ಡಿಎಲ್, ಆರ್'ಸಿ, ಎಮಿಶನ್ ಇನ್ನು ಆ್ಯಪ್‌'ನಲ್ಲೇ ಲಭ್ಯ

By Suvarna Web DeskFirst Published Feb 7, 2018, 9:25 AM IST
Highlights

ಸಾರಿಗೆ ಇಲಾಖೆ ಫೆ.1ರಿಂದ ಅಧಿಸೂಚನೆ ಹೊರಡಿಸುವ ಮುಖಾಂತರ ‘ಡಿಜಿ ಲಾಕರ್ ಆ್ಯಪ್’ಗೆ ರಾಜ್ಯದಲ್ಲಿ ಅಧಿಕೃತ ಮಾನ್ಯತೆ ನೀಡಿದೆ. ಹಾಗಾಗಿ ಮೊಬೈಲ್‌'ನಲ್ಲೇ ಈ ದಾಖಲೆಗಳನ್ನು ತೋರಿಸಬಹುದು.

ಬೆಂಗಳೂರು(ಫೆ.07): ಇನ್ನು ಮುಂದೆ ರಾಜ್ಯದಲ್ಲಿ ಪೊಲೀಸರು ಹಾಗೂ ಸಾರಿಗೆ ಇಲಾಖೆ ತನಿಖಾಧಿಕಾರಿಗಳು ವಾಹನ ತಡೆದು ಡಿಎಲ್, ಆರ್‌'ಸಿ, ವಾಯುಮಾಲಿನ್ಯ ಪ್ರಮಾಣ ಪತ್ರ ತೋರಿಸುವಂತೆ ಕೇಳಿದರೆ ಆತಂಕಪಡುವ ಅಗತ್ಯವಿಲ್ಲ. ಏಕೆಂದರೆ, ಸಾರಿಗೆ ಇಲಾಖೆ ಫೆ.1ರಿಂದ ಅಧಿಸೂಚನೆ ಹೊರಡಿಸುವ ಮುಖಾಂತರ ‘ಡಿಜಿ ಲಾಕರ್ ಆ್ಯಪ್’ಗೆ ರಾಜ್ಯದಲ್ಲಿ ಅಧಿಕೃತ ಮಾನ್ಯತೆ ನೀಡಿದೆ. ಹಾಗಾಗಿ ಮೊಬೈಲ್‌'ನಲ್ಲೇ ಈ ದಾಖಲೆಗಳನ್ನು ತೋರಿಸಬಹುದು.

ಡಿಜಿ ಲಾಕರ್‌ನಲ್ಲಿ ಲಭ್ಯವಾಗುವ ದಾಖಲೆಗಳು ಸಾರಿಗೆ ಇಲಾಖೆ ನೀಡುವ ಸ್ಮಾರ್ಟ್ ಕಾರ್ಡ್ ಅಥವಾ ಕಾಗದ ರೂಪದ ದಾಖಲೆಗಳಿಗೆ ಸಮಾನ. ಪ್ರಸ್ತುತ ಇಲಾಖೆಯು ಡಿಜಿ ಲಾಕರ್ ಆ್ಯಪ್‌'ನಲ್ಲಿ ಚಾಲನಾ ಪರವಾನಗಿ ಪತ್ರ (ಡಿಎಲ್), ನೋಂದಣಿ ಪತ್ರ (ಆರ್‌ಸಿ), ವಾಯು ಮಾಲಿನ್ಯ (ಎಮಿಶನ್) ಪ್ರಮಾಣ ಪತ್ರಗಳನ್ನು ಡಿಜಿಟೆಲ್ ರೂಪದಲ್ಲಿ ನೀಡಿದೆ. ಈ ಡಿಜಿ ಲಾಕರ್ ವ್ಯವಸ್ಥೆಗೆ ಆಧಾರ್ ಮತ್ತು ಇಲಾಖೆಯ ಡೇಟಾಬೇಸ್‌'ಗೆ ಸಂಪರ್ಕ ಕಲ್ಪಿಸಿರುವುದರಿಂದ ಈ ಮೂರು ದಾಖಲೆಗಳನ್ನು ಡಿಜಿ ಲಾಕರ್ ಆ್ಯಪ್‌'ಗೆ ಸೇರ್ಪಡೆ ಮಾಡಬಹುದು.

