀಸರು ತಿಳಿಸಿದ್ದಾರೆ.