ಕೇಂದ್ರ ಸಚಿವಗೆ ಎದುರಾಯ್ತು ಭಾರೀ ಲಂಚ ಕಳಂಕ

By Web DeskFirst Published Nov 20, 2018, 10:33 AM IST
Highlights

ಕೇಂದ್ರ ಸಚಿವರ ವಿರುದ್ಧ ಇದೀಗ ಭಾರೀ ಲಂಚಾರೋಪ ಕೇಳಿ ಬಂದಿದೆ. ಕೇಂದ್ರ ಸಚಿವರೊಬ್ಬರು ಲಂಚ ಸ್ವೀಕರಿಸಿದ ಮಾಹಿತಿ ತಿಳಿದುಬಂದಿತ್ತು. ಅದಕ್ಕೆಂದೇ ಉದ್ದೇಶಪೂರ್ವಕವಾಗಿ ತಮ್ಮನ್ನು ಏಕಾಏಕಿ ನಾಗಪುರಕ್ಕೆ ವರ್ಗಾಯಿಸಲಾಗಿದೆ ಎಂದು ಆರೋಪಿಸಿ ತನಿಖಾ ದಳದ ಹಿರಿಯ ಅಧಿಕಾರಿ ಮನೀಶ್‌ ಕುಮಾರ್‌ ಸಿನ್ಹಾ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

ನವದೆಹಲಿ: ಸಿಬಿಐ ಆಂತರಿಕ ಕಲಹ ಇಷ್ಟಕ್ಕೇ ನಿಲ್ಲುವಂತೆ ಕಾಣುತ್ತಿಲ್ಲ. ಸಿಬಿಐ ಜಂಟಿ ನಿರ್ದೇಶಕ ರಾಕೇಶ್‌ ಅಸ್ಥಾನಾ ಮೇಲಿನ ಭ್ರಷ್ಟಾಚಾರ ಆರೋಪದ ತನಿಖೆ ನಡೆಸುತ್ತಿದ್ದ ತಮಗೆ ಕೇಂದ್ರ ಸಚಿವರೊಬ್ಬರು ಲಂಚ ಸ್ವೀಕರಿಸಿದ ಮಾಹಿತಿ ತಿಳಿದುಬಂದಿತ್ತು. ಅದಕ್ಕೆಂದೇ ಉದ್ದೇಶಪೂರ್ವಕವಾಗಿ ತಮ್ಮನ್ನು ಏಕಾಏಕಿ ನಾಗಪುರಕ್ಕೆ ವರ್ಗಾಯಿಸಲಾಗಿದೆ ಎಂದು ಆರೋಪಿಸಿ ತನಿಖಾ ದಳದ ಹಿರಿಯ ಅಧಿಕಾರಿ ಮನೀಶ್‌ ಕುಮಾರ್‌ ಸಿನ್ಹಾ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಇದರ ವಿಚಾರಣೆ ಮಂಗಳವಾರ ನಡೆಯಲಿದೆ.

‘ಮಾಂಸದ ಉದ್ಯಮಿ ಮೊಯಿನ್‌ ಖುರೇಷಿ ಮೇಲಿನ ಸಿಬಿಐ ಪ್ರಕರಣದಲ್ಲಿ ಮುಚ್ಚಿ ಹಾಕಿಸಲು ಕೇಂದ್ರ ಸರ್ಕಾರದಲ್ಲಿನ ಕಲ್ಲಿದ್ದಲು ಖಾತೆ ರಾಜ್ಯ ಸಚಿವ, ಹರಿಭಾಯಿ ಪಾರ್ಥಿಭಾಯಿ ಚೌಧರಿ ಅವರು ಕೋಟಿಗಟ್ಟಲೆ ಲಂಚ ಪಡೆದಿದ್ದರು. ಸಿಬಿಐನ ಮಾತೃ ಇಲಾಖೆಯಾಗಿರುವ ಸಿಬ್ಬಂದಿ ಸಚಿವಾಲಯದ ಮೂಲಕ ತನಿಖಾ ತಂಡದ ಮೇಲೆ ಒತ್ತಡ ಹೇರಿಸಿದ್ದರು. ಖುರೇಷಿ ಆಪ್ತ ಸತೀಶ್‌ ಸನಾ ವಿಚಾರಣೆಯಲ್ಲಿ ಇದು ಗೊತ್ತಾಗಿತ್ತು. ಬಳಿಕ ನ.24ರಂದು ಏಕಾಏಕಿ ತಮ್ಮನ್ನು ನಾಗಪುರಕ್ಕೆ ಎತ್ತಂಗಡಿ ಮಾಡಲಾಯಿತು’ ಎಂಬ ಗಂಭೀರ ಆರೋಪವನ್ನು ಅರ್ಜಿಯಲ್ಲಿ ಸಿನ್ಹಾ ಮಾಡಿದ್ದಾರೆ.