ಡ್ರಿಂಕ್ ಆ್ಯಂಡ್ ಡ್ರೈವ್‌'ಗೆ ಅನ್ವಯ ಇಲ್ಲ: ಡ್ರಿಂಕ್ ಅಂಡ್ ಡ್ರೈವ್, ನಿರ್ಲಕ್ಷ್ಯದ ಚಾಲನೆ ಮೊದಲಾದ ಪ್ರಕರಣಗಳಲ್ಲಿ ಸಂಚಾರ ಪೊಲೀಸರು ಚಾಲಕನ ಡಿಎಲ್ ಮತ್ತು ನೋಂದಣಿ ಪತ್ರವನ್ನು ಜಪ್ತಿ ಮಾಡಿ, ಅಮಾನತಿಗೆ ಶಿಫಾರಸು ಮಾಡುವಾಗ ಮೂಲ ದಾಖಲೆಗಳನ್ನೇ ನೀಡಬೇಕು. ಇಂತಹ ಪ್ರಕರಣಗಳಲ್ಲಿ ಡಿಜಿ ಲಾಕರ್ ದಾಖಲೆಗಳಿಗೆ ಮಾನ್ಯತೆ ಇರುವುದಿಲ್ಲ. ಕೇಂದ್ರ ಸರ್ಕಾರ ಕಳೆದ ಎರಡು ವರ್ಷದ ಹಿಂದೆಯೇ ಡಿಜಿ ಲಾಕರ್ ಆ್ಯಪ್ ಪರಿಚಯಿಸಿದ್ದು, ಆ್ಯಪ್‌ನಲ್ಲಿ ಡಿಎಲ್ ಹಾಗೂ ಆರ್‌'ಸಿ ಲಭ್ಯವಾಗುತ್ತಿತ್ತು. ಆದರೆ, ಸಂಚಾರಿ ಪೊಲೀಸರು ತಪಾಸಣೆ ವೇಳೆ ಈ ದಾಖಲೆಗಳನ್ನು ಮಾನ್ಯ ಮಾಡುತ್ತಿರಲಿಲ್ಲ ಎಂದು ಹೇಳಿದರು.

ಡಿಜಿ ಲಾಕರ್ ಬಳಕೆ ಹೇಗೆ?

ಗೂಗಲ್ ಪ್ಲೇ ಸ್ಟೋರ್‌'ನಲ್ಲಿ ಡಿಜಿ ಲಾಕರ್ ಆ್ಯಪ್ ಡೌನ್‌ಲೋಡ್ ಮಾಡಬೇಕು. ಬಳಿಕ ಸೈನ್ ಅಪ್ ಆಯ್ಕೆ ಒತ್ತಿ, ಯೂಸರ್ ನೇಮ್ ಮತ್ತು ಪಾಸ್‌'ವರ್ಡ್ ತುಂಬಬೇಕು. ಅಂತೆಯೆ ಆಧಾರ್ ಸಂಖ್ಯೆ ನಮೂದಿಸಬೇಕು. ನಂತರ ಇಷ್ಯೂಡ್ ಡಾಕ್ಯುಮೆಂಟ್ ಆಯ್ಕೆ ಬರುತ್ತದೆ. ಅಲ್ಲಿ ಸರ್ಚ್‌'ನಲ್ಲಿ ಸಾರಿಗೆ ಇಲಾಖೆ-ಕರ್ನಾಟಕ ಸರ್ಕಾರ ಆಯ್ಕೆ ಮಾಡಬೇಕು. ಬಳಿಕ ಡಿಎಲ್ ಸಂಖ್ಯೆ, ಆರ್‌'ಸಿ ನೋಂದಣಿ ಸಂಖ್ಯೆ, ಚಾಸಿ ಸಂಖ್ಯೆ ನಮೂದಿಸಬೇಕು. ಡಿಜಿಟಲ್ ವಾಯು ಮಾಲಿನ್ಯ ಪ್ರಮಾಣ ಪತ್ರ ಪಡೆಯಲು ವಾಹನ ಸಂಖ್ಯೆ ನಮೂದಿಸಬೇಕು.

click me!