ಖುರೇಷಿ ಪ್ರಕರಣ ತಿಳಿಗೊಳಿಸುವ ಉದ್ದೇಶದಿಂದ ಆತನ ಆಪ್ತ ಸತೀಶ್‌ ಸನಾ ಎಂಬುವನಿಂದ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಆಸ್ಥಾನಾ 2 ಕೋಟಿ ರು. ಲಂಚ ಸ್ವೀಕರಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈಗ ಈ ಪ್ರಕರಣದಲ್ಲಿ ಗುಜರಾತ್‌ ಮೂಲದವರಾದ ಸಚಿವ ಚೌಧರಿ ತಳುಕು ಹಾಕಿಕೊಂಡಿದ್ದು ಪ್ರಕರಣಕ್ಕೆ ತಿರುವು ಸಿಕ್ಕಂತಾಗಿದೆ.

ದೋವಲ್‌ ಮೇಲೂ ಆರೋಪ:  ಇನ್ನೊಂದೆಡೆ, ಅಸ್ಥಾನಾ ವಿರುದ್ಧದ 2 ಕೋಟಿ ರು. ಲಂಚ ಸ್ವೀಕಾರ ಪ್ರಕರಣದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಮಧ್ಯಪ್ರವೇಶ ಮಾಡಿ, ದಾಳಿಗಳನ್ನು ತಡೆದರು. ಪ್ರಕರಣದಲ್ಲಿನ ಇಬ್ಬರು ಮಧ್ಯವರ್ತಿಗಳು ದೋವಲ್‌ ಆಪ್ತರು ಎಂದೂ ಸಿನ್ಹಾ ಆಪಾದಿಸಿದ್ದು, ಇದನ್ನು ಸುಪ್ರೀಂ ಕೋರ್ಟ್‌ ಗಮನಕ್ಕೆ ತಂದಿದ್ದಾರೆ.

‘ನನ್ನ ಈ ಆರೋಪಗಳನ್ನು ಕೇಳಿದರೆ ಬೆಚ್ಚಿ ಬೀಳುತ್ತೀರಿ. ಇದಕ್ಕೆಂದೇ ನನ್ನನ್ನು ನಾಗಪುರಕ್ಕೆ ನ.24ರಂದು ಅಸ್ಥಾನಾ ಕೇಸಿನಿಂದ ವಿಮೋಚನೆಗೊಳಿಸಿ ವರ್ಗಾಯಿಸಲಾಗಿದೆ. ನನ್ನ ಅರ್ಜಿಯ ತುರ್ತು ವಿಚಾರಣೆ ನಡೆಸಿ’ ಎಂದು ಸಿನ್ಹಾ ಈ ವೇಳೆ ನ್ಯಾಯಪೀಠವನ್ನು ಕೋರಿದರು. ‘ಆದರೆ ನಾವು ಯಾವುದಕ್ಕೂ ಬೆಚ್ಚಿಬೀಳಲ್ಲ’ ಎಂದು ಚಟಾಕಿ ಹಾರಿಸಿದ ಮುಖ್ಯ ನ್ಯಾಯಾಧೀಶ ನ್ಯಾ

ರಂಜನ್‌ ಗೊಗೋಯ್‌ ಅವರು ಮಂಗಳವಾರ ವಿಚಾರಣೆ ನಡೆಸಲು ನಿರ್ಧರಿಸಿದರು.

click me!